ವಿಷಯಕ್ಕೆ ಹೋಗಿ

ಗುರುಭ್ಯೋನಮಃ - ಲೇಖನ - ಅನಂತ ಕುಣಿಗಲ್


ಗುರುಭ್ಯೋನಮಃ

ಅವರ್ಯಾರೂ ನನ್ನ ಗುರುಗಳಾಗಿರಲಿಲ್ಲ! ಬದಲಾಗಿ ನನಗೆ ತಂದೆಯಾಗಿ ಹೆಗಲು ಕೊಟ್ಟವರು. ದೇವರ ರೂಪ ಪಡೆದು ನನ್ನ ಸಲುಹಿದವರು. ಲಾಲಿ ತೂಗಿಸುವ ಮೂಲಕ ಬದುಕಿನ ಶಾಂತತೆಯನ್ನು ಹೇಳಿಕೊಡುತ್ತಿದ್ದ ಅಂಗನವಾಡಿಯಿಂದ ಡಿಪ್ಲೋಮಾ ಮುಗಿಸಿ ಸಿನೆಮಾ ರಂಗಕ್ಕೆ ಬಂದು ಆಕ್ಷನ್, ಕಟ್, ಲೆನ್ಸುಗಳ ಬಗ್ಗೆ ತಿಳಿದುಕೊಳ್ಳುವವರೆಗೆ ಸಿಕ್ಕ ಮಾಸ್ತರು, ಶಿಕ್ಷಕರು, ಟೀಚರ್ಸ್, ಲೆಕ್ಚರ್ಸ್ ಎಲ್ಲರೂ ಕೂಡ ಗುರುಗಳೆನ್ನಿಸಿಕೊಳ್ಳದಷ್ಟು ಆಪ್ತವಾಗಿ ನನ್ನೊಂದಿಗೆ ಸಲಿಗೆ ಬೆಳೆಸಿಕೊಂಡಿದ್ದರು. ಕ್ಲಾಸಿನಲ್ಲಿ ಹೆಚ್ಚು ತರ್ಲೆ ಮಾಡಿದಾಗ ತಲೆ ಮೇಲೆ ಹೊಡೆದು ಬುದ್ಧಿ ಹೇಳುವುದು ಹಾಗೇ ಎಂದಾದರೂ ಬೇಸರದಿಂದ ತಲೆ ಬಗ್ಗಿಸಿ ಒಬ್ಬನೇ ಕೂತಾಗ ತಂದೆಯಂತೆ ತಲೆ ನೇವರಿಸುತ್ತಾ ನನ್ನ ಕಷ್ಟ ಕೇಳಿ ಕಣ್ಣೀರು ಹಾಕಿ, ನನ್ನ ಕಣ್ಣೀರನ್ನು ವರೆಸಿದ್ದಾರೆ. ಅಂತಹ ಹೃದಯದ ಅನಂತತೆ ಹೊಂದಿರುವ ನನ್ನೆಲ್ಲಾ ಗುರುವೃಂದದ ಪದಾದಿಕಾರಿಗಳಿಗೆ ನನ್ನ ಈ ಲೇಖನ ಕೃತಜ್ಞಾಪೂರ್ಪಕ ಅರ್ಪಣೆ.

ಜೀವನದಲ್ಲಿ ನನ್ನಂತೆಯೇ ಗುರುಗಳ ಆಶೀರ್ವಾದ, ಸಹಕಾರ ಹಾಗೂ ಮಾರ್ಗದರ್ಶನ ಪಡೆದುಕೊಂಡಿರುವ ಮತ್ತು ಗುರುಗಳ ಅಗತ್ಯತೆಯೇ ಇಲ್ಲದೆ ಏಕಲವ್ಯನಂತೆ ಬದುಕಿನ ಏಳು-ಬೀಳುಗಳನ್ನೇ ತಮ್ಮ ಗುರುಗಳನ್ನಾಗಿ ಮಾಡಿಕೊಂಡು ಜೀವನ ಗೆಲ್ಲುತ್ತಿರುವ ನನ್ನೆಲ್ಲಾ ಆತ್ಮೀಯರಿಗೂ ಹಾಗೂ ಗುರು ಪರಂಪರೆಯಲ್ಲಿ ಹಗಲಿರುಳು ದುಡಿದು ದೇಶದ ಮೌಲ್ಯುಯುತ ಸಂಪತ್ತನ್ನು ಹೆಚ್ಚಿಸುತ್ತಿರುವ ಮಾರ್ಗದರ್ಶಕರ ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಕಾಮನೆಗಳು.

ಮೊದಲ ಗುರು ಉಸಿರಾಡುವುದನ್ನು ಕಲಿಸಿಕೊಟ್ಟ ನನ್ನವ್ವನ ಭ್ರೂಣ. ತದನಂತರದಲ್ಲಿ ಕಣ್ಣುಬಿಟ್ಟಾಗ ಕಂಡದ್ದು ಹೆತ್ತವಳು. ಉಣಿಸಿದಳು, ಉಡಿಸಿದಳು, ತೊಳೆದು ತೂಗಿದವಳು. ಅವ್ವನ ಕಣ್ಣಿನ ಅಂಚಿನಲ್ಲಿ ಕಾಣಸಿಗುವ ಆ ಕಪ್ಪು ಕಂದಕವೇ ಹೇಳುತ್ತಿತ್ತು ಬದುಕಿನಲ್ಲಿನ ಎಲ್ಲಾ ನೋವಿನ ಸಂಗತಿಗಳು ಅಲ್ಲೇ ಹೆಪ್ಪುಗಟ್ಟಿವೆ ಎಂದು. ಆಕೆಯನ್ನು ತಿನ್ನಬೇಕೆಂದು ನಿರ್ಧರಿಸಿಕೊಂಡು ಬರುವ ಎಂಥಾ ದೈತ್ಯ ಮೃಗಗಳಾದರೂ ಸರಿಯೇ.. ಒಮ್ಮೆ ಆಕೆಯ ಕಣ್ಣಂಚಿನ ದಾರಿಯನ್ನು ದೃಷ್ಠಿಯಿಟ್ಟು ನೋಡಿಬಿಟ್ಟರೆ ನಿಜಕ್ಕೂ ಕ್ರೌರ್ಯ ತುಂಬಿದ ನಮ್ಮ ಜೀವನಶೈಲಿಯ ಮೇಲೆ ನಮಗೆ ಅಸಹ್ಯ ಹುಟ್ಟದೆ ಇರದು.  ಅವ್ವ, ಅಕ್ಕ ಅಪ್ಪ, ಅಣ್ಣ, ತಾತ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಎಂದು ಕರೆಯುವುದನ್ನು, ಯಾರಾದ್ರೂ ಸಿಕ್ಕಾಗ ಮನೆಗೆ ಬರಮಾಡಿಕೊಳ್ಳುವುದನ್ನು, ಸಾಲ ಕೇಳಲು ಮನೆಗೆ ಬಂದವರಿಗೆ ನೀರು ಕೊಟ್ಟು ಅಪ್ಪ ಇಲ್ಲದಿರುವ ವಿಷಯ ಮುಟ್ಪಿಸುವುದನ್ನು, ತನಗೆ ರಕ್ತಸ್ರಾವವಾದಾಗ ಮೈವರೆಸಿಕೊಳ್ಳಲು ಬಟ್ಟೆ ಕೊಡುವುದನ್ನು, ಒಲೆಯ ಮೇಲೆ ಅಕ್ಕಿ ಬೇಯಿಸುವಂತೆ ಜೀವನದಲ್ಲಿ ಎದುರಾಗುವ ಕಷ್ಟಗಳಲ್ಲಿ ಬೆಂದು ಅನ್ನವಾಗುವುದನ್ನು ಎಂದಿಗೂ ಮರೆಯದಂತೆ ಕಲಿಸಿಕೊಟ್ಟವಳೇ ಜಗಕ್ಕೆ ಪರ್ಯಾಯ ಮಾರ್ಗವಾಗಿರುವ ನನ್ನವ್ವ.

