ವಿಷಯಕ್ಕೆ ಹೋಗಿ

ಬದುಕು ಮಾಯೆಯ ಆಟ - ಲೇಖನ - ಪುನೀತ್ ಕುಮಾರ್


ಬದುಕು ಮಾಯೆಯ ಆಟ

ಅಂದು ಸೋಮವಾರ. ಹಿರಿಮಗನ ಲಗ್ನ ನಿಶ್ಚಯದ ಮಾತುಕತೆಯ ಸಂಭ್ರಮ ಮನೆಯಲ್ಲಿ. ಬಂಧು ಬಾಂಧವರು ಸೇರಿದ್ದಾರೆ. ಹೆಣ್ಣಿನ ಕಡೆಯವರು ಬಂದಿದ್ದಾರೆ. ಮಾತುಕತೆ ನಡೆದು ಎಲ್ಲರೂ ಒಪ್ಪಿ ಮದುವೆ ನಿಶ್ಚಯವಾಗಿ ಲಗ್ನ ಪತ್ರಿಕೆಯೂ ಬರೆಸಿಬಿಡುತ್ತಾರೆ. ಮನೆಯಲ್ಲಿ ಖುಷಿಯ ವಾತಾವರಣದ ಅನುರಣನ. ಇದಾದ ಸರಿಯಾಗಿ ಒಂದುವಾರಕ್ಕೆ (ಅಂದೂ ಸೋಮವಾರ) ಕಿರಿಮಗ ಇದ್ದಕ್ಕಿದ್ದಂತೆ ಹುಷಾರು ತಪ್ಪುತ್ತಾನೆ. ಹಿರಿಮಗ ಮನೆಯಲ್ಲಿರುವುದಿಲ್ಲ, ಪ್ರವಾಸಕ್ಕೆ ಹೋಗಿದ್ದಾನೆ . ಮನೆಯಲ್ಲಿದ್ದ ತಂದೆ ತಾಯಿ ಮಾಮುಲಿ ಜ್ವರ ಇರಬೇಕೆಂದು ಮೊದಲಿಗೆ ಮಗನೆಡೆಗೆ ಅಷ್ಟು ಗಮನ ಹರಿಸುವುದಿಲ್ಲ. ಎರಡು ದಿನಗಳ ಬಳಿಕ ಮಗನಿಗೆ ವಾಂತಿಯಾದಾಗ ತಂದೆ ತಾಯಿಗೆ ಗಾಬರಿಯಾಗುತ್ತದೆ. ತತ್‍ಕ್ಷಣ ತಂದೆ ಡಾಕ್ಟರನ್ನು ಕರೆತರುತ್ತಾರೆ. ಅವರು ಔಷಧಿ ಕೊಟ್ಟು ಹೋಗುತ್ತಾರೆ. ಆದರೆ ವಾಂತಿ ನಿಲ್ಲುವುದಿಲ್ಲ. ತಂದೆ-ತಾಯಿಗೆ ಗಾಬರಿ. ಸಾಮಾನ್ಯವಾಗಿ, ಜ್ವರ ಬಂದಾಗಲೆಲ್ಲ ಹುಡುಗನ್ನ ಪರೀಕ್ಷಿಸುತ್ತಿದ್ದ ಪರಿಚಯದ ಡಾಕ್ಟರು ಸಹ ಆಗ ಊರಲ್ಲಿರುವುದಿಲ್ಲ. ಬಹುಶಃ ಈ ಡಾಕ್ಟರ್ ಕೊಟ್ಟ ಔಷಧಿ ಒಗ್ಗಲಿಲ್ಲ ಅನಿಸತ್ತೆ. ಪರಿಚಯದ ಡಾಕ್ಟರು ಬಂದ ಮೇಲೆ ತೋರಿ ಇನ್ನೊಮ್ಮೆ ಔಷಧಿ ಪಡೆದರಾಯಿತು ಅಷ್ಟರಲ್ಲಿ ಜ್ವರ ಕಡಿಮೆಯಾಗಬಹುದು ಎಂದು ತಂದೆ-ಮಗ ವಿಚಾರ ಮಾಡಿ, ತೀರ್ಮಾನಕ್ಕೆ ಬಂದು ಸುಮ್ಮನಾಗುತ್ತಾರೆ. ಪರಿಚಯದ ಡಾಕ್ಟರ್ ಬಂದ ಮೇಲೆ ಅವರ ಬಳಿ ಪರೀಕ್ಷಿಸಿಕೊಳ್ಳಲು ಹೋಗುತ್ತಾರೆ. ಡಾಕ್ಟರ್ ಪರೀಕ್ಷಿಸಿ ಟೈಫಾಯ್ಡ್ ಎಂದು ತಿಳಿಸಿ, ಔಷಧಿ ಕೊಟ್ಟರೂ ಅವರಿಗೂ ಮನದ ಮೂಲೆಯಲ್ಲೆಲ್ಲೂ ಹುಡುಗನ ಸ್ಥಿತಿ ಗಂಭೀರವಾಗಿರುವ ಸೂಚನೆ ದೊರೆತು ಮನಸ್ಸಲ್ಲಿ ದುಗುಡ ತುಂಬಿಕೊಳ್ಳುತ್ತದೆ. ಆದರೂ ಔಷಧಿ ಮೇಲೆ ನಂಬಿಕೆ ಇಟ್ಟು ಧೈರ್ಯ ತಂದುಕೊಂಡು ಹುಡುಗನ ತಂದೆಗೆ "ಹೆದರಬೇಕಿಲ್ಲ ವಾಸಿಯಾಗುತ್ತದೆ" ಎಂದು ಅಭಯ ನೀಡಿ ಕಳಿಸುತ್ತಾರೆ. ಇತ್ತ, ಎರಡು ಮೂರು ದಿನ ಔಷಧಿ ತೆಗೆದುಕೊಂಡರೂ ಹುಡುಗನಿಗೆ ಗುಣವಾಗೋದಿಲ್ಲ. ದಿನೇದಿನೇ ಜ್ವರ ಹೆಚ್ಚಾಗುತ್ತಲೇ ಇರುತ್ತದೆ. ಕೊನೆಗೆ ಹುಡುಗನಿಗೆ ಸ್ಮತಿ ತಪ್ಪಿ.... ತರುವಾಯ ಸನ್ನಿವಾತಕ್ಕೆ ತಿರುಗಿ.. ಜ್ವರ ಬಂದ ಒಂದೇ ವಾರದಲ್ಲಿ ದುರದೃಷ್ಟವಶಾತ್ ಹುಡುಗ ಸತ್ತೇ ಹೋಗುತ್ತಾನೆ! ಆ ದಿನವೂ ಸೋಮವಾರ! 

