ಕುರುಡು ಕಾಣ್ಕೆಯ ಕವಿತೆ
ಏನದು ನಾಡಿನಲ್ಲಿ ಗಲಭೆ?
ಎಲ್ಲರೂ ಕಿರುಚುತ್ತಿದ್ದಾರೆ
ನನಗೆ ಕಣ್ಣಿದ್ದರೆ ನೋಡಬಹುದಿತ್ತು!
ಆದರೇನು ಮಾಡಲಿ..
ಎಲ್ಲ ದನಿಗಳು ಒಟ್ಟಿಗೆ ದಾಳಿ ಮಾಡುವಾಗ
ಯಾವುದಕ್ಕೆ ಕಿವಿಕೊಡಲಿ??
ಈಗ ನೀನೇ ನನಗೆ ಕಣ್ಣು!!
ಪ್ರಿಯೆ,
ನನಗೆ ಕಣ್ಣಿದ್ದೂ ಅರ್ಥವಾಗುತ್ತಿಲ್ಲ
ಇನ್ನು ನಿನಗೇನು ಹೇಳಲಿ?
ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲವಂತೆ!
ಈಕಡೆಯವರು ಈಕಡೆಗೆ ತೂಗುವಂತೆ
ಪತ್ರ ಬರೆಯುತ್ತಿದ್ದಾರೆ..
ಆಕಡೆಯವರು ಆಕಡೆಗೆ ತೂಗುವಂತೆ
ಭಾಷಣ ಮಾಡುತ್ತಿದ್ದಾರೆ..
ನನಗೂ ತಲೆಕೆಟ್ಟಿಹೋಗಿದೆ!!
ಪ್ರಿಯ,
ಪಠ್ಯವಿಲ್ಲದೆ ಮಕ್ಕಳೇನು ಓದುತ್ತಾರೆ?
ಸರ್ಕಾರ ಈಗ ನಿದ್ದೆ ಮಾಡುತ್ತಿಲ್ಲ ತಾನೇ??
ಯಾಕೆ ಇಷ್ಟೊಂದು ತಡವಾಗುತ್ತಿದೆ..
ಮಕ್ಕಳ ದಿನಗಳಿಗೆ ಬೆಲೆಯೇ ಇಲ್ಲವೇ??
ಇದೇನು ಹುನ್ನಾರವೇ???
ಪ್ರಿಯೆ,
ಸರ್ಕಾರ ನಿದ್ದೆಯಲ್ಲಿದ್ದಿದ್ದರೆ
ಎದ್ದಮೇಲಾದರೂ ತಿಳಿಯುತ್ತಿತ್ತು
ಆದರೆ ಈಗ ಸತ್ತಂತೆ ನಟಿಸುತ್ತಿದೆ
ನಟಿಸುವವರನ್ನು ಪ್ರಶಂಸಿಸುವುದೇ ಪ್ರೇಕ್ಷಕರ ಧರ್ಮವಲ್ಲವೇ?!
ಬೇಡದಿದ್ದನ್ನು ತೆಗೆದು
ಇತಿಹಾಸವನ್ನು ತಿರುಚಿ ಅವಮಾನಿಸಲಾಗುತ್ತಿದೆಯಂತೆ!
ಈಗ ಸತ್ಯ-ಮಿಥ್ಯಗಳೆರಡಕ್ಕೂ ವ್ಯತ್ಯಾಸವಿಲ್ಲದಂತಾಗಿದೆ
ಪದವಿಗಳೇ ಇಲ್ಲದವರು ಪಠ್ಯ ಆರಿಸಿದ್ದಾರಂತೆ
ಅದರಲ್ಲಿ ಅವರಿಗೆ ಬೇಕಾದ್ದೇ ಹೆಚ್ಚಿದೆಯಂತೆ!
ಅದು ಸಮಸಮಾಜದ ಕನಸನ್ನು ನುಂಗುತ್ತಿದೆಯಂತೆ
ಇವರಿವರ ರಾಜಕೀಯದಲ್ಲಿ ಮಕ್ಕಳ ನಗು ಕರಗುತ್ತಿದೆ
ಪ್ರಿಯ,
ಹಾಗಾದರೆ ಮುಂದಿನ ಕತೆ?
ನೀನು ಹೇಳುವ ಪ್ರಕಾರ
- ಕಣ್ಣಿಲ್ಲದ ನಾನೇ ಅದೃಷ್ಟವಂತೆ ಎನಿಸುತ್ತಿದೆ
ಇದಕ್ಕೆಲ್ಲ ಪರಿಹಾರವಿಲ್ಲವೇನು??
ಪ್ರಿಯೆ,
ಖಂಡಿತ ನೀನು ಪುಣ್ಯವಂತೆ!
ಕವಿತೆ ಬರೆದ ನಾನೇ ಈಗ ಹಲ್ಲಿಲ್ಲದವರಿಗೂ ಕಡಲೆ
ಹೇಗಾದರೂ ತಪ್ಪಿಸಿಕೊಂಡು
ಅವರ ಹೊಟ್ಟೆಯಲ್ಲಿ ಗಿಡವಾಗಿ ಬೆಳೆದು
ಹೊಟ್ಟೆ ಬಗೆಯುವ ಆಸೆಯಾಗುತ್ತಿದೆ ನೋಡು!
ಮುಂದಿನ ಕತೆಯನ್ನು ಇನ್ನೊಂದು ಕವಿತೆ ಹೇಳುತ್ತದೆ
ಇದ್ದವರು ಉಣ್ಣುತ್ತಾರೆ
ಇಲ್ಲದವರು ಸಾಯುತ್ತಾರೆ
ನಮ್ಮಂಥವರು ದಿನ ಬೇಯುತ್ತಾರೆ
ಅವರು ಉರಿಯುತ್ತಲೇ ಇರುತ್ತಾರೆ
ಮಳೆ ಬಂದಾಗ ಅಡಗಿಹೋಗುತ್ತಾರೆ
ಈಗ ಮಳೆ ಬರಬೇಕಿದೆ ಪ್ರಿಯೆ
ನಾನು ಹೊಟ್ಟೆಯೊಳಗೆ ಚಿಗುರುತ್ತೇನೆ
- ಅದೇ ಪರಿಹಾರ
# ಅನಂತ ಕುಣಿಗಲ್
ಸತ್ಯ..
ಪ್ರತ್ಯುತ್ತರಅಳಿಸಿ