ಕೀಟಲೆ ಮಾಡದಂತೆ ತಡೆಯುತ್ತಿದ್ದದ್ದು ಅಂಗನವಾಡಿಯ ಕನ್ನಡಕದ ಟೀಚರಮ್ಮ. ಸೀರೆ ಉಡುವ ಟೀಚರು, ಲೇಟಾಗಿ ಬರುವ ಟೀಚರು, ಹೊಡೆಯುವ ಟೀಚರು ಎಂದು ವಿಭಾಗೀಕರಿಸುವುದನ್ನು ಕಲಿತದ್ದೇ ಅಲ್ಲಿ. ಸ್ಲೇಟಿನ ಮೇಲೆ ಅಕ್ಷರ ತಿದ್ದಲು ಬಳಸುತ್ತಿದ್ದ ಬಳಪದ ರುಚಿ ನೋಡಿದ್ದು, ಹಬ್ಬದ ದಿನ ಹೊಸ ಅಂಗಿ ಎಂದು ಬೀಗುತ್ತಿದ್ದವನ ಚಡ್ಡಿ ಎಳೆದಿದ್ದು, ಟೀಚರ್ ಕೈಗೆ ಕೋಲು ಸಿಗದ ಹಾಗೆ ಮಾಡಿದ್ದು ಎಲ್ಲವನ್ನು ಕಲಿತೆವು. ನಂತರ ಪ್ರೈಮೆರಿ ಸ್ಕೂಲಿಗೆ ಬಂದಾಗ ಯೂನಿಫಾರ್ಮ್ ನಮ್ಮ ಮೈಹೊಕ್ಕಿ ನಮಗೆ ಹೊಸ ಜನ್ಮ ಕೊಟ್ಟಿತು. ಶಿಳ್ಳೆ ಹೊಡೆಯುವುದು, ಹುಡುಗಿಯರ ಜಡೆ ಎಳೆಯುವುದು, ತುರಿಕೆ ಸೊಪ್ಪಿನಿಂದ ಹಗೆ ತೀರಿಸಿಕೊಳ್ಳುವುದು, ಮಧ್ಯಾಹ್ನದ ಬಿಸಿಯೂಟದ ವಿರಾಮದಲ್ಲಿ ಶಿಕ್ಷಕರ ಕೈಗೆ ಬೆಲ್ ಸಿಗದಂತೆ ಮಾಡುವುದು, ಶಾರದಪೂಜೆ ಆಚರಿಸುವುದು, ಛದ್ಮವೇಷ ಹಾಕಿ ಹೆಜ್ಜೆ ಹಾಕುವುದು, ವಿಜ್ಞಾನದ ರೇಖಾಚಿತ್ರಗಳ ಚಾರ್ಟ್ ಮಾಡುವುದನ್ನು ನಮಗೆ ಅರಿವಿಲ್ಲದಂತೆಯೇ ಕಲಿತುಬಿಟ್ಟೆವು. ಹೋಂವರ್ಕ್ ಮಾಡಿರದ ದಿನಗಳಲ್ಲಿ ಹುಷಾರಿಲ್ಲ ಅಂತ ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ಮಲಗಿದ್ದ ದಿನಗಳಲ್ಲಿ ಶಿಕ್ಷಕರೇ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿದ್ದರು. ಎಲ್ಲಾ ರೋಗಕ್ಕೂ ಸರ್ಕಾರದಿಂದ ಕೊಡುತ್ತಿದ್ದ ಕೆಂಪು ಮಾತ್ರೆಗಳನ್ನು (ಐರನ್ ಟ್ಯಾಬ್ಲೆಟ್) ನುಂಗಿಸಿ ತರಗತಿಯಲ್ಲಿಯೇ ಮುಗಿಸುತ್ತಿದ್ದರು.


ಪ್ರೌಢಶಾಲೆಗೆ ಬಂದಾಗ ಕೋಡುಗಳು ಬಂದವು. ಹುಡುಗಿಯರ ಮುಂಚೆ ನಾಚುವುದನ್ನು, ಅವಾಜ್ ಹಾಕುವುದನ್ನು ಕಲಿತೆವು. ಕ್ಲಾಸಿನ ಲೀಡರ್ ನಾವಾಗಿದ್ದಾಗ ಬೋರ್ಡುಗಳ ಮೇಲೆ ಹೆಸರು ಬರೆದು ವೈರಿಗಳ ಮೇಲೆ ಹಠ ಸಾಧಿಸುತ್ತಿದ್ದೆವು. ಖೋ-ಖೋ, ಕಬ್ಬಡ್ಡಿ, ವಾಲಿ ಬಾಲ್, ರನ್ನಿಂಗ್, ಹೈ-ಜಂಪ್, ಲಾಂಗ್ ಜಂಪ್ ಎಲ್ಲವನ್ನೂ ಪ್ರಯತ್ನಿಸಿದೆವು. ಸಂಧಿಗಳ ಬಗ್ಗೆ ಕನ್ನಡ ಮೇಸ್ಟ್ರು ಪಾಠ ಮಾಡುವಾಗ ನಮ್ಮ ಸಂಧಿಗಳ ಬಗ್ಗೆ ಮಾತಾಡಿಕೊಂಡು ಪರಿವಿಲ್ಲದಂತೆ ಜೋರಾಗಿ ನಕ್ಕು ಒದೆಸಿಕೊಂಡಿದ್ದೆವು. ಇಂಗ್ಲೀಷ್ ಮೇಸ್ಟ್ರು ಹೆಚ್ ಎಸ್ ಸ್ವಾಮಿಯವರು ಪಿ. ಲಂಕೇಶ್ ಅವರ ಮದರ್ ಕವನವನ್ನು ಕನ್ನಡದಲ್ಲಿ ವಿಶ್ಲೇಷಿಸುವಾಗ ಕಣ್ಣು ತುಂಬುತ್ತಿದ್ದವು. ಗಣಿತದ ಸೂತ್ರಗಳನ್ನು ಕಲಿಯುವಲ್ಲಿ ಕೊನೆಗೂ ಸೋತು ಕಾಪಿ ಹೊಡೆದವು. ಸಮಾಜ ನಿದ್ದೆ ತರಿಸುವಂತಹ ವಿಷಯವಾಗಿತ್ತು. ಹಿಂದಿ ತಲೆಗೆ ಹತ್ತಲೇ ಇಲ್ಲ. ವಿಜ್ಞಾನದ ಕೆಲವು ರಹಸ್ಯಗಳು ಹಾಗೂ ಕೌತುಕಗಳು ಈಗ ಅರ್ಥವಾಗುತ್ತಿವೆ.

ಪಿ.ಯು.ಸಿ ಓದುವಾಗ ಕಾಲೇಜಿಗಿಂತ ಹತ್ತು-ಹನ್ನೆರಡು ಪಟ್ಟು ಸಮಯವನ್ನು ಹಾಸ್ಟೆಲ್ಲಿನಲ್ಲಿಯೇ ಕಳೆಯುತ್ತಿದ್ದೆವು. ಕಾಲೇಜು ಎಂಬುದು ನಮಗೆ ತವರು ಮನೆಯಾಗಿಬಿಟ್ಟಿತು. ಹಾಸ್ಟೆಲ್ಲಿನ ಊಟ ಬೋರಿಡಿಸಿದಾಗ ಅಕ್ಕಪಕ್ಕದ ಮಂಟಪಗಳಲ್ಲಿ ನಡೆಯುವ ಮದುವೆ ಸಮಾರಂಭಗಳಿಗೆ ನಮ್ಮ ಬಟ್ಟೆಗಳನ್ನು ಗೆಳೆರು ತೊಟ್ಟು, ಅವರ ಬಟ್ಟೆಗಳನ್ನು ನಾವು ತೊಟ್ಟು ಸ್ನಾನ ಮಾಡಿರುವ ರೀತಿ ತಲೆಗೆ ತಣ್ಣೀರು ಚುಮುಕಿಸಿಕೊಂಡು ಸ್ಟೈಲಾಗಿ ಇನ್ಸಲ್ಟ್ ಮಾಡಿ ಹುಡುಗಿಯರಿಗೆ ಫೋಸು ಕೊಡುತ್ತಾ ತಲೆ ಎತ್ತಿ ಮೆರೆಯುತ್ತಿದ್ದವು. ಯಾರಾದರೂ ಪರಿಚಯದವರು ಕಂಡರೆ, ಎಲೆಯ ಮೇಲಿನ ಬೋಂಡ, ಬಜ್ಜಿ, ಬಾದುಷ, ಜಿಲೇಬಿ, ಮೈಸೂರ್ ಪಾಕ್ ತಿನಿಸುಗಳನ್ನು ಜೇಬಿಗೆ ತುರುಕಿಕೊಂಡು ಸೀದಾ ಹಾಸ್ಟೆಲ್ಲಿನ ಕಡೆಗೆ ಮುಖಮಾಡುತ್ತಿದ್ದೆವು. ಕಾಲೇಜಿನ ಲೆಕ್ಚರ್ ಹಾಗೂ ನೆಲ ವರೆಸುವ, ಬಾತ್ರೂಮ್ ತೊಳೆಯುವ, ಲೆಕ್ಕ ಬರೆಯುವ ಹೆಂಗಸಿನ ಸಂಬಂಧದ ಬಗ್ಗೆ ರಾತ್ರಿ ಎಲ್ಲಾ ಜಾಗರಣೆ ಮಾಡಿ ಹರಟಿಸುತ್ತಿದ್ದೆವು. ಅಲ್ಲಿ ನಮಗೆ ಲೆಕ್ಚರುಗಳಿಗಿಂತ ಹೆಚ್ಚು ಕಂಡದ್ದು ತಲೆಗೆ ಹತ್ತದ ಇಂಗ್ಲೀಷ್ ಪದಗಳು.

