ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೈರಿಸು ಇನ್ನೂ - ವಿವಾಹ ವಾರ್ಷಿಕೋತ್ಸವದ ಕವಿತೆ - ಅಂಜಲಿ ದೇರಾಜೆ

(ಚಿತ್ರ ಕೃಪೆ : ಜಯೀಬ್ ವುಲ್ಲ್ಲಾ ಅಸಾದ್) " ಸೈರಿಸು ಇನ್ನೂ.. "  ಇದ್ದರೆ ಇರಬೇಕು ನಿನ್ನಂಥ ಇನಿಯ ಹುಡುಕಿದರೂ ಸಿಗಬಾರದು ನಿನ್ನಂಥ ಗಂಡು ಜೀವ ಏಳೇಳು ಜನುಮಕೂ ನೀನೇ ನನ್ನ ಜೀವ  ತಂದೆಯಾಗಿ, ತಾಯಿಯಾಗಿ ಅಣ್ಣ-ತಂಗಿ ಎಲ್ಲವೂ ಆಗಿ ನನ್ನ ಸೈರಿಸಿದೆ ಇಷ್ಟು ವರ್ಷ ಇನ್ನೂ ಸೈರಿಸಬೇಕಿದೆ ಇರುವಷ್ಟು ವರ್ಷ ನನ್ನ ಜೊತೆಜೊತೆಗೆ  ಪತಿಯೇ ನಿಜ ದೈವ ನೀ ನನ್ನ ಪರಮ ದೈವ ನಂಬಿ ಬಂದೆ ನಾ ಮನಸಾರೆ ಇಚ್ಚೆಯನ್ನರಿತು ನಡೆಯುತಿರುವೆ ನೀ.. ಹೀಗೇ ಇರಲಿ ಎಂದೆಂದೂ ಬಾಳು ಸುಖಮಯವಾಗಿರಲಿ  ನಾ ಗಂಗೆ ನೀ ನನ್ನ ಹೊತ್ತ ಗಂಗಾಧರ ನಿನ್ನ ಎದೆಯಲಿ ಆರದ ದೀಪ ನಾ.. ನನ್ನ ಮಡಿಲಲಿ ಪುಟ್ಟ ಮಗುವು ನೀ.. ಲಾಲಿಯಾಡುತಾ ಪೂಜಿಸುವೆ ಸದಾ ಸದ್ದುಮಾಡುತಿರು ನನ್ ಅಂತರಾಳದಲಿ ಅಲ್ಲಿಯವರೆಗೂ ಈ ಉಸಿರಿರುವುದು ನಿನಗಾಗಿ  ಈ ದಿನ ಬಲು ಅಚ್ಚರಿಯ ದಿನ ನಿನ್ನನು ಪಡೆದ ಸುದಿನ ಅಂದೇ ನನ್ನ ಮರುಜನ್ಮ ನಿನ್ನ ಬೆರಳ ಹಿಡಿದು ಏಳು ಹೆಜ್ಜೆ ಇಟ್ಟ ದಿನ ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕಾದ ದಿನ (ನನ್ನ ಅತ್ತಿಗೆಯ ಪರವಾಗಿ ನನ್ನ ಅಣ್ಣನಿಗೆ ಮದುವೆಯ ವಾರ್ಷಿಕೋತ್ಸವದ ಪ್ರಯುಕ್ತ ಬರೆದ ಕವಿತೆ) # ಅಂಜಲಿ ದೇರಾಜೆ

ಅವ್ವನ ನೆನಪಾಗುತ್ತದೆ - ಕವಿತೆ - ಹುಸೇನಸಾಬ ವಣಗೇರಿ

ಅವ್ವನ ನೆನಪಾಗುತ್ತದೆ.. ನಾಲ್ಕು ಅಕ್ಷರ ಕಲಿಯಲೆಂದು ಹೊಟ್ಟೆ ಪಾಡಿಗೆ ದುಡಿಯಲೆಂದು ನಾನಾ ಕಾರಣಗಳಿಂದ ಬದುಕ ಬವಣೆಗಳನ್ನು ಮೆಟ್ಟಿ ಹುಟ್ಟಿದೂರು ಬಿಟ್ಟು  ಬಲುದೂರದ ನಗರಗಳಿಗೆ ಕನಸು ಕಟ್ಟಿಕೊಂಡು ಗುಳೆ ಬಂದಿದ್ದೇವೆ. ನಗರಗಳಲ್ಲಿನ ಚೆಂದದ ವೈಭೋಗದ ಜೀವನ ನಮಗಲ್ಲ ನಿತ್ಯ ಪರದಾಡುವುದು ನಮ್ಮಂತ ಬಡವರಿಗೆ ತಪ್ಪಿದ್ದಲ್ಲ. ಅದೇ ಎರಡೊತ್ತಿನ ಊಟ ಅನ್ನ ಸಾರು ಮಿಕ್ಕುಳಿದರೆ ನಾಳೆಗೆ ಚಿತ್ರಾನ್ನ ಇಲ್ಲವೇ ಮೊಸರನ್ನ ಬಿಟ್ಟರೆ ನಿತ್ಯ ಪಲಾವ್ ತಪ್ಪಿದ್ದಲ್ಲ. ರಾಶಿ ರಾಶಿಯಾಗಿ ಬಿದ್ದ ಬಟ್ಟೆಗಳನ್ನು  ಸೋಪ್ ಹಚ್ಚಿ ತೊಳೆಯುವಾಗ, ನಿನ್ನೆ ಮೊನ್ನೆಯ ಪಾತ್ರೆಗಳನೆಲ್ಲಾ  ಒಟ್ಟಿಗೆ ಸೇರಿಸಿ ತಿಕ್ಕುವಾಗ ಅವ್ವನ ನೆನಪಾಗುತ್ತದೆ. ಬಡಜೀವ ಊರ ನೆನೆಯುತ್ತದೆ ನೆನಪು ಕಣ್ಣೀರ ತರಿಸುತ್ತದೆ. ಕೆಲವೊಮ್ಮೆ ಖಾಲಿ ಜೇಬು ಸಣ್ಣಗೆ ಕಣ್ಣೀರು ತರಿಸುತ್ತದೆ ಹಸಿದ ಹೊಟ್ಟೆಯ ನಿಗಿಸಲು ರಾತ್ರಿ ಮಿಕ್ಕುಳಿದ ಬಿಳಿ ಅನ್ನಕ್ಕೆ  ಕಾರದಪುಡಿ ಎಣ್ಣೆ ಕಲಸಿ ಊಟ ಮಾಡುವಾಗ  ಪ್ರೀತಿಯಿಂದ ಬಿಸಿ ರೊಟ್ಟಿಮಾಡಿ ಮೂರೊತ್ತು ಊಟ ಬಡಿಸುತ್ತಿದ್ದ  ಅವ್ವನ ನೆನಪಾಗುತ್ತದೆ ಹುಟ್ಟಿದ ಊರು ಕಣ್ಮುಂದೆ ಬರುತ್ತದೆ.             ಹುಸೇನಸಾಬ ವಣಗೇರಿ, ಧಾರವಾಡ

ಜಾಣ ಕುರುಡರ ಜಾತ್ರೆ - ಕವಿತೆ - ಸಿದ್ದುಮೂರ್ತಿ ತುಮಕೂರು

ಜಾಣ ಕುರುಡರ ಜಾತ್ರೆ ಕಾಣ ಹೊರಟೆವು ದೇವರ ಗುಡಿ ಚರ್ಚು ಮಸೀದಿ ಯಲ್ಲಿ ಹಾರ ತುರಾಯಿ ಧೂಪ ಗಂಧಗಳಲಿ ಉರಿವ ಕರ್ಪೂರದಾರತಿಯಲಿ., ದ್ವೇಷ, ಈರ್ಷೆ ಗಳ  ಸ್ವಾರ್ಥ ಕರ್ಮಗಳ ನೆಲೆಯಲ್ಲಿ ಸೋಗಿನ ಭಕ್ತಿ ಪರಾಕಾಷ್ಠೆಯಲಿ ಕಾಣ ಹೊರಟೆವು ಕಾಣದ ದೇವರ..!! ಹಸಿದ ಹೊಟ್ಟೆಯ ವೇದನೆಗೆ ಮುರುಕ ಹುಟ್ಟದು ಅಳಿದ ಬದುಕ ಅನಾಥರೊಡಲಿಗೆ ಸಲ್ಲದ ಸಾಂತ್ವನವು ಎದೆಯೊಡಲ ಕಂಗಳು ನೋಡಿ ನೋಡದೆಯೇ ನಡೆದ ಹಾದಿಯೊಳು  ಸ್ವಾರ್ಥ ಚಿಂತೆಗಳ ಲೋಭ ಸಂತೆಯೊಳಗೆ ಬೀಡು ಬಿಟ್ಟಿದೆ.. ಮಹಲಿನೊಳಗೆ ದೇವತಾರಾಧನೆ ಸೂರಿಲ್ಲದ ಬೀದಿ ಬದಿಯ  ಬದುಕುಗಳ ನಿತ್ಯ ರೋಧನೆ ಬಿಕ್ಕುವ ಬೆತ್ತಲು ಬದುಕ ಕಂಡು ಕಾಣದ ಜಾಣ ಕುರುಡರ ನಿತ್ಯ ಜಾತ್ರೆಯು  ಆತ್ಮ ಸಾಕ್ಷಿಗಳ ಕಗ್ಗೊಲೆಯು.., ತೆರೆಯದರಿವು ಕಣ್ಣುಗಳ ಮುಂದೆ ಹರಿದು ಮಣ್ಣಾಗಿ ಹೋದ ಕ್ಷೀರಾಭಿಷೇಕ ನಿಜದ ಹಸಿವು ಗಳ ನೀಗಿಸದ ನೈವೇದ್ಯ ಎತ್ತ ಸಾರ್ಥಕ ..??? ಹಸಿದೊಡಲಿಗೆ ತುತ್ತಾಗು ಹರಿವ ಕಣ್ಣೀರ ಒರೆಸೊ ಬೆರಳುಗಳಿಂದ ಉಸಿರ ಬಲಗೊಳಿಸು ಉಕ್ಕುವ ದು:ಖಗಳ ಬಳಸಿ ಅಪ್ಪಿ ಸಂತೈಸು ದೀನರಿಗೆ ದಯೆಯಾಗು.. ಅರಿವಿನ ಅನುಕಂಪ ಪಣತಿಯಂತೆ ಉರಿದು ದಾರಿದೀಪವಾಗಲು ದೈವದ ಮುಂದಿನ ಹಣತೆಯಂತೆ ನಮ್ಮೊಳಗಿನ ದೈವಾಂಶ ನಿತ್ಯ ಪ್ರಕಾಶ ಆಗ..                     ಸಿದ್ದು ಮೂರ್ತಿ, ತುಮಕೂರು

