ಅವಳು ಬಂದಿದ್ದಾಳೆ..!
ಅವಳಿಗೋ ನನ್ನೆಡೆಗೆ ತುಸುವೂ
ಅಕ್ಕಸವಿಲ್ಲ;
ತಿಂಗಳಾಗುವುದೇ ತಡ ಬಗೆ ಬಗೆಯ ಠರಾವುಗಳೊಂದಿಗೆ ಲಗ್ಗೆ ಹಾಕಿ ಬಿಡುತ್ತಾಳೆ;
ಜೊತೆಯಲ್ಲಿ ಸಾವಿನ ಪ್ರಲಾಪದ ಬೆರಗಿನಂತಹ ವಿಪರೀತ ಬೇನೆಯನ್ನೂ ತಂದಿರುತ್ತಾಳೆ
ಅವಳೋ ಜನ ಜಾಗಗಳಿಗೆ ಹೆದರುವವಳಲ್ಲ
ಬುಳ ಬುಳನೆ ಹರಿದು ಬಿಡುತ್ತಾಳೆ ಎವೆಯಿಕ್ಕದೆ ಕಾಲಿನ ಸಂಧಿಗಳಲ್ಲಿ;
ಒಳ ಉಡುಪಿನ ಆಕಾರವೇ ಬದಲಾಗಿ ಹೋಗಬೇಕು ಅಷ್ಟು ಒದ್ದೆ ಮಾಡುತ್ತಾಳೆ;
ನೀಲಿ,ಕಪ್ಪು,ಹಳದಿ ಏನೇ ಇರಲಿ ಅವಳ ಹಾವಳಿಗೆ ಅದು ಸಂಪೂರ್ಣವಾಗಿ ಕೆಂಪಗಾಗಿರುತ್ತದೆ
ಅಬ್ಬಾ! ಅವಳು ಏಳು ದಿನವಾದರೂ ಸುಮ್ಮನಾಗದ ಮಹಾಕಾಳಿ;
ಇಟ್ಟ ಕಣ್ಣೀರ ಹನಿಗಳೆಲ್ಲವೂ ವರ್ಜ್ಯ ಅವಳ ಮುಂದೆ
ಒಂದೇ ಸಮನೆ ಮೊರೆಯುತ್ತಾಳೆ ಘಂಟೆಯಂತೆ;
ಕ್ಷಣ ಕ್ಷಣವೂ ಹಾಸಿಗೆಯ ಮಗ್ಗಲು ಬದಲಿಸುವಂತೆ ಮಾಡುತ್ತಾಳೆ
ನಾಭಿಯಾಳದಲ್ಲಿ ಚಳುಕುಗಳೊಂದಿಗೆ ಗಿರಕಿಯೂ ಹೊಡೆಯುತ್ತಾಳೆ;
ಛೀ.. ಬಿಡಿ ಅವಳು ನನ್ನಂಥಲ್ಲವಲ್ಲ? ಅದಕ್ಕೆ ನನ್ನೆಡೆಗೆ ಒಲವಿಲ್ಲ
ಮೂಗಿನ ಹೊಳ್ಳೆಗಳೆರಡನ್ನು ಹೊಲಿದು ಹಾಕಿದರೂ ವ್ಯರ್ಥವೇ ಅಷ್ಟು ನಾರುತ್ತಾಳೆ;
ನನ್ನಲ್ಲಿಯೇ ಹೇವರಿಕೆ ಹುಟ್ಟಬೇಕು ಹಾಗೆ ಮಾಡುತ್ತಾಳೆ
ಕೆಲವೊಮ್ಮೆಯಂತೂ ನನ್ನ ಮರ್ಯಾದೆಗೆ ತಿಲಾಂಜಲಿ ಬಿಡುತ್ತಾಳೆ;
ತರ್ಕ ಹೀನ ಜಗತ್ತಿನಲ್ಲಿ ತಲೆ ತಗ್ಗಿಸುವಂತೆ ಮಾಡುತ್ತಾಳೆ
ಮೈಯ್ಯ ಸತುವನ್ನೆಲ್ಲಾ ನಿಷ್ಕ್ರಿಯಗೊಳಿಸಿ,ನನ್ನ ನಾಲಿಗೆಯನ್ನೂ ಅಟ್ಟೆಯಾಗಿಸಿ ಗಹಗಹಿಸಿ ನಗುತ್ತಾಳೆ
ಅವಳ ಘೀಳಾಟಗಳನ್ನು ಸೈರಿಸದ ನಾನೋ ಹೇಳಿಯೇ ಬಿಡುತ್ತೇನೆ " ಹೋಗು ದೂರ ಇನ್ನೆಷ್ಟು ದಿನ ಹೀಗೆ ಸಾಯಲಿ?" ಎಂದು;
ಅವಳೂ ಪಾಪ ನಿರುಮ್ಮಳವಾಗಿಯೇ ಉತ್ತರಿಸುತ್ತಾಳೆ
"ಅಯ್ಯೋ! ಹೆಣ್ಣೆ, ನಾನಿದ್ದರಲ್ಲವೇ ನಿನಗೆ ಹೆಣ್ತನ ಮತ್ತು ತಾಯ್ತನ; ನಾನಿದ್ದರಲ್ಲವೇ ಕಚ್ಚೆ ಹರುಕರು ತಹ ತಹಿಸಿ ನಿನ್ನಡೆಗೆ ಸುಳಿಯುವುದು
ಕೇಳಿಲ್ಲಿ ನಾನಿಲ್ಲದಿದ್ದರೆ ನಿನ್ನ ನಸೀಬು ಖೊಟ್ಟಿಯಾಗುತ್ತಿತ್ತು;
ಮತ್ತೂ ಹೇಳುವೆ ಕೇಳು ನಾನಿಲ್ಲದಿದ್ದರೆ ನೀನು ಹೆಣದ ಮೇಲಿನ ಹೂವು!"
