ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದಿಂದ ಹಮ್ಮಿಕೊಂಡಿದ್ದ "ಸೃಜನಶೀಲ ಸಾಹಿತ್ಯ ಸ್ಪರ್ಧೆ - ಫೆಬ್ರುವರಿ/2022" ರ ವಿಜೇತ ಬರಹಗಳು ಆಸಕ್ತ ಓದುಗರಿಗಾಗಿ..
ಮೊದಲನೆ ಸ್ಥಾನ : " ನನ್ನೊಳಗೂ ಹಬ್ಬಗಳಿವೆ "
ಇಬ್ಬನಿಯ ದಿಬ್ಬಣವು
ಮಬ್ಬಿನಲಿ ಹಬ್ಬಿಹವು
ತಬ್ಬಿ ಅಂಗಳದ ಹಸಿರ ಬನವ
ಹಬ್ಬವೆಂದವು ಬದುಕುಳಿದಷ್ಟು ಕ್ಷಣವ.
ಬತ್ತಿಹೋಗುವೆನೆಂಬ ಬವಣೆ ಭೋರ್ಗರೆಯಲಿಲ್ಲ
ಮುತ್ತಿದಾ ಮೈಗಳೆಡೆ ಮುನಿಸ ಒಸರಲಿಲ್ಲ
ನಾನೇಕೆ ಕದಡಿದೆನೋ ಕಾರಣವ ಅರಿಯೆ,
ನನ್ನೊಳಗು ಹಿತವಾದ ಹಬ್ಬಗಳಿವೆ
ಆಚರಣೆ ಮರೆತೆನಲ್ಲ ಅದು ಸರಿಯೇ.....
ಮೊಗ್ಗರಳಿ ಹೂವಾಗಿ,ಹಿಗ್ಗಿ ಹೊಸತನವ ತೂಗಿ
ಹೆಗ್ಗುರುತ ಬಯಸದೆ,ಹಗುರವಾಗಿಯೆ ಸಾಗಿ
ಸಂಜೆಗತ್ತಲ ವೇಳೆ ಬಾಡಿ ಬರಿದಾಗಿ
ಬೇಸರವ ತೋರದೆ ಮುಗುಳು ನಕ್ಕಿರಲು
ಅವಸರದಿ ಚಡಪಡಿಸದೆ ಭುವಿಯೊಡಲ ಹೊಕ್ಕಿರಲು
ನಾನೇಕೆ ಕದಡಿದೆನೊ ಕಾರಣವ ಅರಿಯೆ
ನನ್ನೊಳಗು ಅರಳುವ ಹಬ್ಬಗಳಿವೆ,
ಆಚರಣೆ ಮರೆತೆನಲ್ಲ ಅದು ಸರಿಯೇ...
ಎಳೆ ಬಿದಿರೊಂದು,ಉದರವ ಕೊಯ್ದರೆಂದು
ಸೇಡಿನುರಗವಾಗದೆ
ಸಂಭ್ರಮಿಸಿತು ಕೊಳಲಾಗಿ ಬಂದು
ಸುರಿಸಿತು ಸುಶ್ರಾವ್ಯವ ಸ್ವರಗಳಲಿ ಮಿಂದು
ಮುನಿಸ ಮರೆತು ನಗುತಿಹುದು ಆಹಾ..!!ಅದೆಂತಹ ಧ್ಯಾನ
ಮಿಡಿಯದೇಕೆ ನನ್ನೊಳಗಂತಹ ಗಾನ..?
ನಾನೇಕೆ ಕದಡಿದೆನೊ ಕಾರಣವ ಅರಿಯೆ
ನನ್ನೊಳಗು ಹಾಡಬಲ್ಲ ಹಬ್ಬಗಳಿವೆ,
ಆಚರಣೆ ಮರೆತೆನಲ್ಲ ಅದು ಸರಿಯೇ...
"ಇದ್ದದನುಭವಿಸಿ,ಅಂತರಂಗವ ನಗಿಸಿ
ಬೆರೆಸಿ ಬಾಳಯಾತ್ರೆಯಲಿ ಸೊಗಸ
ಪ್ರೀತಿ ಧವಸವ ಬಿತ್ತಿ ಬೆಳೆಯಲು ಕಸವೆಲ್ಲ ರಸ.".
ಎಂದು ನಲಿದ ವೃಕ್ಷ ವಕ್ಷದ ಉಸಿರ ಹಸಿರಲಿ
ಉದ್ಭವಿಸಿರಲು ಮತ್ತೆಂದೂ ಮುದುಡದ ಛಾಯೆ
ಹಬ್ಬಿ ಹರಿದಿರಲು ನೆಮ್ಮದಿಯ ಮಾಯೆ
ನಾನೇಕೆ ಕದಡಿದೆನೊ ಕಾರಣವ ಅರಿಯೆ
ನನ್ನೊಳಗೂ ಮರವಾದ ಹಬ್ಬಗಳಿವೆ,
ಆಚರಣೆ ಮರೆತೆನಲ್ಲ ಅದು ಸರಿಯೇ....
- ಸೌಜನ್ಯ ದಾಸನಕೊಡಿಗೆ
ದ್ವಿತೀಯ ಸ್ಥಾನ : " ಶ್ರಮದ ಅನ್ನ "
ಶ್ರಮದ ಅನ್ನ (ಬೆವರಿನ ಅನ್ನ)ದ ಮಹತ್ವ
ಮನುಷ್ಯ ಅಥವಾ ಪ್ರಾಣಿಗಳು ತಮ್ಮ ಆಹಾರವನ್ನು ತಾವೇ ಸತಃ ಗಳಿಸುವ ಪ್ರಯತ್ನವನ್ನು ಮಾಡುತ್ತವೆ. ಅದಕ್ಕಾಗಿ ದೈಹಿಕ ಹಾಗೂ ಮಾನಸಿಕ ಶ್ರಮದ ಅಗತ್ಯವೂ ಇದೆ. ದೈಹಿಕ ಶ್ರಮವೆಂದರೆ ಸ್ವಂತ ದೇಹದ ಶಕ್ತಿಯನ್ನು ಬಳಸಿಕೊಂಡು ಮಾಡುವ ಕೆಲಸ. ಯಂತ್ರಗಳಿಂದ ಮತ್ತು ಪ್ರಾಣಿಗಳನ್ನು ಬಳಸಿಕೊಂಡು ಮಾಡುವ ಕೆಲಸಕ್ಕಿಂತ ವ್ಯತಿರಿಕ್ತವಾಗಿ ಮಾಡುವ ಕೆಲಸವೇ ದೈಹಿಕ ಶ್ರಮ. ಇದರ ಅರ್ಥ ಕೈಯಿಂದ ಮಾಡುವ ಕೆಲಸ, ಮತ್ತು ದೇಹದ ಸ್ನಾಯು ಮತ್ತು ಮೂಳೆಗಳ ಸಹಾಯದಿಂದ ಮಾಡುವ ಕೆಲಸ. ಉತ್ಪಾದನಾ ಕ್ಷೇತ್ರದಲ್ಲಿ ಮಾನವ ಮತ್ತು ಪಶುಶ್ರಮದ ಅಗತ್ಯವನ್ನು ಕಡಿಮೆ ಮಾಡುವ ಯಾಂತ್ರೀಕರಣ ಶತಮಾನಗಳಿಂದ ಅಸ್ತಿತ್ವದಲ್ಲಿದೆ.
ಯಾವುದೇ ಕೆಲಸಕ್ಕೂ ಕೌಶಲ ಮತ್ತು ಬುದ್ಧಿಶಕ್ತಿಯ ಅವಶ್ಯಕತೆ ಇದೆಯಾದರೂ ಬಹುತೇಕವಾಗಿ ಹಣ್ಣು ಮತ್ತು ತರಕಾರಿಗಳನ್ನು ಆರಿಸುವುದು, ಕೈಯಿಂದ ಸಾಮಾನುಗಳನ್ನು ಹೊತ್ತೊಯ್ಯುವುದು, ಶೆಲ್ಫುಗಳ ಮೇಲೆ ಸಾಮಾನು ಜೋಡಿಸುವುದು, ಕೈಯಿಂದ ಗುಂಡಿ ತೋಡುವುದು ಇವೇ ಮೊದಲಾದ ಕೆಲಸಗಳಿಗೆ ದೈಹಿಕ ಶ್ರಮದ ಅಗತ್ಯವೇ ಹೆಚ್ಚು. ಈ ಕೆಲಸಗಳನ್ನು ಕೌಶಲ್ಯರಹಿತವಾದವರೂ ಯಶಸ್ವಿಯಾಗಿ ಮಾಡಬಹುದು. ಹಾಗಾಗಿ ದೈಹಿಕ ಶ್ರಮ ಮತ್ತು ಕೌಶಲ್ಯರಹಿತ ಕಾರ್ಮಿಕರ ನಡುವೆ ಪರಸ್ಪರ ಸಂಬಂಧವಿದೆ. ಇಂದು ದೈಹಿಕ ಶ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದ್ದು ಶ್ರಮದ ಅನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಸ್ವಂತ ದೈಹಿಕ ಶ್ರಮದಿಂದ ಗಳಿಸುವುದನ್ನು ಬ್ರೆಡ್ ಲೇಬರ್, ಶರೀರ ಶ್ರಮದ ಅನ್ನ ಅಥವಾ ಬೆವರಿನ ಅನ್ನ ಎಂದು ಕರೆಯುತ್ತಾರೆ.