ಕಣ್ಣೀರಿನ ಕಪ್ಪ - ಕವಿತೆ - ಹುಸೇನಸಾಬ ವಣಗೇರಿ

ಕಣ್ಣೀರಿನ ಕಪ್ಪ ಪ್ರೀತಿಯೆಂಬ ಘನಘೋರವಾದ ಯುದ್ದದಲ್ಲಿ ಶಕ್ತಿ ಮೀರಿ ಹೋರಾಡಿ ಜಾತಿ ಎಂಬ ಆಯುಧದ ಮುಂದೆ ಭೀಕರವಾಗಿ ಸೋತವನು ನಾನು. ನನ್ನ ಕನಸಿನ ಪ್ರೀತಿಯ ಸಾಮ್ರಾಜ್ಯ ಕುಸಿದು ಬಿದ್ದು ಕ್ರಮೇಣ ಕಣ್ಮರೆಯಾಗಿದೆ ಆದರೆ  ನೋವು ಮಾಸಿಲ್ಲ ನೆನಪು ಸತ್ತಿಲ್ಲ. ನಕ್ಕು ನಲಿದ ಆ ದಿನಗಳನ್ನು ಆಗಾಗ ನೆನೆಯುತ್ತೇನೆ ನೆನಪಿನಲ್ಲಿ ಸ್ವಲ್ಪ ಕಾಲ ಕಳೆಯುತ್ತೇನೆ ಸಾಲದ್ದಕ್ಕೆ  ಕಣ್ಣೀರಿನ ಕಪ್ಪ ಕಟ್ಟುತ್ತೇನೆ. ಆಗೋಮ್ಮ ಈಗೋಮ್ಮೆ ಪ್ರೀತಿ ಎಂಬ ಯುದ್ದದಲ್ಲಿ ಸೋತ ನನ್ನನ್ನು ಮತ್ತೆ ಆಹ್ವಾನಿಸುತ್ತಾರೆ ಪ್ರೀತಿಸುವ ಮುನ್ಸೂಚನೆ ನೀಡುತ್ತಾರೆ. ಯಾವುದೇ ಗೊಡವೆಗೆ ಹೋಗದೆ ನನ್ನ ಪಾಡಿಗೆ ನಾನು ನಯವಾಗಿ ಹಿಂದೆ ಸರಿದು ಬಿಡುತ್ತೇನೆ ಸೋಲುತ್ತೇನೆ ಎಂಬ ಭಯಕ್ಕಲ್ಲ ಮತ್ತಾವುದೋ ಆಯುಧಕ್ಕೆ ಶರಣಾಗಿ ಕಣ್ಣೀರಿನ ಕಪ್ಪ ತೆರಬೇಕು ಎಂಬ ಆತಂಕಕ್ಕೆ.             ಹುಸೇನಸಾಬ ವಣಗೇರಿ, ಧಾರವಾಡ.