ಏನಿದು ಮಾಯೆ! ಸೋಮವಾರದ ಕರಾಳ ಮುಖವೋ? ಹದಿನೈದು ದಿನಗಳ ಹಿಂದೆ ತನ್ನ ಅಣ್ಣನ ಮದುವೆ ನಿಶ್ಚಯದ ಸಂಭ್ರಮದಲ್ಲಿ ಮನೆ ತುಂಬ ಲವಲವಿಕೆಯಿಂದ ಓಡಾಡುತ್ತಿದ್ದ ಮಗ ಈ ಕ್ಷಣ ಕಣ್ಣಮುಂದಿಲ್ಲ ಎಂದರೆ ಆ ನೋವು ಸಹ್ಯವೇ? ಆದರೆ ಸಾವಿಗೆ ಕಾಲದೇಶಗಳ ಭೇದವುಂಟೆ? ಹೀಗೆ ಅನಿರೀಕ್ಷಿತವಾಗಿ ಕಾಯಿಲೆ ಬಿದ್ದು ಸತ್ತ ಹುಡುಗ ಇನ್ಯಾರೂ ಅಲ್ಲ ಕನ್ನಡದ ಹಾಸ್ಯಸಾಹಿತಿ ಬೀಚಿಯವರ ಕಿರಿಯಮಗ ಪಾಪಣ್ಣೀ.

'1967 ನವೆಂಬರ್ 6, ಸೋಮವಾರ ನನ್ನ ಜೀವನದ ಅತ್ಯಂತ ದುರ್ದಿನ!'- ಬೀಚಿಯವರೇ ತಮ್ಮ ಆತ್ಮಕಥನದಲ್ಲಿ ತಮ್ಮ ಕಿರಿಮಗನ ಸಾವಿನ ಘಟನೆಯ ಬಗ್ಗೆ ಪ್ರಸ್ತಾವಿಸುತ್ತ ಬರೆದಿಕೊಂಡಿರುವ ಸಾಲಿದು. ಮನುಷ್ಯನೆಂದಮೇಲೆ ಸಾವು ನೋವು ಸಹಜ. ಆದರೆ ವಿಧಿ ಇಷ್ಟು ಕ್ರೂರವಾದರೆ ಹೇಗೆ? ಬೀಚಿ ಅವರ ಮಗನ ವಯಸ್ಸು ಆಗಿನ್ನೂ ಇಪ್ಪತ್ತೊಂದು! ಆಗಷ್ಟೇ ಬಿ. ಕಾಂ ಮುಗಿದಿರುತ್ತದೆ. ವ್ಯಾಯಮ, ಈಜುವುದು ಎಂದರೆ ಬಹು ಇಷ್ಟ. ಉಕ್ಕಿನ ಮೈ. 'ಕೆ. ವಿ. ಅಯ್ಯರ್' ಅವರ ಅಪ್ಪಟ ಶಿಷ್ಯ. ಅಪ್ಪನ ತಪ್ಪು ಪದಪ್ರಯೋಗಗಳನ್ನು ತಿದ್ದುವುದು, ಅಪ್ಪ ಬರೆದ ಪುಸ್ತಕಗಳನ್ನು ಓದಿ ಅಭಿಪ್ರಾಯ ತಿಳಿಸುವುದು.. ಹೀಗೆ ಅಪ್ಪನ ಕಾರ್ಯಗಳಲ್ಲಿ ಪ್ರಮುಖ ಸಹಾಯಕ. ದೃಢಕಾಯನಾಗಿದ್ದ, ಚುರುಕಾಗಿದ್ದ ಹುಡುಗ ಇದ್ದಕ್ಕಿದ್ದಂತೆ ಹೀಗೆ ಅನಾರೋಗ್ಯಕ್ಕೀಡಾಗಿ ಸತ್ತರೆ ಆ ದುಃಖ ಸಹಿಸಿಲು ಸಾಧ್ಯವೇ? ಅದೇ ನೋವಿನಲ್ಲಿ ಬೀಚಿಯವರು ಹೀಗೆ ಬರೆದಿದ್ದಾರೆ: "ವರ್ಷಗಟ್ಟಲೆ ನಗಿಸಿದೆ ನಕ್ಕೆ. ಬಾಳನ್ನು ನೋಡಿ ನಗುವಷ್ಟು ಸುಲಭವೇ ಮಗನ ಸಾವನ್ನು ಸಹಿಸುವುದು?"

