ನಾನು ಹೊರಗಿನವನು
(ಸ್ಮಶಾನದಲ್ಲಿ ಮೂಡಿದ ಕವಿತೆ)
ಭೂಮಿ ಗರ್ಭದಲ್ಲಿ ಕೊರಡುಗಟ್ಟುವಂಥ
ಚಳಿಯಲ್ಲಿ; ಭೂತ ಕಾಲದ
ಆತ್ಮೀಯರು ಸುಟ್ಟು ಕರಕಲಾಗಿ
ಮತ್ತು ಒಂದಷ್ಟು ಮಂದಿ ಮಣ್ಣ
ಹೊದ್ದು ಮಲಗಿದ್ದಾರೆ;
ದಿರಿಸಿನ ಗೊಡವೆಯಿಲ್ಲದೆ
ಬೆತ್ತಲಾಗಿ ಮತ್ತು ನಿಶ್ಚೇಷ್ಟಿತವಾಗಿ!
ಮತ್ತೆ ಸೇರಿರುವ ಖುಷಿಯಲ್ಲಿ
ಲೋಕಾಭಿರಾಮವಾಗಿ ಮಾತಿಗಿಳಿದಿದ್ದಾರೆ;
ಊಳಿಡುತ್ತಾ,ಆಕಳಿಸುತ್ತಾ
ಮಗ್ಗಲು ಬದಲಿಸಿದ್ದಾರೆ;
ಬದುಕಿದ್ದಾಗ ಸಿಗದ ಈರ್ಷ್ಯೆಗಾಗಿ
ಹಪ ಹಪಿಸಿದ್ದಾರೆ;
ಮುಖವಾಡ ಧರಿಸುವ ಜನರಿಗೆ
ಪ್ರವೇಶ ನಿರಾಕರಿಸಿ
ಅಷ್ಟ ದಿಗ್ಭಂಧನ ಹೂಡಿದ್ದಾರೆ!
ಗೆಲ್ಲುವ ಮತ್ತು ದುಡಿಯುವ
ಹರಕತ್ತು ಅವರಲ್ಲಿಲ್ಲ ಈಗ;
ಹೆಣ ಎಂಬ ಹೆಸರು ಬಂದಾಯ್ತು! ಇನ್ನು ನಿರುಮ್ಮುಳವಾಗಿ ಉಸಿರಾಡ್ತಾರೆ;
ತಾಯಿ ಮೊಗವ ಕಾಣದ
ಹಾಲು ಗಲ್ಲದ ಮಕ್ಕಳು ಖಿಲ್ಲೆನ್ನುತ್ತಿವೆ
ನೆರೆ ಕೂದಲಿನ ಮುದುಕ ಮುದುಕಿಯರು ಕ್ಯಾಕರಿಸುತ್ತಿದ್ದಾರೆ; ಪ್ರಾಯದಲ್ಲಿಯೇ ಕಮರಿ ಹೋದ ಜೀವಗಳು ಕೊರಗುತ್ತಿವೆ
ನೇಣು ಬಿಗಿದುಕೊಂಡ ಭಗ್ನ
ಪ್ರೇಮಿ ಬಿಕ್ಕುತ್ತಿದ್ದಾನೆ;
ಆದರೆ ತುಸುವಾದರೂ ಕೇಳಬಾರದೆ?
ಇದೇನಾ ಸ್ಮಶಾನ ಮೌನ ಅಂದ್ರೆ?
ನನ್ನದೇ ಮನೆಯಲ್ಲಿ ಸಿಗದ,
ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸುವ
ಸೌಧದಲ್ಲೂ ಕಾಣದ ಶಾಂತಿ ಇಲ್ಲಿದೆ!
ಬಣ್ಣ ಬಣ್ಣದ ಮಾತುಗಳನ್ನಾಡುವ
ಜನ ಇಲ್ಲಿಲ್ಲವಲ್ಲ ಅದಕ್ಕಿರಬಹುದ?
ಇಲ್ಲಿಯ ಜನರ ನಾಲಿಗೆಯೂ
ಸತ್ತು ಹೋಗಿದೆ ಪುಣ್ಯ!
ಒಳಗೆ ಕಾಲಿಡುವಾಗ ಇದ್ದ
ನಿಗಿ ನಿಗಿ ಬೆವರು ಈಗಿಲ್ಲ;
ಮಣ್ಣ ತೋಡಿ ಅವರೊಂದಿಗೆ
ಇಡೀ ದಿನ ಮಲಗುವ ಧೈರ್ಯ ಬಂದಿದೆ;
ಆದರೂ ಒಂದು ರೀತಿಯ ವ್ಯಾಕ್ಯುಲತೆ!
ಅರ್ಧರ್ಧ ತಿಂದ ಕನಸನ್ನು
ನನಸು ಮಾಡುವ ಉಮ್ಮೇದಿ ಮೂಡಿದೆ;
ಇಲ್ಲ್ಯಾರು ಕಾಲೆಳೆಯುವವರಿಲ್ಲವಲ್ಲ?
ಕಪ್ಪನೆ ಗೋರಿಯ ಮೇಲೆ
ಟಿಸಿಲೊಡೆದಿದೆ ಪ್ರೇಮವೆಂಬುದು;
ಅಲ್ಲಲ್ಲಿ ಬಿದ್ದ ಪುರಿ, ಒಣಗಿದ ಹೂವುಗಳ ನೋಡುತ್ತಲೇ ಹಸಿವು ನೀಗಿದೆ
ಆದರೆ ಇಲ್ಲಿ ವಾಸಿಸುವ ಅರ್ಹತೆ
ನನಗೆಲ್ಲಿದೆ?
