ಜಾಣ ಕುರುಡರ ಜಾತ್ರೆ
ಕಾಣ ಹೊರಟೆವು ದೇವರ
ಗುಡಿ ಚರ್ಚು ಮಸೀದಿ ಯಲ್ಲಿ
ಹಾರ ತುರಾಯಿ ಧೂಪ ಗಂಧಗಳಲಿ
ಉರಿವ ಕರ್ಪೂರದಾರತಿಯಲಿ.,
ದ್ವೇಷ, ಈರ್ಷೆ ಗಳ
ಸ್ವಾರ್ಥ ಕರ್ಮಗಳ ನೆಲೆಯಲ್ಲಿ
ಸೋಗಿನ ಭಕ್ತಿ ಪರಾಕಾಷ್ಠೆಯಲಿ
ಕಾಣ ಹೊರಟೆವು ಕಾಣದ ದೇವರ..!!
ಹಸಿದ ಹೊಟ್ಟೆಯ ವೇದನೆಗೆ
ಮುರುಕ ಹುಟ್ಟದು
ಅಳಿದ ಬದುಕ ಅನಾಥರೊಡಲಿಗೆ
ಸಲ್ಲದ ಸಾಂತ್ವನವು
ಎದೆಯೊಡಲ ಕಂಗಳು
ನೋಡಿ ನೋಡದೆಯೇ ನಡೆದ ಹಾದಿಯೊಳು
ಸ್ವಾರ್ಥ ಚಿಂತೆಗಳ ಲೋಭ
ಸಂತೆಯೊಳಗೆ ಬೀಡು ಬಿಟ್ಟಿದೆ..
ಮಹಲಿನೊಳಗೆ ದೇವತಾರಾಧನೆ
ಸೂರಿಲ್ಲದ ಬೀದಿ ಬದಿಯ
ಬದುಕುಗಳ ನಿತ್ಯ ರೋಧನೆ
ಬಿಕ್ಕುವ ಬೆತ್ತಲು ಬದುಕ
ಕಂಡು ಕಾಣದ ಜಾಣ ಕುರುಡರ
ನಿತ್ಯ ಜಾತ್ರೆಯು
ಆತ್ಮ ಸಾಕ್ಷಿಗಳ ಕಗ್ಗೊಲೆಯು..,
ತೆರೆಯದರಿವು ಕಣ್ಣುಗಳ ಮುಂದೆ
ಹರಿದು ಮಣ್ಣಾಗಿ ಹೋದ ಕ್ಷೀರಾಭಿಷೇಕ
ನಿಜದ ಹಸಿವು ಗಳ ನೀಗಿಸದ ನೈವೇದ್ಯ
ಎತ್ತ ಸಾರ್ಥಕ ..???
ಹಸಿದೊಡಲಿಗೆ ತುತ್ತಾಗು
ಹರಿವ ಕಣ್ಣೀರ ಒರೆಸೊ ಬೆರಳುಗಳಿಂದ
ಉಸಿರ ಬಲಗೊಳಿಸು
ಉಕ್ಕುವ ದು:ಖಗಳ
ಬಳಸಿ ಅಪ್ಪಿ ಸಂತೈಸು
ದೀನರಿಗೆ ದಯೆಯಾಗು..
ಅರಿವಿನ ಅನುಕಂಪ ಪಣತಿಯಂತೆ
ಉರಿದು ದಾರಿದೀಪವಾಗಲು
ದೈವದ ಮುಂದಿನ ಹಣತೆಯಂತೆ
ನಮ್ಮೊಳಗಿನ ದೈವಾಂಶ ನಿತ್ಯ ಪ್ರಕಾಶ ಆಗ..
ಸಿದ್ದು ಮೂರ್ತಿ, ತುಮಕೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