"ಮಗುವಾಗಿದ್ದಾಗ ತಂದೆ ತಾಯಿಗಳ ಸಾವು. ಮುದುಕನಾದಾಗ ಮಕ್ಕಳ ಸಾವು. ಎರಡೂ ಅಸಹನೀಯ. ಈ ಎರಡು ನನ್ನ ಪಾಲಿಗೆ ಬಂದವು" ಎಂದು ಅತ್ಯಂತ ನೋವಿನಲ್ಲಿ ಬೀಚಿ ಹೇಳಿಕೊಂಡಿದ್ದಾರೆ. ಬೀಚಿಯವರ ಬಾಲ್ಯದ ದಿನಗಳು ಸಹ ಸುಗಮವಾಗಿರಲಿಲ್ಲ. ಇವರು ಹುಟ್ಟಿದ ಕೆಲವೇ ಕಾಲದಲ್ಲಿ ತಂದೆ ತೀರಿಕೊಂಡಿದ್ದರು. ಇವರಿಗೆ ಆರೇಳು ವರ್ಷವಿದ್ದಾಗ ತಾಯಿ ಭಾರತಮ್ಮ ಅಸುನೀಗಿದ್ದರು. ಹರಪ್ಪನಹಳ್ಳಿಯಲ್ಲಿ ಅತ್ತೆ ರಿಂದವ್ವನ ಆಶ್ರಯದಲ್ಲಿ ಇವರು, ಇವರ ಹಿರಿಯಕ್ಕ ಹಾಗೂ ಅಣ್ಣ ಬೆಳೆದಿದ್ದರು. ಅವರಿವರ ಮನೆಗೆ ಹೋಗಿ ಕೈಯೊಡ್ಡಿ ಕಾಸು ತಂದು, ಕೂಡಿಟ್ಟು ಶಾಲೆಯ ಶುಲ್ಕ ಕಟ್ಟಬೇಕಾದ ಸ್ಥಿತಿ. ಬಾಲ್ಯದಲ್ಲೇ ಎಷ್ಟೋ ನೋವು, ಅಪಮಾನಗಳನ್ನು ಸಹಿಸಬೇಕಾಗಿತ್ತು. ಇದೀಗ ಮಗನ ಅನಿರೀಕ್ಷಿತ ಸಾವು ಬೀಚಿಯನ್ನು ತೀವ್ರವಾಗಿ ಕಂಗೆಡಿಸುತ್ತದೆ.

ಸಂತೈಸಲು ಬಂದಿದ್ದ ಬಂಧುಗಳು ತಂತಮ್ಮ ಊರುಗಳಿಗೆ ಹಿಂತಿರುಗಿದ್ದಾರೆ. ಮನೆಯಲ್ಲಿ ಉಳಿದವರು ಮೂವರು- ಬೀಚಿ, ಅವರ ಹೆಂಡತಿ, ಅವರ ಹಿರಿಮಗ. ಒಬ್ಬೊಬ್ಬರು ಒಂದು ಕೋಣೆಯಲ್ಲಿ ಅಳುತ್ತ ಮಲಗುವುದೇ ಕೆಲಸ. ಮನೆಯಲ್ಲಿ ಸ್ಮಶಾನಮೌನ. ಮನೆ ಮನೆಯಂತಿಲ್ಲ. ಮಾತಿಲ್ಲ ಕತೆಯಿಲ್ಲ. ಬೀಚಿಯವರಿಗೂ ಇದೊಂದು ಅಸಹನೀಯ, ಅನಿರೀಕ್ಷಿತ ಹೊಡೆತ. ಈ ನೋವಿಂದ ಹೊರಬರಲು ದಾರಿಯೇ ತೋಚದ ಸ್ಥಿತಿ. ದಿನಗಳು ಉರುಳುತ್ತಿರುತ್ತವೆ. ಪುತ್ರಶೋಕವನ್ನು ಮರೆಯಲು ಕೈಗೆ ಸಿಕ್ಕ ಪುಸ್ತಕವನ್ನೆಲ್ಲ ಓದುತ್ತಾ ಕೂರುತ್ತಾರೆ ಬೀಚಿ. ಹೀಗೆ ಒಂದು ದಿನ ಬೀಚಿಯವರಿಗೆ, ಮಹಾತತ್ತ್ವಜ್ಞಾನಿ ಡಾ|| ರಾಧಾಕೃಷ್ಣನ್ ಅವರು ಬರೆದ ಸಾಲೊಂದು ಕಣ್ಣಿಗೆ ಬೀಳುತ್ತದೆ : You cannot alter an event that has already happened; but you can certainly alter your attitude towards it.