ಆಗ ನಾನು ದೊರಗು ದನಿಯಲ್ಲಿಯೇ " ಆಯ್ತು ಬಾ ಮಾರಾಯ್ತಿ ನಿನಗೆ ಹೃದಯ ತುಂಬಿದ ಸ್ವಾಗತ" ಎಂದು ನಿಚ್ಚಳವಾಗಿ ಹೇಳಿ ಬಿಡುತ್ತೇನೆ
ಆದರೂ ಅವಳು ಬಂದಾಗ ನಾನು ನಾನಾಗಿ ಇರುವುದೇ ಇಲ್ಲ;
ಪಾಪಿಗೇಡಿ ಅವಳು ಈ ಬಾರಿ ಒಂದು ವಾರದ ಮುಂಚೆಯೇ ಬಂದಿದ್ದಾಳೆ!..
ದೀಕ್ಷಿತ್ ನಾಯರ್
ಯುವ ವಾಗ್ಮಿ, ಯುವ ಬರಹಗಾರ & ನಿರೂಪಕ
ಮಂಡ್ಯ
Wow
ಪ್ರತ್ಯುತ್ತರಅಳಿಸಿಅಬ್ಬಾ... ಅದ್ಭುತ, ಅದ್ವಿತೀಯ ರಚನೆಸರದ
ಪ್ರತ್ಯುತ್ತರಅಳಿಸಿಹೆಣ್ಣಿನ ನೋವನ್ನು ಹೆಕ್ಕಿ ಬರೆದಂತೆ ಇದೆ ಕವನ ಹೃದಯ ತುಂಬಿದ ಸ್ವಾಗತ ನೀಡದೆ ಇದ್ದರು ಬಂದೆ ಬರುತ್ತಾಳೆ ಅವಳು. ಅವಳು ಇಲ್ಲದೆ ಇದ್ದರೆ ಹೆಣ್ಣಿನ ಅಸ್ತಿತ್ವ ಇಲ್ಲವೇ ಇಲ್ಲ. ತುಂಬಾ ಚೆಂದದ ರಚನೆ ದೀಕ್ಷಿತ್ ಜೀ.
ಪ್ರತ್ಯುತ್ತರಅಳಿಸಿಪ್ರತಿ ಬಾರಿ ಹೆಣ್ಣಿನ ಮನದ ಭಾವನೆ ಯಾತನೆಗಳ ಒಳಹೊಕ್ಕು ಬರೆಯುವ ತಮ್ಮ ಕವನ 👌👌👌
ಪ್ರತ್ಯುತ್ತರಅಳಿಸಿಹೃದ್ಯವಾಗಿದೆ. ಕರುಳಿನ ಬರಹ .
ಪ್ರತ್ಯುತ್ತರಅಳಿಸಿಹೆಣ್ಣಿನ ಮನದಾಳದ ಮಾತನ್ನು ಅದ್ಬುತವಾಗಿ ವ್ಯಕ್ತಪಡಿಸಿದ್ದೀರಿ. ನಿಮ್ಮಲ್ಲಿನ ಹೆಣ್ತನದ ಮನಸ್ಸಿಗೆ ನನ್ನ ಸಲಾಂ
ಪ್ರತ್ಯುತ್ತರಅಳಿಸಿ