(ಚಿತ್ರ : ಕಾರ್ತಿಕ್ ಎಸ್ ಕಾರ್ಗಲ್ಲು)
ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಆಯೋಜಿಸಿದ್ದ "ಮಾನವೀಯತೆ" ವಿಷಯಧಾರಿತ ಹನಿಗವನ ಸ್ಪರ್ಧೆ 2023ರ ವಿಜೇತ ಕವನಗಳನ್ನು ಓದುಗರಿಗಾಗಿ ಪ್ರಕಟಿಸಲಾಗಿದೆ.
01. ಮಾನವೀಯತೆ
ಸಂಜೆ ಮನೆಯ ಪ್ರಾಂಗಣದಲ್ಲಿ
ಮ್ಯಾರೇಜ್ ಎನ್ವರ್ಸರಿಯ ಹಬ್ಬ!
ಗಂಡ ಹೆಂಡತಿ ಸ್ನೕಹಿತರೆಲ್ಲ
ಕೇಕ್ ಕತ್ತರಿಸಿ, ಬಣ್ಣದಂತೆ ಬಳಿದುಕೊಂಡಿದ್ದಾರೆ ಮುಖಕೆ!
ಎಲ್ಲರ ಕೈಯಲ್ಲಿ
ಬೀಯರ್ ಬಾಟಲಿಗಳು,
ಚಲ್ಲಾಪಿಲ್ಲಿಯಾಗಿ ಬಿದ್ದ ಮೃಷ್ಟಾನ್ನ!
ಅತ್ತ ಮನೆಯ ಮೂಲೆಯೊಂದರಲ್ಲಿ
ಮಾನವೀಯತೆಯ ವೃದ್ಧ ಮಡಿಲುಗಳೆರಡು ಹಲುಬುತ್ತಿರುವ ಸದ್ದು! ಕೇಳುವವರಾರು!?
- ಸುರೇಶ ಮುದ್ದಾರ
02. ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..
ಜಾತಿ - ಧರ್ಮಗಳೆಂದು ಬಡಿದಾಡುವವರ
ಮಸೀದಿ - ಮಂದಿರಗಳಿಗಾಗಿ ಕಿತ್ತಾಡುವವರ
ಹೊಟ್ಟೆ ಹೊರೆಯದ ಭಗವದ್ಗೀತೆ, ಕುರಾನಿಗಾಗಿ
ನಡುರಸ್ತೆಯಲ್ಲಿ ರಕ್ತ ಹರಿಸುವವರ ಕಂಡು
ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..
ಹಸಿದ ಭಿಕ್ಷುಕರ ಖಾಲಿ ಹೊಟ್ಟೆ ಕಾಣದ
ದಾರಿಯಲ್ಲಿನ ಅನಾಥ ಮಗುವಿನೆಡೆ ಕಣ್ಣೆತ್ತಿ ನೋಡದ
ತನ್ನ ಹುಟ್ಟಿಸಿದವರನ್ನೇ ಮನೆ ಬಿಟ್ಟು ಅಟ್ಟಿದ
ಪತ್ರಿಕೆಯಲ್ಲಿನ ಸಮಾಜ ಸೇವಕರ ಸೇವೆಯ ಕಂಡು
ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..
ಜಾತಿ - ಧರ್ಮಗಳ ಬೇಲಿ ದಾಟಿ ಬದುಕಿ
ಎಂದವರನ್ನೆ ಧರ್ಮ ಗುರುಗಳಾಗಿಸಿ
ಅವರ ಮೂರ್ತಿಗಳನ್ನೇ ದೇವರಾಗಿಸಿ
ಹೊಸ ಜಾತಿ ಧರ್ಮಗಳ ಸೃಷ್ಟಿಸಿದವರ ಕಂಡು
ಗಾಂಧಿ ಪಾರ್ಕಿನ ಗಾಂಧಿ ನಕ್ಕಿದ್ದ..
- ಸಂಜಯ್ ಚಿತ್ರದುರ್ಗ
03. ಸರ್ವಜನಾಂಗದ ಶಾಂತಿಯ ತೋಟ
ಹೆತ್ತ ತಾಯಿಗೆ ಕೂಳನ್ನಾಕದೆ,
ಕಲ್ಲು ಶಿಲೆಗೆ ಚಿನ್ನವ ಉಡುಗೊರೆ ನೀಡಿದನ್ನ ಕಂಡು
ಗುಡಿಯೊಳಗಿದ್ದ ಹನುಮ ನಗುತಲಿದ್ದ..!
ಸರ್ವ ಜನಾಂಗದ ಶಾಂತಿಯ ತೋಟದ ಹೂಗಳು,
ಹಿಜಾಬ್ ಮತ್ತು ಕೇಸರಿ ಎಂದು
ಹೊಡೆದಾಡುವುದ ನೋಡಿ
ರಾಮ-ರಹೀಮರು ಮರುಕ ಪಟ್ಟರು..!
ಕ್ರಿಸ್ತನ ಮುಂದೆ ಮೇಣದಬತ್ತಿ ಹಚ್ಚಿ,
ಹೊರಗೆ ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚುವವರ ಕಂಡು
ಶಿಲುಬೆಯಲ್ಲಿದ್ದ ಕ್ರಿಸ್ತ ನರಳುತಿದ್ದ..!
ಹಣೆಗೆ ಕುಂಕುಮವಿಟ್ಟು, ಸ್ನೇಹಿತನೊಂದಿಗೆ ನಮಾಜ್ ಮಾಡಿ, ಪ್ರೇಯಸಿಯೊಂದಿಗೆ ಚರ್ಚ್ನಲ್ಲಿ ಕ್ಯಾಂಡಲ್ ಹಚ್ಚುತ್ತೇನೆ..
ನನ್ನ ದೇವರು - ಮಾನವೀಯತೆ
- ಚೇತನ್ ಗವಿಗೌಡ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