ಎಷ್ಟೆ ಆದರೂ ನಾನು ಹೊರಗಿನವನು
ನಾನು ಹೊರಗಿನವನು!
ದೀಕ್ಷಿತ್ ನಾಯರ್ ಮಂಡ್ಯ
ಯುವ ಬರಹಗಾರ,ವಾಗ್ಮಿ ಮತ್ತು ನಿರೂಪಕ
ಜೀವಂತಿಕೆಯ ಬರಹ..! ಹೊರಗಿದ್ದೂ ಒಳಗನ್ನು ಅರಿಯುವ ಮೌನದ ಹಾದಿಯ ನಡಿಗೆ. ಉತ್ತಮ ಭವಿಷ್ಯ ನಿಮ್ಮದಾಗಲಿ. ಶುಭಾಶಯಗಳು.
ಪ್ರತ್ಯುತ್ತರಅಳಿಸಿಎಲ್ಲೂ ಸಿಗದ ಮೌನ, ಮತ್ತೆಲ್ಲೂ ದಕ್ಕದ ಏಕಾಂತ. ಸ್ಮಶಾನದಲ್ಲಿ ಹುಟ್ಟಿದ ಕವಿತೆ ಮನ ಮುಟ್ಟುವಂತಿದೆ. ಹೆಣ ಎಂಬ ಹೆಸರು ಬಂದಾಯ್ತು ಇನ್ನು ನಿರುಮ್ಮಳವಾಗಿ ಉಸಿರಾಡುತ್ತಾರೆ 👌
ಪ್ರತ್ಯುತ್ತರಅಳಿಸಿಮನಮುಟ್ಟುವ ಸಾಲುಗಳು
ಪ್ರತ್ಯುತ್ತರಅಳಿಸಿಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸೌಧದಲ್ಲೂ ಕಾಣದ ಶಾಂತಿ ಸ್ಮಶಾನದಲ್ಲಿ ಸಿಕ್ಕಿದೆ ಎಷ್ಟು ನಿಜ ಅಲ್ವಾ. ಜೀವ ಹೋದ ಮೇಲೆ ಶ್ರೀಮಂತ, ಬಡವ ಎಂಬ ಪ್ರಶ್ನೆ ಮೂಡದೆ ಇರುವ ಕಾರಣವೇನೋ ಅದಕ್ಕೆ ಅಲ್ಲಿ ಎಲ್ಲರೂ ಒಂದೇ ಕೋಟಿ ರೂಪಾಯಿ ಇದ್ದವನಾದರು, ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದವನಾದರು ಕೊನೆಗೆ ಹೆಣ ಆಗೇ ಆಗುವನು ನಿಮ್ಮ ಈ ಕವನ ತುಂಬಾ ಅಂದ್ರೆ ತುಂಬಾ ಇಷ್ಟ ಆಯಿತು ಸರ್ ಈ ಕವನ ರಚಿಸಿದ್ದಕ್ಕೆ ತುಂಬೊಲವಿನ ಧನ್ಯವಾದಗಳು ಹಾಗೂ ಧನ್ಯೋಸ್ಮಿ ನಾನು.
ಪ್ರತ್ಯುತ್ತರಅಳಿಸಿಅದ್ಭುತವಾದ ಬರಹ..... ಬರಹ ಮೂಡಿದ ಜಾಗ ಉತ್ತಮವಾದ ಆಯ್ಕೆ..... ನಿಮಗೆ ಶುಭವಾಗಲಿ
ಪ್ರತ್ಯುತ್ತರಅಳಿಸಿಇರುವಾಗ ನಾನೇ ಎಂಬ ಅಹಮ್ಮಿನಲ್ಲಿ ಬದುಕಿದ ಈ ನರ ಮಾನವ, ಸತ್ತ ಮೇಲೆ ಅಲ್ಲಿ ಒಂದಷ್ಟು ದುಗುಡ, ಧುಮ್ಮಾನ ಗಳಿದ್ದರು ಏನು ಮಾಡಲಾಗದೆ ಸುಮ್ಮನೆ ಹೊರಗಿನವಾಗಿದ್ದಾನೆ, ಮನದ ಮೌನತೆಯನ್ನು ಬಡಿದೆಬ್ಬಿಸುವಂತೆ ಗೆಳೆಯ 👌✨️❤🥰🥰
ಪ್ರತ್ಯುತ್ತರಅಳಿಸಿಉಸಿರಿಲ್ಲದ ದೇಹದಲ್ಲಿ ಭಾವಲಹರಿಯ ಸೃಷ್ಟಿಸಿದಂತಹ ಬಲು ಗಾಂಭೀರ್ಯ ಬರಹ ನಿಮ್ಮದು, ಮಣ್ಣೊಳಗಿನವರ ಅರ್ಥನಾದ ಆಲಿಸಿ ಅಕ್ಷರ ರೂಪ ಕೊಟ್ಟು ಕೇಂದ್ರಿಕರಿಸಿರುವ ಸ್ಥಳವು ಕೂಡ ಅಷ್ಟೇ ತೂಕಬದ್ಧವಾಗಿದೆ. ಅತ್ಯುತ್ತಮ ಕಾವ್ಯ ರಚನೆಗೆ ಅಭಿನಂದನೆಗಳು ಸರ್, ಶುಭವಾಗಲಿ ನಿಮ್ಮ ಸಾಹಿತ್ಯದ ಕೃಷಿಗೆ.
ಪ್ರತ್ಯುತ್ತರಅಳಿಸಿ