ಋತುಗಾನ ಪ್ರಶ್ನೆಯಾಗಿಯೇ ಉಳಿದ ಅವಳ ಆಂತರ್ಯದ ಭಾವಗಳ ಬೆಸುಗೆಯು ಅವಳಿಗರಿವಿಲ್ಲದೆಯೇ ಕಳೆದ ದಿನಗಳ ಎಣಿಕೆಯೊಳಗೆ ಕುಸಿದು ಹೋದ ಬದುಕು ಅವಳೊಳಗಿನ ನೋವನ್ನ ಮರೆಮಾಚಿ ಕಾಣದ ಸುಳಿಯತ್ತ ಸೆಳೆಯುತಿಹ ಪಯಣದ ಪದಗಳ ಜೋಡಣೆ ಈ ಬರಹ.... ಅವಳು ಬಾಲ್ಯವ ಬಯಸಿದವಳು, ತಾನೇ ಚೆಂದ ಎಂದು ಕುಣಿದಾಡಿದವಳು. ಬೆಳೆದಾಗ ಬದುಕು ಚಿಂತೆ ಎಂದು ನೊಂದವಳು. ಅವಳಿಗರಿವಿಲ್ಲದೆಯೇ ನೆನಪಾಗಿ ಉಳಿವಂತೆ ಕಳೆದು ಹೋದದ್ದು ಬಾಲ್ಯ. ಯಾರಲ್ಲಿಯೂ ಬೇಡಿಕೊಳ್ಳದೇ ಧುತ್ ಎಂದು ಬಂದು ನಿಂತದ್ದು ಯವ್ವನ. ಎರಡರ ನಡುವಿನ ಗೊಂದಲದ ಗೂಡು ಬಾಳೆಂಬ ನಿರರ್ಥಕ ಪಯಣ. ದಿನದಿನವೂ ರೋಮಾಂಚಕವಾಗುತ್ತ ಪ್ರತಿ ನಿಮಿಷದಿ ಮಿಡಿವ ಭಾವಗಳಲ್ಲಿ ಹಿಗ್ಗಿದ ದೇಹ ಕಂಡು ಬೆರಗಾದಳು. ಎಲ್ಲರ ಕಣ್ಣು ಕುಕ್ಕುವಂತೆ ಬಿರಿದ ಮೌಂಸ ಖಂಡಗಳ ನಡುವೆ ಸೋತು ನಿಂತಳು. ಕೆಂಪಾಗಿ ಮೂಡಿದ ಮೊಡವೆಗಳು ಮುಖದ ಸೌಜನ್ಯವ ಕೆಡವಿದಾಗ ಧಿಕ್ಕಾರದಿ ಭಾವಾವೇಶಕ್ಕೆ ಒಳಗಾದವಳು. ಕಾಣದೆ ಸವೆದ ದಿನಗಳಲ್ಲಿ ಮಾವಿನ ಹಣ್ಣಂತೆ ಮಾಗಿದ ಅವಳ ದೇಹಕ್ಕೆ ಪರರ ಬಾಯಲ್ಲಿ 'ದೊಡ್ಡವಳಾದಳು' ಎಂದು ಹೆಸರಿಟ್ಟಿದ್ದ ಕಂಡು ಬೆಚ್ಚಿದಳು, ಬೆವರಿದಳು. ಅದೇ ದಿನ , ಅದೇ ಕ್ಷಣ ಆರಂಭವಾದದ್ದು ಅವಳ ' ಋತುಗಾನ'. ...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"