ಇದನ್ನು ಓದುತ್ತಿದ್ದಂತೆ ಬೀಚಿ ಅವರು ಚಕಿತರಾಗುತ್ತಾರೆ. ಕಗ್ಗತ್ತಲೆ ಕಳೆದು ಹೊಸ ಬೆಳಕೊಂದು ಮೂಡಿದಂತಾಗುತ್ತದೆ. ಎಷ್ಟು ದಿನ ತಾವೂ ದುಃಖದಲ್ಲಿ ಮುಳುಗಿ ಮನೆಯವರನ್ನೂ ದುಃಖಕ್ಕೆ ದೂಡಿ, ಇರುವ ಮಗನ ಸಂತೋಷವನ್ನು ಕಸಿದುಕೊಳ್ಳುವುದು ಎಂದು ಅವರಿಗೂ ಕೆಲವೊಂದು ಸಲ ಅನಿಸಿರುತ್ತದೆ. ಈಗ ಆ ಉಕ್ತಿಯೂ ಅವರಿಗೆ ಪುಷ್ಟಿನೀಡುತ್ತದೆ . ಅವರಿಗೊಂದು ಹೊಸ ಚೇತನ ನೀಡುತ್ತದೆ. ಹೊಸ ದಾರಿ ತೋರುತ್ತದೆ. ಮನದ, ಮನೆಯ ಈ ಗಾಢ ಮಬ್ಬನ್ನು ಕಳೆಯಬೇಕಾದರೆ ಆದಷ್ಟು ಬೇಗ ನಿಶ್ಚಯವಾಗಿರುವ ಮಗನ ಮದುವೆ ಮಾಡಿ ಮುಗಿಸಬೇಕೆಂದು ನಿರ್ಧರಿಸುತ್ತಾರೆ. ತತ್‍ಕ್ಷಣ ತಮ್ಮ ಅಣ್ಣನಿಗೊಂದು ಕಾಗದ ಬರೆದು ವಿಷಯ ಪ್ರಸ್ತಾವ ಮಾಡುತ್ತಾರೆ. 

ಕೊಂಚ ಆಲೋಚಿಸಿ ಮದುವೆ ನಿಶ್ಚಯವಾದ ಕೆಲವೇ ದಿನಗಳಲ್ಲಿ ಗಂಡಿನ ಮನೆಯಲ್ಲೊಂದು ಸಾವಾದರೆ ಸಹಜವಾಗಿ ಜನರ ಕೆಂಗಣ್ಣಿಗೆ ಗುರಿಯಾಗೂದು ಆ ಹೆಣ್ಣು. ಇಲ್ಲೂ ಅದೇ ರೀತಿ ಆಗುತ್ತದೆ. ಬಂಧುವರ್ಗ ಈ ಮದುವೆ ನಡೆಯುವುದಿಲ್ಲ ಎಂದೇ ನಿಶ್ಚಯಿಸಿರುತ್ತದೆ. ಹುಡುಗಿಯ ಕಾಲ್ಗುಣ ಸರಿ ಇಲ್ಲ ಎಂದು ಕೆಲವರು ಚಕಾರವೆತ್ತುತ್ತಾರೆ. ಆದರೆ ಬೀಚಿ ಅದಕ್ಕೆಲ್ಲ ಕಿವಿಗೊಡುವುದಿಲ್ಲ.. ಅದು ಇದು ಎಂದು ಬಾಯಿಗೆ ಬಂದಂತೆ ಆಡುತ್ತಿದ್ದ ಬಂಧುಗಳಿಗೆ ಬೀಚಿಯವರು "ಆ ಹುಡುಗಿ ನನ್ನ ಕಿರಿಮಗನನ್ನು ಕೊಂದಳೇ? ಇವನು ಸತ್ತರೆ ಅವಳದೇನು ತಪ್ಪು? ಆ ಹುಡುಗಿಯ ತಲೆಯ ಮೇಲೆ ಗೂಬೆಯನ್ನು ಕೂಡಿಸಿಬಿಡುವುದೇ? ಅದು ನನ್ನ ಮಗಳಾಗಿದ್ದರೆ?" ಎಂದು ಖಡಾಖಂಡಿತವಾಗಿ ಹೇಳಿ ಎಲ್ಲರಿಗೂ ತಿಳಿಸಿ ಬರುವ ಮೇ ತಿಂಗಳೊಳಗೆ ಹಿರಿಮಗನ ಮದುವೆಯೂ ಮಾಡಿಬಿಡುತ್ತಾರೆ. ಈ ಮದುವೆಯಿಂದ ಮನೆಗೆ ಮತ್ತೆ ವಿಶೇಷ ಲವಲವಿಕೆ ಬರುತ್ತದೆ. ಮುಂದೆ ಆ ಮಗ-ಸೊಸೆ ಸುಖವಾಗಿ ಬಾಳುವೆ ಮಾಡುತ್ತಾರೆ.