ಜಪಾನ್ ದೇಶದ ಝೆನ್ ಬೌದ್ಧ ತತ್ವಜ್ಞಾನದಲ್ಲಿ ಒಂದು ಕಥೆಯಿದೆ. ಬೌದ್ಧ ಝೆನ್‌ಗಳ ಆಶ್ರಮದಲ್ಲಿ ಗುರುಗಳಾದ ಯಾಕೋ ಜೋ ಎಂಬಾತ ವಾಸವಿರುತ್ತಾನೆ. ಆತನಿಗೆ ಬಹುದೊಡ್ಡ ಆಪ್ತ ಶಿಷ್ಯರ ಬಳಗವಿರುತ್ತದೆ. ಯಾಕೋ ಜೋಗೆ ೮೦-೯೦ ವರ್ಷ ವಯಸ್ಸಾಗಿ ಮುದಿಯಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲದಂತಹ ದೈಹಿಕ ಶಕ್ತಿಹೀನತೆ ಸ್ಥಿತಿಗೆ ತಲುಪುತ್ತಾನೆ. ಆದರೂ ತಾನು ಮೂರು ಹೊತ್ತು ಮಾಡುವ ಊಟಕ್ಕಾಗಿ ಕನಿಷ್ಟ ಕೆಲಸವನ್ನಾದರೂ ಮಾಡಬೇಕೆಂಬ ಉದ್ದೇಶದಿಂದ ಆತನಿದ್ದ ಮನೆಯ ಅಂಗಳವೆಲ್ಲ ಅಲೆದಾಡುತ್ತಾ ಸಣ್ಣದಾದ ಕತ್ತಿ ಮತ್ತು ಗುದ್ದಲಿಗಳಿಂದ ಅಂಗಳವನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡುತ್ತಿರುತ್ತಾನೆ. ವಯಸ್ಸಾದ ತಮ್ಮ ಗುರುಗಳು ಕಷ್ಟಪಟ್ಟು ಕೆಲಸ ಮಾಡುವುದನ್ನು ಗಮನಿಸಿದ ಶಿಷ್ಯಂದಿರು ಮರುಕಪಡುತ್ತಾರೆ.
ಹಲವು ದಿನಗಳ ಕಾಲ ಗುರುಗಳ ಈ ಕಾರ್ಯವೈಖರಿಯನ್ನು ಗಮನಿಸಿದ ಶಿಷ್ಯಂದಿರು ಗುರುವಿನ ನಿರಂತರ ಕೆಲಸದ ಹಿಂದಿನ ಮರ್ಮವನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಾರೆ. ಕೊನೆಗೂ ಉತ್ತರ ದೊರಕದೇ ಇದ್ದಾಗ ಗುರುವಿನ ದೈನಂದಿನ ಕೆಲಸದ ಗುದ್ದಲಿ ಮತ್ತು ಸಣ್ಣ ಕತ್ತಿಯನ್ನು ಅಡಗಿಸಿಡುವ ನಿರ್ಧಾರವನ್ನು ಮಾಡಿ ಅವುಗಳನ್ನು ಗುರುಗಳಿಗೆ ಕಾಣಿಸದಂತೆ ಎತ್ತಿಡುತ್ತಾರೆ. ಎಂದಿನಂತೆ ಗುರುಗಳು ಬೆಳಗ್ಗೆ ಎದ್ದಾಗ ಅವರ ಗುದ್ದಲಿ, ಬುಟ್ಟಿ ಮತ್ತು ಸಣ್ಣ ಕತ್ತಿ ಕಾಣಿಸುವುದಿಲ್ಲ. ತನ್ನ ನಿತ್ಯದ ಕೆಲಸದ ಸಾಮಗ್ರಿಗಳು ಕಾಣಿಸದೇ ಇರುವುದನ್ನು ಗಮನಿಸಿದ ಗುರುಗಳು ಎಲ್ಲೆಡೆ ತೀವ್ರ ಹುಡುಕಾಟವನ್ನು ನಡೆಸುತ್ತಾರೆ. ಆದರೂ ತನ್ನ ಕೆಲಸದ ಪರಿಕರಗಳು ಸಿಗದಿದ್ದಾಗ ಬೇಸರದಿಂದ ತನ್ನ ಆಶ್ರಮಕ್ಕೆ ಬಂದು ಮುಸುಕು ಹಾಕಿ ಮಲಗುತ್ತಾರೆ. ಊಟದ ಸಮಯವಾದಾಗ ಆಶ್ರಮದ ಶಿಷ್ಯಂದಿರು ಗುರುಗಳನ್ನು ಊಟಕ್ಕೆ ಕರೆಯುತ್ತಾರೆ. ಆದರೆ ಗುರುಗಳು ನನಗೆ ಹಸಿವಿಲ್ಲ, ನಾನು ಊಟ ಮಾಡುವುದಿಲ್ಲವೆಂದು ಹೇಳಿ ಮತ್ತೆ ನಿದ್ದೆ ಮಾಡುತ್ತಾರೆ. ಇವತ್ತೊಂದು ದಿನವಷ್ಟೇ ಗುರುಗಳು ಊಟ ಮಾಡಿಲ್ಲ, ಪರವಾಗಿಲ್ಲ ನಾಳೆ ಮಾಡಬಹುದು ಮತ್ತು ಎಲ್ಲವೂ ಸರಿಹೋಗುತ್ತದೆ ಎಂಬ ಆಶಾಭಾವದೊಂದಿಗೆ ಶಿಷ್ಯಂದಿರು ಸುಮ್ಮನಾಗುತ್ತಾರೆ. ಹೀಗೆ ಒಂದು ದಿನ ಕಳೆದು ಹೋಗುತ್ತದೆ.
ಎರಡನೇ ದಿನವೂ ಗುರುಗಳು ಮುಸುಕು ಹಾಕಿ ನಿದ್ದೆ ಮಾಡುತ್ತಿರುತ್ತಾರೆ. ಊಟದ ಸಮಯದಲ್ಲಿ ಎಬ್ಬಿಸಿದಾಗ ಮತ್ತೆ ಅದೇ ರೀತಿ ನನಗೆ ಹಸಿವಿಲ್ಲ ಎಂಬ ಉತ್ತರವನ್ನು ಹೇಳುತ್ತಾರೆ. ಇದೇ ರೀತಿ ನಿರಂತರವಾಗಿ ಮೂರು ದಿನಗಳು ಕಳೆದು ಹೋಗುತ್ತವೆ. ನಾಲ್ಕನೇ ದಿನ ಶಿಷ್ಯಂದಿರು ಭಯಭೀತರಾಗಿ ಗುರುಗಳಿಗೆ ಏನು ಸಮಸ್ಯೆಯಾಗಿದೆ ಎಂದು ಭಾವಿಸಿ ಏಕೆ ತಾವು ಊಟ ಮಾಡುತ್ತಿಲ್ಲವೆಂದು ಪ್ರಶ್ನೆಯನ್ನು ಹಾಕುತ್ತಾರೆ. ಆಗ ಗುರುಗಳು ಬೇಸರದಿಂದ ನಾನು ನಿತ್ಯ ಕೆಲಸ ಮಾಡುವ ಕೆಲಸದ ಪರಿಕರಗಳು ಕಾಣುತ್ತಿಲ್ಲ ಅದಕ್ಕಾಗಿ ನಾನು ಊಟವನ್ನು ಮಾಡದೆ ನಿದ್ದೆ ಮಾಡುತ್ತಿದ್ದೇನೆ ಎನ್ನುತ್ತಾರೆ. ಶಿಷ್ಯಂದಿರು ತಾವು ಅಡಗಿಸಿಟ್ಟ ಗುರುಗಳ ನಿತ್ಯ ಕೆಲಸದ ಪರಿಕರಗಳನ್ನು ಮರಳಿ ನೀಡುತ್ತಾರೆ. ಇದರಿಂದ ಖುಷಿಯಾದ ಗುರುಗಳು ಮತ್ತೆ ನಿತ್ಯ ತನ್ನ ಆಶ್ರಮದ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳಿಸುವ ಮೈಮುರಿದು ಕೆಲಸ ಮಾಡುತ್ತಾ ಊಟವನ್ನು ಮಾಡುತ್ತಾರೆ. ಅಂದರೆ ಯಾಕೋ ಜೋ ‘ತಾನು ಮೈಮುರಿದು ಕೆಲಸವನ್ನು ಮಾಡದ ಹೊರತಾಗಿ ನನಗೆ ಉಣ್ಣುವ ಹಕ್ಕಿಲ್ಲ’ ಎಂಬ ತತ್ವದೊಂದಿಗೆ ಶ್ರಮ ಜೀವಿಯಾಗಿ ಬೆವರಿನ ಅನ್ನದ ಪರಿಕಲ್ಪನೆಯಡಿಯಲ್ಲಿ ಜೀವನ ಸಾಗಿಸುತ್ತಾರೆ. ಓo ತಿoಡಿಞ, ಟಿo ಜಿooಜ ಎಂಬ ಮಾತಿನಂತೆ ನಾವೆಲ್ಲರೂ ಮೈಮುರಿದು ಕೆಲಸವನ್ನು ಮಾಡಿಯೇ ಹೊಟ್ಟೆ ತುಂಬಾ ಉಣ್ಣುವಂತ ವ್ಯವಸ್ಥೆಗೆ ಒಳಪಟ್ಟಲ್ಲಿ ತಿಂದುಂಡು ಸೋಮಾರಿಗಳಂತೆ ಅಲೆದಾಡುವುದು ತಪ್ಪುತ್ತದೆ.
ಮೈದಾನದಲ್ಲಿ ಆಟೋಟವನ್ನು ನಿರ್ವಹಿಸುವುದು, ಪಾಠ ಮಾಡುವುದು, ಹಾಡುವುದು, ನೃತ್ಯ, ಕಂಪ್ಯೂಟರ್ ಮುಂದೆ ಕುಳಿತು ಮಾಡುವ ಕೆಲಸಗಳು ಶರೀರ ಶ್ರಮವಲ್ಲ ಬದಲಿಗೆ ಇದು ಮೆದುಳಿನ ಶ್ರಮವಷ್ಟೇ ಆಗಿದೆ. ಶರೀರ ಶ್ರಮದಲ್ಲಿ ಮುಖ್ಯವಾಗಿ ಜಮೀನಿನಲ್ಲಿ ಗುದ್ದಲಿ ಹಿಡಿದು ಮಾಡುವ ಕೆಲಸ, ಮರವನ್ನೇರುವುದು, ತೋಟಗಾರಿಕೆ, ಬಾಲ್ಕನಿ ಹೂದೋಟ, ವರ್ಟಿಕಲ್ ಗಾರ್ಡನಿಂಗ್, ಯಾವುದೇ ವಿಭಾಗದ ಸ್ವಚ್ಛತೆಯನ್ನು ಮಾಡುವುದು, ಕೃಷಿ ಇವೇ ಮೊದಲಾದ ಬೆವರನ್ನು ಸುರಿಸಿ ಮಾಡುವ ಕೆಲಸಗಳು ಬರುತ್ತವೆ. ಬೆವರಿನ ಅನ್ನದ ಪ್ರಮಾಣವನ್ನು ಅಳೆಯಲು ನಿರ್ದಿಷ್ಟವಾದ ಸೂತ್ರವಿಲ್ಲ. ಅದು ವ್ಯಕ್ತಿಯ ವಿಚಾರಕ್ಕೆ ಹಾಗೂ ಆತನ ಆತ್ಮತೃಪ್ತಿಗೆ ಬಿಟ್ಟಿರುತ್ತದೆ.
- ಸಂತೋಷ್ ರಾವ್ ಪೆರ್ಮುಡ
ತೃತೀಯ ಸ್ಥಾನ: ಅವ್ವ; ಮಹಾಕಾವ್ಯ
ಅವ್ವಳ
ದೈನಿಕ, ಜೈವಿಕ ಚಕ್ರದಲ್ಲಿ ಐದಕ್ಕೆ ಅಲಾರಂ ಗಂಟೆಯಿಲ್ಲ
ಆದರೂ ಅವಳೆಂದು ಐದರ ಮೇಲೆ ಮಲಗಿದ್ದು ನೆನಪಿಲ್ಲ
ಹುಷಾರಿಲ್ಲಾದಾಗ್ಯೂ ಶರೀರವಷ್ಟೇ ಹಾಸಿಗೆ ಮೇಲೆ ಮನಸ್ಸು ಐದಕ್ಕೆಚ್ಚರ !
