ಮುಳ್ಳ ಬೇಲಿಯ ಹೂವು
ಮುಳ್ಳ ಬೇಲಿಯ ಮೇಲೆ
ಬಳ್ಳಿ ಹೂವದು ಹರಡಿ
ಘಮಿಸುತಿದೆ ಪರಿಮಳವ ಒಲವು ಹೆಚ್ಚಿ..
ಅಂತರಂಗದ ತಮವ
ಕಳೆಯಲೆಂದೇ ನಾನು
ಹೊರಟಿಹೆನು ಕತ್ತಲಲಿ ದೀಪ ಹಚ್ಚಿ..
ಘಮವ ಬೀರುವ ಹೂವು
ಉಳಿಯುವುದೇ ಗಿಡದಲ್ಲಿ
ಬಗೆ ಬಗೆಯ ಕಾರಣಕೆ ಬಲಿಯದಾಗಿ
ನನ್ನಿರವು ನನ್ನುಳಿವು
ನನ್ನದಾಗುಳಿಯುವುದೇ?
ಹೋರಾಡುತಿರುವೆ ನಾನಲ್ಲಿ ಏಕಾಂಗಿ...
ಹೂವ ಬಂಧಿಸಬಹುದು
ಬಗೆ ಬಗೆಯ ರೀತಿಯಲಿ
ಗಾಳಿ ಗಂಧದ ಜತೆಯ ಬಿಡಿಸ ಬಹುದೇ..
ಕುಗ್ಗಿಸಿಯು ಬಗ್ಗಿಸಿಯು
ಜಗ್ಗಲಾರೆನು ನಾನು
ಹಿಗ್ಗಿ ಬೆಳೆಯುವ ಇಚ್ಛೆ ನೂರ್ಮಡಿಸಿದೇ..
ವಿದ್ಯಾಶ್ರೀ ಅಡೂರ್, ಮುಂಡಾಜೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