ನಾನು ನೋಡಿದ ಪರ್ವ
" ಕತ್ತಲೆಯನ್ನು ಬೆಳಕು ಹಾಗೂ
ಬೆಳಕನ್ನು ಕತ್ತಲೆಯು ನುಂಗಿ,
ಜಗತ್ತನ್ನು ಪಾಪಕೃತ್ಯಗಳಿಂದ ತೊಳೆದು,
ಹೊಸ ಹೊಳಪನ್ನು ಕೊಟ್ಟ..
ದೀರ್ಘಾಯುಷ್ಯ ಅನುಭವ! "
ವಿಸ್ಮಯಕಾರಿ ಸರಳ ರಂಗಸಜ್ಜಿಕೆ. ಬೆಳಕು ಅಲ್ಲಲ್ಲಿ ಸೋರುತ್ತಿತ್ತು. ಸಂಗೀತ ಮನಕ್ಕೆ ಅಣು ದೂರದಲ್ಲಿತ್ತು. ವಸ್ತ್ರ ವಿನ್ಯಾಸ ಕಣ್ಣಿಗೆ ಕಪ್ಪಾಗಿಯೇ ಇತ್ತು.
ಹದಿನೆಂಟರಿಂದ ಅರವತೈದು ವರ್ಷಗಳವರೆಗಿನ ರಂಗ ಕಲಾವಿದರ ಅದಮ್ಯ ಚೈತನ್ಯವನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಸವಿಯುವುದೆಂದರೆ.. ನಮ್ಮಂಥ ಕಲಾವಿದರಿಗೆ ಅದಕ್ಕಿಂತ ಖುಷಿಯೆಂಬುದು, ಅದ್ಭುತವೆನಿಸಬಹುದಾದದ್ದು ಮತ್ತೇನಾದರೂ ಇದೆ ಎಂದರೆ ಅದು ನಿಜಕ್ಕೂ ನಮ್ಮ ಹೊಗಳಿಕೆಯ ಭಂಡತನ!
"ನಿಜ ಹೇಳೋದ್ರಿಂದ ಏನ್ ಸಿಗುತ್ತೆ?
ಭ್ರಮೆ ಕಳೆಯುತ್ತೆ." ಇಂಥಾ ಸರ್ವಕಾಲಿಕ ಸತ್ಯಗಳನ್ನು ಸಾರುವ ಗಾಂಧಾರಿಯ ಮಾತುಗಳಿಂದ ಶುರುವಾಗಿ, "ಪ್ರತಿಜ್ಞೆಗೆ ಕಾಲದ ಮಿತಿ ಹಾಕದಿರುವುದು ಕೂಡ ಒಂದು ಅದೃಷ್ಟ" ಎಂಬ ಮಾಯಾವಿ ಕೃಷ್ಣನ ಮಾತಿನವರೆಗೂ ಕೂತವರನ್ನು ಎದ್ದೇದಂತೆ ತಡೆದು, ಪ್ರೇಕ್ಷಕರನ್ನು ಪರ್ವದ ಒಂದೊಂದು ಗೌಣ ಪಾತ್ರಗಳನ್ನಾಗಿಸಿಕೊಂಡು, ಅಳಿಸಿ, ನಗಿಸಿ, ಕೆಲವು ತಾತ್ವಿಕತೆಯ ಮಹತ್ವ ಸಾರುವ ಮಹಾರಂಗಪ್ರಯೋಗ "ಪರ್ವ". ಕನ್ನಡ ಸಾಹಿತ್ಯದಲ್ಲಿ ಎಸ್. ಎಲ್ ಭೈರಪ್ಪನವರದು ದೊಡ್ಡ ಹೆಸರು. ಆ ದೊಡ್ಡ ಹೆಸರಿನಿಂದ ರಚಿತವಾದ ಮೇರು ಕೃತಿ ಪರ್ವ. ಆ ಬೃಹತ್ ಕೃತಿಯನ್ನು ಸುಲಭವಾಗಿ ಓದಿ ಅರ್ಥೈಸಿಕೊಳ್ಳುವುದೇ ಕಷ್ಟವಾಗಿರುವಾಗ ಅದನ್ನು ರಂಗಪಠ್ಯ ಮಾಡಿ, ಪರ್ವದ ಪ್ರತಿಯೊಂದು ಪಾತ್ರಗಳನ್ನು ಪ್ರೇಕ್ಷಕರ ಮನದಲ್ಲಿ ತುಂಬುವುದೆಂದರೆ ಅದೊಂದು