ಅವ್ವನ ನೆನಪಾಗುತ್ತದೆ..
ನಾಲ್ಕು ಅಕ್ಷರ ಕಲಿಯಲೆಂದು
ಹೊಟ್ಟೆ ಪಾಡಿಗೆ ದುಡಿಯಲೆಂದು
ನಾನಾ ಕಾರಣಗಳಿಂದ
ಬದುಕ ಬವಣೆಗಳನ್ನು ಮೆಟ್ಟಿ
ಹುಟ್ಟಿದೂರು ಬಿಟ್ಟು
ಬಲುದೂರದ ನಗರಗಳಿಗೆ
ಕನಸು ಕಟ್ಟಿಕೊಂಡು ಗುಳೆ ಬಂದಿದ್ದೇವೆ.
ನಗರಗಳಲ್ಲಿನ ಚೆಂದದ
ವೈಭೋಗದ ಜೀವನ ನಮಗಲ್ಲ
ನಿತ್ಯ ಪರದಾಡುವುದು
ನಮ್ಮಂತ ಬಡವರಿಗೆ ತಪ್ಪಿದ್ದಲ್ಲ.
ಅದೇ ಎರಡೊತ್ತಿನ ಊಟ
ಅನ್ನ ಸಾರು ಮಿಕ್ಕುಳಿದರೆ
ನಾಳೆಗೆ ಚಿತ್ರಾನ್ನ ಇಲ್ಲವೇ ಮೊಸರನ್ನ
ಬಿಟ್ಟರೆ ನಿತ್ಯ ಪಲಾವ್ ತಪ್ಪಿದ್ದಲ್ಲ.
ರಾಶಿ ರಾಶಿಯಾಗಿ ಬಿದ್ದ ಬಟ್ಟೆಗಳನ್ನು
ಸೋಪ್ ಹಚ್ಚಿ ತೊಳೆಯುವಾಗ,
ನಿನ್ನೆ ಮೊನ್ನೆಯ ಪಾತ್ರೆಗಳನೆಲ್ಲಾ
ಒಟ್ಟಿಗೆ ಸೇರಿಸಿ ತಿಕ್ಕುವಾಗ
ಅವ್ವನ ನೆನಪಾಗುತ್ತದೆ.
ಬಡಜೀವ ಊರ ನೆನೆಯುತ್ತದೆ
ನೆನಪು ಕಣ್ಣೀರ ತರಿಸುತ್ತದೆ.
ಕೆಲವೊಮ್ಮೆ ಖಾಲಿ ಜೇಬು
ಸಣ್ಣಗೆ ಕಣ್ಣೀರು ತರಿಸುತ್ತದೆ
ಹಸಿದ ಹೊಟ್ಟೆಯ ನಿಗಿಸಲು
ರಾತ್ರಿ ಮಿಕ್ಕುಳಿದ ಬಿಳಿ ಅನ್ನಕ್ಕೆ
ಕಾರದಪುಡಿ ಎಣ್ಣೆ ಕಲಸಿ
ಊಟ ಮಾಡುವಾಗ
ಪ್ರೀತಿಯಿಂದ ಬಿಸಿ ರೊಟ್ಟಿಮಾಡಿ
ಮೂರೊತ್ತು ಊಟ ಬಡಿಸುತ್ತಿದ್ದ
ಅವ್ವನ ನೆನಪಾಗುತ್ತದೆ
ಹುಟ್ಟಿದ ಊರು ಕಣ್ಮುಂದೆ ಬರುತ್ತದೆ.
ಹುಸೇನಸಾಬ ವಣಗೇರಿ, ಧಾರವಾಡ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