ಗಾಂಧಿಯಂತೆ ಬಿರುಸು ನಡೆದು
ಹಾದೀಲಿ ದಕ್ಕಿದ ಕಡ್ಡಿ ಪಿಳ್ಳೆಗಳಿಡಿದು
ಕುಕ್ಕರುಗಾಲಲ್ಲಿ ಕೂತು,ಹಚ್ಚುತಾ ಒಲೆಯ
ಬೆಳಗಿದಳು ಮನೆಯ
ಗಂಡ ತೀರಿ ಮೂರು ದಶಕಗಳಾದರೂ
ಮಕ್ಕಳಿಗೆ ದಿನವೂ ಅಪ್ಪನ ನೆನಪಿಲ್ಲ
ಹಾರೈಕೆಯಲ್ಲಿ ತೆರೇಸಾಳು ಕಮ್ಮೀ
ಐದು ಮಕ್ಕಳು ಎರಡು ಕಣ್ಣು, ಭೇದಭಾವದ ಕಂದರವಿಲ್ಲ
ಅರವತ್ತಾದರೂ ಇಪ್ಪತ್ತರ ಚುರುಕು
ಸೊಸೆಯೊಂದರಿಗೆ ಆಗಾಗ ಜಗಳವಾದರೂ
ಮೊಮ್ಮಕ್ಕಳು ಅಜ್ಜಿಯ ಬಿಡುವುದಿಲ್ಲ, ಮಕ್ಕಳು ಎದೆಮಟ್ಟ ಬೆಳೆದು ನಿಂತರೂ
ಅವಳ ಮಡಿಲೆಂದೂ ದೂರ ತಳ್ಳಿಲ್ಲ
ನಡುಮಗನು ಜಾತಿಬಿಟ್ಟು ಓಡಿ ಮದುವೆಯಾಗಿ
ಮೈಲುಗಳಾಚೆ ಇದ್ದರೂ, ತಾಯಿಗರುಳು ಜಾತಿಯ ಎಡಗಾಲಲೊದ್ದು
ನಗುವ ಮಗುವ ಹಾರೈಕೆ ಮಾಡಿದ
ಮಹಾ ಮಾನವತವಾದಿ
ಹಂಗಿಸಿದರು,ಇಂಗಿಸಿದರು
ಬಡತನದ ಹಾರ ಹೊದೆಸಿದರು
ಹಲುಬಲಿಲ್ಲ,ಅಳಲಿಲ್ಲ
ಎದೆಗೆ ಜೀವನಪ್ರೀತಿಯ ಮಾಲೆ ತೊಡಸಿದಳಲ್ಲ
ಎದೆನೋವು ಬಂದು ಆಸ್ಪತ್ರೆ ಹಾಸಿಗೆ ಹಿಡಿದರೂ
ಹಾಲಿನ ಬಿಲ್ಲೆಷ್ಟು? ಎರಡು ದಿನ ಹಾಕಿಲ್ಲ
ಮೂಲೆಯಲ್ಲಿನ ಕಸವೆಸೆದೆಯಾ?
ಎಂಬ ಪ್ರಶ್ನೆಯ ಕೇಳುವಳು
ಎದೆನೋವ ಮರೆತು
ಎದುರ ಖಾಲಿ ಗೋಡೆ ನೋಡುವಳು
ಅನಾಮತ್ತು ಹಾಸಿಗೆ ಹಿಡಿದು, ಮಕ್ಕಳು ತಬ್ಬಲಿಯಾದವಲ್ಲ
ಎಂದು ನೆನೆಸಿ ಕಣ್ಣೀರು ಹಾಕುವಳು
ಅವಳು ಸಾವಿಲ್ಲದ ಮಹಾಕಾವ್ಯ,
ಆಲದಮರ ತಬ್ಬಿದಷ್ಟು ಪ್ರೀತಿ ಜೀವಕಳೆ, ಮೂರೂ ತಲೆಮಾರಿಗೂ
ಬದುಕಿನ ಪ್ರೀತಿಯ ಸಾರುವ ಜೀವದ್ರವ್ಯ
- ಜಯರಾಮಚಾರಿ
ವಿಜೇತರಿಗೆ ಅಭಿನಂದನೆಗಳು.
ನಮ್ಮ ಇನ್ನಷ್ಟು ಸಾಹಿತ್ಯ ಸ್ಪರ್ಧೆಗಳು ಮತ್ತು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಮ್ಮ ತಂಡ ಸೇರಿಕೊಳ್ಳಿ..
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