ದೊಡ್ಡ ಸವಾಲೇ ಸರಿ. ಆ ಸವಾಲನ್ನು ಬಹಳ ಎಚ್ಚರಿಕೆಯಿಂದ ಸ್ವೀಕರಿಸಿ, ತಮ್ಮ ಅಧ್ಭುತ ರಂಗತಂತ್ರಗಳ ಮೂಲಕ ಸಮರ್ಥವಾಗಿ ರಂಗಪ್ರಯೋಗ ಮಾಡಿ ಸೈ ಎನಿಸಿಕೊಂಡವರು ಕನ್ನಡದ ನಟೋರಿಯಸ್ ನಟ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿ. ಇವರ ಸಾಹಸಕ್ಕೆ ಮುಂದಾಗಿ ಬಂದು ಹೆಗಲು ಕೊಟ್ಟವರೇ ಮೈಸೂರಿನ ರಂಗಾಯಣದ ಕಲಾ ಬಳಗದವರು. ಹೊರಗೆ ಹೆಜ್ಜೆ ಹಿಡದೆ ಭಯದ ಜ್ವರ ಬಂದು ಮನೆಯೊಳಗೆ ಮತ್ತು ಆಫೀಸಿನೊಳಗೆ ಕೂತ ಕಲಾ ರಸಿಕರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರನ್ನು ಕರೆತಂದು ರಂಗಮಂಟಪದಲ್ಲಿ ಕೂರಿಸಿದ ಆ ನಟ-ನಟಿಯರಿಗೆ ನನ್ನ ಶಹಬ್ಬಾಶ್ ಗಿರಿಯಿದೆ. ಒಬ್ಬೊಬ್ಬ ಕಲಾವಿದ ನಾಲ್ಕೈದು ಪಾತ್ರಗಳನ್ನು ನಿಭಾಯಿಸಿದರೂ ಎಲ್ಲೂ ಎಳ್ಳಷ್ಟೂ ಸೋಲದೆ ಪಾತ್ರಗಳಿಗೆ ಶಾಶ್ವತ ಜೀವ ತುಂಬಿದ್ದರು. ಸಾಯೋದ್ರೊಳಗೆ ಜೋಗದ ಗುಂಡಿ ನೋಡಬೇಕೆನ್ನುವವರಿಗೆ.. ಒಮ್ಮೆ ಪರ್ವವನ್ನೂ ನೋಡಿಬಿಡಿ ಎಂಬುದು ನನ್ನ ಆಪ್ತ ಸಲಹೆ.
"ಗಂಡಿನ ಕಣ್ಣಲ್ಲಿ ಒಂದು ಹನಿ ಬಂದರೂ ಅದು ಗಂಗಾ ನದಿಗೆ ಸಮ", "ಪುಕ್ಕಲು ಯಾವಾಗಲೂ ಧರ್ಮದ ರೂಪವನ್ನೇ ತಾಳುವುದು", "ಬದುಕಿರುವುದರಲ್ಲಿ ಯಾವ ಆರ್ಥವಿಲ್ಲದಮೇಲೆ ಸಾವು ಅನರ್ಥವಲ್ಲ" ಎಂಬ ಸಂಭಾಷಣೆಗಳು ಸೈದ್ಧಾಂತಿಕ ಉನ್ನಾರಕ್ಕೆ ಬಿದ್ದವರ ಎದೆ ಸೀಳಿ ಹಸಿರಿನ ಬೀಜ ಬಿತ್ತುವುದಂತು ಖಾತ್ರಿ. ಭೈರಪ್ಪನವರೇ ಹೇಳಿಕೊಂಡ ಹಾಗೆ "ಪರ್ವ ಬರೆದುದರಿಂದ ನನಗೆ ಮರುಜನ್ಮ ಸಿಕ್ಕಿತು" ಎಂಬುದಕ್ಕೆ ಸಮನಾಗಿ ಪರ್ವ ರಂಗಪ್ರಸ್ತುತಿಯನ್ನು ನೋಡಿದವರೆಲ್ಲ ಮರುಹುಟ್ಟು ಪಡೆಯುವುದರಲ್ಲಿ ಸಂದೇಹವೇ ಇಲ್ಲ. ಇಷ್ಟು ದಿನಗಳವರೆಗೆ ಭೀಮ ಎಂದರೆ ಘರ್ಜನೆ, ಕುಂತಿ-ದ್ರೌಪದಿ ಎಂದರೆ ಬರೀ ದುಃಖ, ಧರ್ಮಜ ಎಂದರೆ ನ್ಯಾಯ-ಧರ್ಮ, ಕರ್ಣ ಎಂದರೆ ಶೌರ್ಯ, ಕೃಷ್ಣ ಎಂದರೆ ಮಾಯಾವಿ ಅಂತಲೂ ತಮ್ಮದೇ ಕಲ್ಪನೆ ಕಟ್ಟಿಕೊಂಡವರಿಗೆ ಪರ್ವ ಬದುಕಬೇಕಾದ ಇನ್ನೊಂದು ಆಯಾಮವನ್ನು ತೋರಿಸುತ್ತದೆ. ಮಹಾಭಾರತದಲ್ಲಿ ಬರುವ ಪಾತ್ರಗಳು ಇಲ್ಲಿ ಮಾತನಾಡುವುದಿಲ್ಲ. ಅವುಗಳ ಅಂತರಾಳ ಪ್ರೇಕ್ಷಕರೊಟ್ಟಿಗೆ ಮಾತನಾಡಿ ತಮ್ಮನ್ನು ತಾವೇ ಲೋಕ ವಿಮರ್ಶೆ ಮಾಡಿಕೊಳ್ಳುವುದರ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುತ್ತವೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ರೂಢಿಸಿಕೊಳ್ಳಬೇಕಾದ್ದು ಇದೇ ತತ್ವ. ನಾವು ನಮ್ಮೊಂದಿಗೆ ಜೀವಿಸುವುದು ಬೇರೆ, ಇತರರೊಂದಿಗೆ ನಮ್ಮನ್ನು ನಾವು ಪ್ರದರ್ಶಿಕೊಳ್ಳುವುದು ಬೇರೆ. ಆ ವಿಷಯಕ್ಕೆ ಬಂದರೆ ಪರ್ವದಲ್ಲಿ ಎಲ್ಲಾ ಪಾತ್ರಗಳು ಜೀವಂತಿಸಿವೆ.
ಯಾವ ಪಾತ್ರಗಳೂ ಕಮ್ಮಿ ಎನಿಸದಂತೆ ಎಸ್ ಎಲ್ ಭೈರಪ್ಪನವರು ಪರ್ವದಲ್ಲಿ ಭಿತ್ತಿಸಿರುವಂತೆ ಎಲ್ಲಾ ನಟರು ಕೂಡ ನೈಜವಾಗಿ ಪಾತ್ರಗಳಿಗೆ ಜೀವ ತುಂಬಿ ಪರ್ವದ ದೀರ್ಘಾಯುಷ್ಯಕ್ಕೆ ಕಾರಣರಾಗಿದ್ದಾರೆ. ಈ ಮರುಹುಟ್ಟಿನಿಂದ ಹೊರಬರಲು ನನಗೆ ಕನಿಷ್ಠ ಎರಡು ದಿನಗಳಾದರೂ ಬೇಕು. ತಮ್ಮನ್ನು ಸಮಾಜದ ಓರೆ-ಕೋರೆಗಳಿಗೆ ಹಚ್ಚಿಕೊಂಡು ನೋಡಬಯಸುವ ಎಲ್ಲಾ ಜೀವಿಗಳಿಗೂ ಮರುಹುಟ್ಟಿನ ಅಗತ್ಯತೆ ಇದೆ. ಆ ಮರುಹುಟ್ಟು ಸಧ್ಯಕ್ಕೆ ಪರ್ವದಲ್ಲಿ ಮಾತ್ರ ಸಿಗಬಹುದು. ಆ ಪರ್ವ ವಾರಾಂತ್ಯಗಳಲ್ಲಿ ನಿಮಗಾಗಿ ಕಾದಿದೆ. ಒಂದು ದಿನ ಮೈಸೂರಿನ ರಂಗಾಯಣಕ್ಕೆ ಹೋಗಿ ಬನ್ನಿ. ಬದುಕು ನಿಮಗೆ ಬೇರೆಯದಾಗಿಯೇ ಕಾಣುತ್ತದೆ.
ಅನಂತ ಕುಣಿಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