ಅವ್ವಾ , ನನಗಿನ್ನೂ ಅರ್ಥವಾಗಿಲ್ಲ !
ಅವ್ವಾ,
ನಿನ್ನ ಕರುಳು ಬಳ್ಳಿಯಲ್ಲಿ
ನಾನು ಉಣ್ಣುವಾಗ
ನೀನು ಪಡುವ ಸುಖ
ಹೆರುವ ನೋವಿನಲೂ ನಿನ್ನ ನಗು
ನನಗೆ ಇನ್ನೂವರೆಗೂ ಅರ್ಥವಾಗಿಲ್ಲ !
ಅವ್ವಾ,
ನಿನ್ನೆದೆಯ ಶಕ್ತಿಯನು
ಜಗ್ಗಿ ಹಿಗ್ಗಿ ಹೀರುವಾಗಲೂ,
ಒದ್ದು ನಿದ್ದೆಗೆಡಿಸಿದಾಗಲೂ,
ನೀನು ಖುಷಿಯ ದೇವಿಯಾದುದು
ಅವಸಾನದಲೂ ನನಗೆ ಅರ್ಥವಾಗಲಿಲ್ಲ !
ಅವ್ವಾ,
ನಿನ್ನ ಪ್ರೀತಿಯನುಂಡು,
ನಿನ್ನ ವಾತ್ಸಲ್ಯವನುಟ್ಟು,
ಮಣ್ಣಾಟವಾಡಿ ಮನೆಗೆ ಬಂದಾಗ,
ಮುತ್ತಿಟ್ಟು ಮತ್ತೇ ಮಡಿಮಾಡಿದ್ದು
ಅನ್ನ ಉಣ್ಣುವಾಗಲೂ ನನಗೆ ಅರ್ಥವಾಗಲಿಲ್ಲ !
ಅವ್ವಾ,
ನಿನ್ನ ದೂರದೃಷ್ಟಿಯಲ್ಲಿ
ನನ್ನ ಭವಿಷ್ಯ ಬಿತ್ತಿದ್ದು,
ಅಕ್ಷರ ಆರಂಭ ಮಾಡಿದ್ದು,
ತಿದ್ದಿ ತೀಡಲು ಮಹಾಭಾರತ ನಡೆದದ್ದು
ಇಂದಿನೀ ಸ್ಥಿತಿಯಲ್ಲೂ ಅರ್ಥವಾಗಲಿಲ್ಲ !
- ಆಯ್. ಸಿ. ಸಬರದ (ಐ.ಸಿ.ಎಸ್.)
ಜವಾಹರ ನವೋದಯ ವಿದ್ಯಾಲಯ
ರಾಯಪುರ, ಛತ್ತೀಸ್ ಗಢ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