ಬದುಕು
ಎಲ್ಲವನ್ನು ಒಂದೇ ಸಾಲಲ್ಲಿ ಬರೆದು
ಇಷ್ಟೇ ಅರ್ಥ ಎಂದು ಹೇಳಬೇಕೆ..
ಯಾವ ಅರ್ಥ ಸಿಗಬಹುದು...!
ಯಾವುದನ್ನು ಹುಡುಕಬೇಕು..!
ಎಲ್ಲ ಎನ್ನುವುದರ ಮೂಲವೇನು.?
ಹುಟ್ಟಿಗೆ...ಸಾವಿನ ಕೊನೆಯೆ,
ನಗುವಿಗೆ...ಅಳುವೆ,
ಆರೋಗ್ಯಕ್ಕೆ... ಅನಾರೋಗ್ಯವೇ,
ಸುಖಕ್ಕೆ...ದುಃಖವೆ,
ಎಲ್ಲವೂ ವಿರುದ್ದ ಪಥದ ಬಡಿದಾಟಗಳು..!
ಬದುಕಿನ ತುಂಬಾ ಸುಂದರ ಬಣ್ಣಗಳ ತುಂಬಿ
ಕತ್ತಲ್ಲನ್ನೇ ಜೀವಿಸುವುದು ಸುಲಭವ,
ಕಪ್ಪೆಂಬ ರಂಗಿನ ಎಲೆಗೆ ಕರ್ಪುರದ ಹೂ
ಬೆಳಕ ಕಿಡಿಗಳೆ ಅರಳಿ ಘಮಿಸಲಿ
ನಾಳೆಂಗೋಚೂರು ಬಾಡದ ನಗುವ..!
ಹುಡುಕ ಹೊರಟ್ಟಿದ್ದೆ ಅಲೆಮಾರಿಯಂತೆ
ಹಾದಿಯಲ್ಲಿ ಬಿದ್ದಿದ್ದ ಬಂಧುಗಳ ಛಾಯೆಯ
ಲಾಭ ಲೋಭ ಕಂಡದ್ದಿಷ್ಟೇ
ಬಾಯಾರಿ ಗಂಟಲು ಒಣಗಿದರು
ನೀರು ಬಿಡಲು ಒಬ್ಬರಿಲ್ಲ ಸಾಯುವಾಗ...!
ದೂರದಲ್ಲೇ ನಗುತ್ತಿರುವ ಅವನ್ಯಾರೋ ಕೇಳುಗ
ಬರಿ ದೂರವಾಣಿಯಲ್ಲೇ ಕನವರಿಕೆಗೂ ಬಂದವ
ಆಪ್ತತಕೆ ಹೆಸರು ಕೊಟ್ಟು
ನೋವಿಗೂ ಕಿವಿಗೊಟ್ಟು
ಬಳಿಯಲ್ಲೇ ಇದ್ದಂತೆ ಅನುಭವ ಕೊಟ್ಟವ..!
ಎಲ್ಲವೂ ಇತ್ತಂದು, ಬಾಚಿ ಕೊಟ್ಟಿದ್ದು ಅವರಿವರಿಗೆ
ಕಿತ್ತು ತಿಂದದ್ದು ರಣ ಹದ್ದುಗಳಂತೆ
ಉಳಿದದ್ದು ಏನಿದೆ ನನಗಿಂದು
ಅಪ್ಪ ಹಾಕಿದ ಆಲದ ಮರಕ್ಕೆ
ನೇಣು ಬೀಗಿದವರ ಕಥೆಯ ವ್ಯಥೆಯೆಷ್ಟೋ.!
ಬಿಟ್ಟು ಕೊಡುವುದು ಸುಲಭವಲ್ಲ
ಗಳಿಸಲು ಪಟ್ಟ ಕಷ್ಟದ ಅರಿವಿದ್ದ ಮೇಲೆ,
ಸಾಯುವುದು ಖಚಿತ ವೆಂದಾದ ಮೇಲೆ
ಸೆಣಸಾಡಿಯೇ ಹೊರಡೋಣ
ಸಾವನ್ನು ಅಷ್ಟು ಸುಲಭದಿ ಸ್ವೀಕರಿಸಲಾರೆ...!
ಒಂದಿಷ್ಟು ನೋವು, ಒಂದಿಷ್ಟು ಸಂಕಟ
ಕಾಡುವ ಅನಾಥ ಭಾವ,
ಮತ್ತೆ ಹಿಂದೆ ತಿರುಗಿದರೆ ಬಾಲ್ಯದ ಸವಿನೆನಪು
ವಾಸ್ತವ ಏನಿಲ್ಲ ಬರಿ ಶೂನ್ಯ...
ಎಲ್ಲವನ್ನೂ ಒಂದೇ ಸಾಲಲ್ಲಿ ಹೇಳುವುದಾದರೆ...!
ಈ ಬದುಕು....!?
ದೀಪಿಕಾ ಮಾರಗಟ್ಟ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