ಬೀಚಿಯವರ ಆತ್ಮಕಥನದಲ್ಲಿ("ನನ್ನ ಭಯಾಗ್ರಫಿ") ನಮ್ಮ ಹೃದಯವನ್ನು ಆರ್ದ್ರಗೊಳಿಸುವ ಘಟನೆಗಳು ಈ ಮೇಲಿನವು(ಕಿರಿಮಗನ ಸಾವು, ಹಿರಿಮಗನ ಮದುವೆ ವಿಚಾರ). ಈ ಎರಡೂ ಘಟನಾವಳಿಗಳನ್ನು ನಾನು ನಿಮ್ಮ ಮುಂದಿಡಲು ಮತ್ತೊಂದು ಮುಖ್ಯಕಾರಣ- ಇವು ಬೀಚಿಯವರ ವ್ಯಕ್ತಿತ್ವವನ್ನು ಸ್ಫುಟವಾಗಿ ನಮಗೆ ಪರಿಚಿಯಿಸುವ, ಪ್ರಚುರಪಡಿಸುವ ನಿದರ್ಶನಗಳು. 

ಕಿರಿಮಗನ ಸಾವಿನ ನೋವಿನಿಂದ ಎದ್ದು ಬಂದು ಮತ್ತೆ ಬದುಕನ್ನು ಧ್ಯಾನಿಸುವುದು; ಮದುವೆ ನಿಶ್ಚಯದ ಬಳಿಕ ತಮ್ಮ ಕಿರಿಮಗನ ಸಾವಾದರೂ ನಿಶ್ಚಯಿಸಿದ ಹುಡುಗಿಯ ಜೊತೆಗೇ ಹಿರಿಮಗನ ಮದುವೆ ಮಾಡುವುದು- ಇವು ಬೀಚಿಯವರ ದಿಟ್ಟತನ, ವಿಶಾಲ ಮನೋಭಾವ, ದೃಷ್ಟಿಕೋನ, ವೈಚಾರಿಕತೆ ಹೇಗಿತ್ತು ಎಂಬುದನ್ನು ತಿಳಿಯಪಡಿಸುತ್ತವೆ. ಬೀಚಿ ಕೇವಲ ತಮ್ಮ ಪುಸ್ತಕಗಳ ಮೂಲಕ, ಬರಹಗಳ ಮೂಲಕ ಸಮಾಜಿಕ ಕಳಕಳಿ, ವೈಚಾರಿಕತೆ, ಸಮಾನತೆಗಳ ಬಗ್ಗೆ ಬರೆದವರಲ್ಲ, ಬದುಕಲ್ಲೂ ಅಳವಡಿಸಿಕೊಂಡವರು. ನುಡಿದಂತೆ ನಡೆದವರು ಎಂಬುದನ್ನು ಈ ಘಟನೆಗಳ ಮೂಲಕ ನಾವು ಮನಗಾಣಬಹುದು.

