ನಲುಗಿದರೂ ನಗುವ ಜೀವ
ಬದುಕು ಕಟ್ಟಿಕೊಳ್ಳಲು
ಅಪ್ಪನಿಗೆ ಹೆಗಲಾಗಿ,
ಒದಗುವ ಬವಣೆಗೆ
ಎದೆಯೊಡ್ಡಿ ಛಲವಾಗಿ....,
ತೊಡಕಿನ ನೋವಿನೆಳೆಗೆ
ಅಂಜದೆ ಬದುಕ ಅಪ್ಪಿದಾಕೆ
ಒಡಲ ದನಿಯೊಳಗೆ,
ಒಲುಮೆರಾಗ ಹೊಮ್ಮಿಸಿದಾಕೆ..!
ಬಿಕ್ಕುವ ಯಾತನೆಗಳ ಬದಿಗೊತ್ತಿ,
ಆಡಿಸಿ,ನಕ್ಕುನಲಿಸಿ
ಉಕ್ಕುವ ಭಾವನೆಯ ಕಟ್ಟಿ,
ಮಮತೆಯ ಎರೆದು ಪೋಷಿಸಿ
ಎದೆಯ ಕನಸುಗಳ ಕರಗಿಸಿ,
ಎರಕ ಹೊಯ್ದ ಹೊಳಪು
ನಮ್ಮ ಬದುಕಿನ ಮೆರುಗು,
ಜಿನುಗಿದ ನನಸ ಕಣ್ಣ ಹನಿಯು
ಬದುಕ ಉಳುಕುಗಳ,
ಸುಳಿವ ನೋವುಗಳ ನಡುವೆ
ನಲುಗಿದ ಜೀವ,
ದುಗುಡಗಳ ಹೊದ್ದರೂ ಸದ್ದಿಲ್ಲದೆ,
ನಗೆಯ ಮಿಂಚು ಮೊಗದಿ ಬೀರಿ,
ನಡೆದವಳು ಈಕೆ.
ಬೊಗಸೆಯಲಿ ಮೊಗೆದು
ಪ್ರೀತಿ ವಾತ್ಸಲ್ಯಗಳ ನೀಡಿದಾಕೆ!
ಒಡಲ ಕರುಳುಗಳು
ಮರುಗುವ ನೋವ ಕುರುಹುಗಳು
ಮೊಗದಿ ನಗವಿನೆಸಳ ಮುಡಿದು
ಮೌನದೊಳು ಜೊತೆಯಾಗಲು
ನಿತ್ಯದ ತಾಲೀಮು
ಹೊಸತೇನಲ್ಲ ಈ ಹೆಂಗರುಳಿಗೆ..
ಕೊನರುವ ಆಸೆಯ ಚಿವುಟಿ
ಕೊರಡಾಗಿಸಿ ಸಹಿಸಿದ ಒತ್ತಡಕೆ
ಸಹನೆಗೆ ಹೆಸರಾಗಿ ಉಳಿದಳು
ಬವಣೆಯ ಹೊತ್ತ ಬದುಕಿನೊಳಗೆ..!!!
ಸಿದ್ದುಮೂರ್ತಿ, ತುಮಕೂರು
Super sir 🙏🙏🙏🙏🙏
ಪ್ರತ್ಯುತ್ತರಅಳಿಸಿ