* * *

ಸರಿ, ಈಗ ನಮ್ಮ ಬೀಚಿಯವರ ಸಾಹಿತ್ಯ ಜೀವನದ ಬಗ್ಗೆ ಒಂದಷ್ಟು ತಿಳಿಯೋಣ. ಕನ್ನಡ ಸಾಹಿತ್ಯ ಲೋಕದಲ್ಲಿ ದಿಟ್ಟ ಬರವಣಿಗೆಗೆ, ವೈಶಿಷ್ಟ್ಯಪೂರ್ಣ ಹಾಸ್ಯಬರಹಗಳಿಗೆ ಹೆಸರಾದವರು ಬೀಚಿ.. ಅವರ ವಿಶಿಷ್ಟತೆಗೆ ನಿದರ್ಶನವೇ ಅವರ ಹೆಸರನ್ನು ಅವರು ಬರೆದುಕೊಂಡ ರೀತಿ. ಕನ್ನಡದ 'ಬೀ' ಗೆ ಇಂಗ್ಲಿಷಿನ 'Chi' ಸೇರಿಸಿ 'ಬೀChi' ಎಂದು ಬರೆಯುತ್ತಿದ್ದರು. ಬೀChi ಎಂದೇ ಪ್ರಸಿದ್ಧರಾದವರು. ಅಷ್ಟಕ್ಕೂ 'ಬೀಚಿ' ಎಂಬ ಹೆಸರೇ ವಿಚಿತ್ರವಾಗಿದೆಯಲ್ಲ ಏನಿದರ ಅರ್ಥ ಎಂದು ನೀವು ಯೋಚಿಸುತ್ತಿರಬಹುದು. ಇದರ ಬಗ್ಗೆ ಅವರೇ ಹೀಗೆ ಬರೆದಿದ್ದಾರೆ : "ಪಾರ್ಥಸಾರಥಿ ಪಾಚು ಆಗುತ್ತಾನೆ. ಕೃಷ್ಣ ಕಿಟ್ಟಿ ಆಗುತ್ತಾನೆ. ನಾರಾಯಣ ನಾಣು, ಅಂತೆಯೇ ಭೀಮಸೇನ ಬೀಚಿಯಾದ ಅವರಿವರ ಬಾಯಲ್ಲಿ". ಹೌದು ಬೀಚಿಯವರ ನಿಜನಾಮ ಭೀಮಸೇನ. ಊರಿನ ಜನರ ಬಾಯಲ್ಲಿ ಬೀಚಿ ಆಗಿ ಮುಂದೆ ಅದೇ ಹೆಸರಿನಲ್ಲಿ ಕನ್ನಡದ ಹಾಸ್ಯಸಾಹಿತಿಯಾಗಿ ಖ್ಯಾತಿ ಪಡೆದವರು. 

ಎಸ್ ಎಸ್ ಎಲ್ ಸಿ ಮುಗಿಸಿ ಇಪ್ಪತ್ತೈದು ರೂಪಾಯಿ ಸಂಬಳದ ಅಟೆಂಡರ್ ಆಗಿ ಸರ್ಕಾರಿ ನೌಕರಿ ಹಿಡಿದು ಮದುವೆಯಾಗಿ ಜೀವನ ನಡೆಸುತ್ತಿದ್ದ ಬೀಚಿಯವರು ಸಾಹಿತ್ಯಲೋಕಕ್ಕೆ ಬಂದದ್ದೆ ಒಂದು ಅಚ್ಚರಿ. ಅದೂ ಕನ್ನಡ ಸಾಹಿತಿ ಆಗಿದ್ದು ಮತ್ತೊಂದು ವಿಸ್ಮಯ ಎಂದರೆ ನೀವು ನಂಬಲೇಬೇಕು. ಏಕೆಂದರೆ, ಪ್ರಾಥಮಿಕ ಹಂತದಿಂದಲೂ ಇವರು ಶಾಲೆಯಲ್ಲಿ ಕಲಿತದ್ದು ತೆಲುಗು ಭಾಷೆಯಲ್ಲಿ. ಮನೆಯ ಮಾತು ಕನ್ನಡವೇ ಆಗಿದ್ದರೂ ಶಾಲೆಯಲ್ಲಿ ಕನ್ನಡ ಕಲಿತದ್ದು- ಎಸ್ಎಸ್ಎಲ್‍ಸಿ ಹಾಗೂ ಅದರ ಹಿಂದಿನ ತರಗತಿಯಲ್ಲಿ ಮಾತ್ರ. ಶಾಲೆಯ ನಂಟು ಮುಗಿದ ಬಳಿಕವೂ ಕನ್ನಡ ಸಾಹಿತ್ಯದ ಒಡನಾಟ ಅಷ್ಟಿಲ್ಲ‌. ಕೆಲವು ಇಂಗ್ಲಿಷ್ ಪುಸ್ತಕಗಳನ್ನು ಓದುವ ಅಭಿರುಚಿಯಿತ್ತು ಅಷ್ಟೆ. ಆದರೆ ಅವರ ಬರಹ ಪಯಣ ಶುರುವಾಗಿದ್ದು ವಿವಿಧ ಸ್ತರಗಳಲ್ಲಿ. 

ಅದು ಹೀಗೆ :

ಗದುಗಿನಲ್ಲಿ ಕೆಲಸದಲ್ಲಿದ್ದಾಗ ವಾರಪತ್ರಿಕೆಗೆಯ ಸುದ್ದಿಯೊಂದಕ್ಕೆ ಪ್ರತಿಕ್ರಿಯೆ ಬರೆಯಬೇಕೆಂದೆನಿಸಿ ಒಂದು ಲೇಖನ ಬರೆದು ಕಳಿಸಿದ್ದರು. ಅದು ಪ್ರಕಟವೂ ಆಗುತ್ತದೆ. ಪ್ರಕಟವಾಗಿ ಪತ್ರಿಕೆ ಬಂದಾಗ ಬೀಚಿಗೆ ಅತೀವ ಆನಂದ! ಅನಂತರ ಹುಬ್ಬಳ್ಳಿಯಲ್ಲಿದ್ದಾಗ, ಅಲ್ಲಿ ಇಂಗ್ಲಿಷಿನಲ್ಲಿ ಒಂದು ಲೇಖನ ಅರ್ಧ ಬರೆದು ಇಟ್ಟಿರುತ್ತಾರೆ. ಅನಿರೀಕ್ಷಿತ ಭೇಟಿಯಿತ್ತ ಸ್ನೇಹಿತರಾದ ಮಳೆಬೆನ್ನೂರು ಸತ್ಯವಂತರಾಯರಿಗೆ ತಮ್ಮ ಇಂಗ್ಲಿಷ್ ಲೇಖನ ತೋರಿಸಿ ಅಭಿಪ್ರಾಯ ಕೇಳಿದಾಗ, ಸತ್ಯವಂತರಾಯರು “ನೀವು ಕನ್ನಡದಲ್ಲಿ ಬರೆಯಿರಿ” ಎಂಬ ಸಲಹೆ ನೀಡುತ್ತಾರೆ. ಆಗ ಬೀಚಿಯವರು ಈ ಸಲಹೆಯ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೂ ಮುಂದೆ ಕನ್ನಡ ಸಾಹಿತಿ ಆಗುವುದು ಸುವಿದಿತ. ಒಟ್ಟಿನಲ್ಲಿ ಬೀಚಿಯವರು ಕನ್ನಡ ಬರಹಗಾರರಾಗಿದ್ದಕ್ಕೆ ಮುಖ್ಯ ಪ್ರೇರಣೆ ಸತ್ಯವಂತರಾಯರು ಎಂದರೆ ತಪ್ಪಿಲ್ಲ. ಸ್ನೇಹಿತರ ಸಲಹೆಯಂತೆ ಕನ್ನಡದಲ್ಲಿ ಬರೆಯಲು ಶುರುಮಾಡುತ್ತಾರೆ ಬೀಚಿ. ಆಗ ಅವರು ಬರೆದ 'ಎರಡು ಕುನ್ನಿ' ಎಂಬ ಸಣ್ಣ ಕಥೆ 'ಪ್ರೇಮ' ಎಂಬ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಅದೇ ಹುಮ್ಮಸ್ಸಿನಲ್ಲಿ ‘ಗರುಡ ಪುರಾಣ', 'ನಾನೇ ಸತ್ತಾಗ' ಎಂಬ ನಾಟಕಗಳನ್ನು ಬರೆಯುತ್ತಾರೆ. ಪ್ರಕಟವಗುತ್ತವೆ. ಕೆಲಸದ ನಿಮಿತ್ತ ಮದ್ರಾಸಿಗೆ ಬಂದಾಗ ಅಲ್ಲಿ ಟಿ. ಪಿ. ಕೈಲಾಸಂ, ಕುಲಕರ್ಣಿ ಶ್ರೀನಿವಾಸ, ಕಾಳಿಂಗರಾಯರ ಒಡನಾಟದಿಂದ ನಾಟಕದಲ್ಲಿ ಆಸಕ್ತಿ ಬೆಳೆಯುತ್ತದೆ. ನಾಟಕಗಳನ್ನು ಬರೆಯುತ್ತ, ನಾಟಕಗಳಲ್ಲಿ ಅಭಿನಯಿಸುತ್ತ, ಆಕಾಶವಾಣಿಯಲ್ಲಿ ನಾಟಕಗಳನ್ನು ಪ್ರಸ್ತುತಪಡಿಸಲು ತೊಡಗುತ್ತಾರೆ. ಹೀಗೆ ಅವರ ಸಾಹಿತ್ಯ ಕೃಷಿ ಚಿಗುರೊಡೆಯುತ್ತದೆ. ಮತ್ತೆ ಬಳ್ಳಾರಿ ಬಂದಾಗ ಶಂ. ಬಾ. ಜೋಶಿ ಅವರ ಸ್ನೇಹವಾಗುತ್ತದೆ. ಅವರ ಸಹಾಯದಿಂದ ಇವರ ಮೊದಲ ಪುಸ್ತಕಗಳು- ರೇಡಿಯೋ ನಾಟಕಗಳು (ಆಕಾಶವಾಣಿಗಾಗಿ ಬರೆದ ನಾಟಕಗಳು) ಹಾಗೂ ಮಾತ್ರೆಗಳು(ರಾಜರತ್ನಂ ಅವರ 'ಹನಿಗಳು' ಪುಸ್ತಕದಿಂದ ಪ್ರೇರಿತರಾಗಿ ಬರೆದ ನಗೆಹನಿಗಳು) ಧಾರಾವಾಡದ ಸಮಾಜ ಪುಸ್ತಕಾಲಯದಿಂದ ಪ್ರಕಟವಾಗುತ್ತವೆ. ನಾಟಕದ ಸಖ್ಯ, ಕೆಲಸ, ಮನೆ ಹೀಗೆ ಅವರ ದಿನಚರಿ ಸಾಗುತ್ತಿರುತ್ತದೆ. ಇವುಗಳ ನಡುವೆ ಪಾಟೀಲ್ ಪುಟ್ಟಪ್ಪನವರ ಪತ್ರಿಕೆಯಲ್ಲಿ 'ಕೆನೆಮೊಸರು' ಎಂಬ ಕಾಲಂ ಬರೆಯಲು ಶುರುಮಾಡಿ ತದನಂತರ 'ರೈತ' ಪತ್ರಿಕೆಯಲ್ಲಿ ಅದನ್ನು ಮುಂದುವರೆಸುತ್ತಾರೆ. ಈ ಕಾಲಂಗಾಗಿ ಬರೆದ ಚುಟುಕುಗಳಲ್ಲಿ ಪುಸ್ತಕಕ್ಕೆ ಯೋಗ್ಯವಾದುದನ್ನು ಹೆಕ್ಕಿ ತೆಗೆದು 1950ರಲ್ಲಿ 'ತಿಂಮನ ತಲೆ' ಎಂಬ ಸಚಿತ್ರ ಪುಸ್ತಕದ ಜತೆಗೆ ತಮ್ಮ ಮೊದಲ ಕಾದಂಬರಿ 'ದಾಸಕೂಟ'(ಇದಕ್ಕೆ ಅ. ನ. ಕೃ ಅವರು ಮುನ್ನುಡಿ ಬರೆದಿದ್ದಾರೆ) ಸಹ ಪ್ರಕಟಿಸುತ್ತಾರೆ. ಇಲ್ಲಿಂದ ಬೀಚಿ ಅವರ ಸಾಹಿತ್ಯದ ಇನ್ನೊಂದು ಮಗ್ಗುಲು ಶುರುವಾಯಿತೆಂದೇ ಹೇಳಬಹುದು. 'ಸರಸ್ವತೀ ಸಂಹಾರ', 'ಬೆಂಗಳೂರು ಬಸ್ಸು', 'ಮೇಡಮ್ಮನ ಗಂಡ', 'ಬೆಳ್ಳಿ ತಿಂಮ ನೂರೆಂಟು ಹೇಳಿದ', 'ಅಂದನಾ ತಿಂಮ'..ಹೀಗೆ ಸುಮಾರು 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರ ಹಲವಾರು ಕೃತಿಗಳಲ್ಲಿ ಇವರ ಸಾಮಾಜಿಕ ಕಳಕಳಿ, ವಿಶಾಲ ಮನೋಭಾವ, ಸಮಾನತೆ, ವೈಚಾರಿಕತೆ, ವಿಡಂಬನಾ ಶೈಲಿ, ದೃಷ್ಟಿಕೋನ ನಾವು ಕಾಣಬಹುದು. ಅವರ ಕಥೆಯ ಪಾತ್ರಗಳೆಲ್ಲವೂ ನಮ್ಮ ಸುತ್ತಮುತ್ತಲಿನವೇ. ಸರಳ ಶೈಲಿಯಲ್ಲೇ ಸಾಮಾಜಿಕ ಸಂದೇಶಗಳನ್ನು ಹಾಸ್ಯದ ಹೂರಣ ಬೆರೆಸಿ ಅತ್ಯದ್ಭುತವಾಗಿ ಓದುಗರಿಗೆ ಉಣಬಡಿಸಿದವರು ಬೀಚಿ. ಹಾಗಾಗಿ ಹಾಸ್ಯಲೋಕದಲ್ಲಿ ಬೀಚಿ ಅವರ ಹೆಸರು ಅಜರಾಮರ.

* * *

ಹಾಸ್ಯಬ್ರಹ್ಮನಾಗಿ, ಹಲವಾರು ಭಾಷಣಗಳಲ್ಲಿ ಅವರ ಮಾತುಗಳಲ್ಲಿ ಎಲ್ಲರನ್ನೂ ನಗಿಸಿ, ಕೃತಿಗಳ ಮೂಲಕ ನಗೆಯನ್ನು ಹಂಚಿದ ಮಹನೀಯನ ಬಾಳಲ್ಲೂ ದುಃಖದ ದಿನಗಳಿವೆ, ದುಃಖಿತ ಘಟನೆಗಳಿವೆ. ವಿಧಿಗೆ ಯಾರಾದರೇನು? ಎಲ್ಲರ ಬಾಳಲ್ಲೂ ದುಃಖದ ದಿನಗಳು ಬರುತ್ತವೆ. ಆ ನೋವಿನಿಂದ ಹೊರಬಂದು ಜಗತ್ತಿಗೆ ನಗೆ ಹಂಚುವುದರಲ್ಲೇ ಶ್ರೇಷ್ಠತೆ ಇರುವುದು. ಅಲ್ಲವೇ?

                        - ಪುನೀತ್ ಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...