ಡಿಗ್ರಿಗೆಂದು ಬೆಂಗಳೂರಿಗೆ ಬಂದಾಗ ಹೊಸತಿಗೆ ಹೊಂದಿಕೊಳ್ಳಲು ಸಮಯ ಹಿಡಿಯಿತು. ನಮ್ಮೂರಿನಲ್ಲಿ ನಾವೇ ಶೂರರು ಎಂದು ಕುಣಿಯುತ್ತಿದ್ದ ನಮಗೆ ಬೆಂಗಳೂರು ಸಾಗರದಂತೆಯೂ ಈಜಬೇಕಾದ ಅನಂತತೆಯ ಬಗ್ಗೆಯೂ ದಿಗ್ದರ್ಶನ ತೋರಿತು. ಆಗೆಲ್ಲಾ ನಮ್ಮೂರಿನ ನೆನಪುಗಳು ಹೃದಯವನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದೆವು. ಇಷ್ಟವಿಲ್ಲದಿದ್ದರೂ ಇಂಗ್ಲೀಷ್ ಪದಗಳನ್ನು ಬಾಯಿಪಾಠ ಮಾಡಿಕೊಂಡು ಪರೀಕ್ಷೆಗಳಲ್ಲಿ ಜೀವ ಉಳಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ತರಗತಿಗಳು ಕನ್ಫ್ಯೂಸ್ ಆಗಿ ಯಾವ್ಯಾವುದೋ ತರಗತಿಗಳನ್ನು ಕೇಳಿ ತಲೆ ಕೆರೆದುಕೊಂಡಿದ್ದುಂಟು. ಕಾಲೇಜುಗಳಲ್ಲಿ ಕಾಲೇಜಿನ ಬಗ್ಗೆ ನಮ್ಮ ತಲೆಯಲ್ಲಿದ್ದ ಚಿತ್ರಣಗಳೇ ಕಾಣಸಿಗುತ್ತಿರಲಿಲ್ಲ. ಅಂತೂ ಡಿಗ್ರಿಯನ್ನು ಅರ್ಥಮಾಡಿಕೊಳ್ಳಲು ವರ್ಷ ಕಳಿಯಬೇಕಾಯ್ತು. ಎರಡನೆ ವರ್ಷಕ್ಕೆ ಪೂರ್ತಿ ಕಾಲೇಜು ಪರಿಚಯವಾಗಿತ್ತು. ಮೊದಮೊದಲು ತರಗತಿಗಳ ಗೊಂದಲದಲ್ಲಿ ಗೈರುಹಾಜರಾಗುತ್ತಿದ್ದೆವು. ಆದರೆ ದಿನ ಕಳೆದು ಕಾಲೇಜು ಅರ್ಥವಾಗುತ್ತಾಹೋದಂತೆ ಪಾಠ ಕೇಳಲು ಬೇಜಾರಾಗಿ ತರಗತಿಗಳಿಗೆ ತಪ್ಪಿಸಿಕೊಳ್ಳುತ್ತಿದ್ದೆವು. ಕನಿಷ್ಠ ಶೇ. ಹಾಜರಾತಿ, ಇಂಟರ್ನಲ್ಸ್ ಹಾಗೂ ಲೆಕ್ಚರ್ ಗಳ ಮುಖಪರಿಚಯಕ್ಕಾಗಿ ಮಾತ್ರ ಕಾಲೇಜಿಗೆ ಹೋಗುತ್ತಿದ್ದೆವು. ಡಿಗ್ರಿ ಸರ್ಟಿಫಿಕೇಟ್ ಕೊಡುವಾಗ ಲೆಕ್ಚರ್ ಗಳು ನಮ್ಮನ್ನು ಎಂದೂ ನೋಡಿರದ ಅಪರಿಚಿತರಂತೆ ದಿಟ್ಟಿಸಿ ನೋಡುತ್ತಿದ್ದರು. ನಮ್ಮ ಮಿಕ್ಕೆಲ್ಲಾ ಸಮಯ ಕಳೆದದ್ದು ಆಟದ ಮೈದಾನ, ಕಬ್ಬನ್ ಪಾರ್ಕ್ ಮತ್ತು ಸಿನೆಮಾ ಥೆಯೇಟರುಗಳಲ್ಲಿ. ಜಾತಿಗನುಗುಣವಾಗಿ ಸಿಗುತ್ತಿದ್ದ ಸ್ಕಾಲರ್ ಶಿಪ್ ಗಳು ನಮ್ಮ ಖರ್ಚುಗಳಿಗೆ ಸಮವಾಗುತ್ತಿದ್ದವು. ಈಥರ ದಿನಗಳು ಉರುಳುವಾಗ ನಮಗೆ ಒಬ್ಬರು ಸನ್ಮಾರ್ಗದರ್ಶಕರು ಸಿಕ್ಕರು. ಬಡತನದ ಬೇಗೆಯಲ್ಲಿ ಬೆಂದು ಅರಳಿದ ಹೂವಿನ ಪರಿಮಳ ನಮ್ಮೆಲ್ಲರನ್ನು ಆಕರ್ಷಿಸಿತು. ಅವರೇ ತಂದೆ ಸಮಾನ ಚಂದ್ರಪ್ಪ ಬೆಲವತ್ತ. ವಿಜ್ಞಾನವನ್ನು ನಮ್ಮೆಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಬೋಧಿಸಿದವರು. ತಂದೆಯಂತೆ ಜೊತೆಯಲ್ಲಿ ಕೂತು ಮದ್ದೆ ತಿಂದವರು. ಮಕ್ಕಳಂತೆ ನಮ್ಮ ಜೊತೆಗೂಡಿ ಹುಟ್ಟುಹಬ್ಬ ಆಚರಿಸಿಕೊಂಡವರು. ಬದುಕಿನ ವಿವಿಧ ಆಯಾಮಗಳು ಅರಿಕೆಯಾಗುವಂತೆ ನಮ್ಮ ಎದೆಯಾಳದಲ್ಲಿ ಚಿತ್ರಿಸಿದವರು. ಇಂದಿಗೂ ಅವರ ನನ್ನ ಸಂಬಂಧ ಅಪ್ಪ-ಮಗ, ಅಣ್ಣ-ತಮ್ಮ ಮತ್ತು ಹಮ್ಮು ಬಿಮ್ಮುಗಳಿಲ್ಲದ ಸ್ನೇಹಿತರಂತೆ ಇದೆ. ಅಲ್ಲಿಂದ ನಮ್ಮ ವಿಧ್ಯಾರ್ಥಿ ಜೀವನಶೈಲಿಯೇ ಬದಲಾಯ್ತು. ಇಂಗ್ಲೀಷ್ ಸರಳವಾಗಿ ಜೀರ್ಣವಾಯಿತು. ಡಿಗ್ರಿ ಎಂದರೆ ಇಷ್ಟೆನಾ? ಎನ್ನುವಷ್ಟು ಮನಸ್ಸು ಹಗುರಾಯ್ತು. ಎಂದೂ ಕಾಲೇಜಿನ ವೇದಿಕೆಯ ಮೆಟ್ಟಿಲು ಹತ್ತದವರು ನಂತರದ ದಿನಗಳಲ್ಲಿ ವೇದಿಕೆ ಬಿಟ್ಟು ಕದಲದಂತೆ ಅಸ್ತಿತ್ವ ರೂಪಿಸಿಕೊಂಡೆವು. ಹೇಗೋ ಡಿಗ್ರಿ ಮುಗಿಯಿತು. ಆದರೆ ನನ್ನ ಮತ್ತು ನನ್ನ ಗುರುಗಳ ಸಂಬಂಧ ಎಂದೂ ಮುಗಿಯುವುದಿಲ್ಲ.

ನಂತರ ಕ್ರಿಯೇಟಿವ್ ಫೀಲ್ಡಿಗೆ ಎಂಟ್ರಿ ಕೊಟ್ಟೆವು. ರಂಗಭೂಮಿ ಎನ್ನುವ ಅದಮ್ಯ ಚೇತನ ನಮ್ಮಲ್ಲಿ ಬದುಕಿನ ಬಗೆಗೆ ಇರಬೇಕಾದ ಧೈರ್ಯ ತುಂಬಿತು. ಶಿಸ್ತು, ಸಂಯಮ, ಬೆವರು, ಸಿಹಿ-ಕಹಿಗಳೆಲ್ಲವು ಅರ್ಥವಾದವು. ಜೀವನ ಒಂದು ಸಂಗೀತ. ನಾವು ನುಡಿಸಿದಂತೆ ಅದು ನುಡಿಯುತ್ತದೆ. ನುಡಿಸದಿದ್ದರೆ ಬದುಕು ಶೂನ್ಯ ಎಂಬೆಲ್ಲಾ ತಾತ್ವಿಕ ಇನ್ನೆಲೆಗಳ ವೈಶಾಲ್ಯತೆ ತಲೆ ತುಂಬಿದವು. ನನಗೆ ಸಾಹಿತ್ಯವೂ ಕೂಡ ಒಂದು ಕಲಾದರ್ಶಕ. ನೋವುಗಳನ್ನು ಮರೆಯಲು ಗೀಚುತ್ತಿದ್ದವನಿಗೆ ಅನ್ನ ಹುಟ್ಟಿಸಿಸಿಕೊಳ್ಳುವ ದಾರಿ ತೋರಿತು. ಪುಸ್ತಕಗಳು ಒಳ್ಳೆಯ ಸಂಗಾತಿಗಳಾದವು. ಆ ದಾರಿಯಲ್ಲಿ ನನ್ನನ್ನು ಸದಾ ತಿದ್ದುತ್ತಾ ಬಂದಿರುವುದು ಡಾ. ನೇತ್ರಾವತಿ ಹರಿಪ್ರಸಾದ್ ಅವರು.  ರಂಗದ ಮೇಲೆ ಆಟವಾಡುವುದರ ನಡುವೆಯೇ ಅಪ್ಪನನ್ನು ಕಳೆದುಕೊಂಡೆ. ಅಲ್ಲಿಯವರೆಗೂ ಅರ್ಥವಾಗದ ಅಪ್ಪ ಈಗ ಎಳೆಎಳೆಯಾಗಿ ಅರ್ಥವಾಗುತ್ತಿದ್ದಾನೆ. ಅಪ್ಪ ಬರಿ ನೆನಪುಗಳನ್ನು ಬಿಟ್ಟು ಹೋಗಿಲ್ಲ. ಆತ ಬದುಕಬೇಕಾದ ಇನ್ನೊಂದು ಬದುಕನ್ನು ನನಗಾಗಿ ಬಿಟ್ಟುಹೋಗಿದ್ದಾನೆ. ಅಪ್ಪನ ಜಾಗವನ್ನು ಈಗ ಅಣ್ಣ ತುಂಬಿದ್ದಾನೆ. ಅಣ್ಣ, ಅವ್ವ ಇಬ್ಬರೂ ನನ್ನ ಬಲ ಮತ್ತು ಧೈರ್ಯಗಳಾಗಿವೆ.

ಸಿನೆಮಾ ರಂಗಕ್ಕೆ ಬಂದಾಗ ಸಾಮಾಜಿಕ ವ್ಯವಹಾರಿಕತೆಯ ಬಗ್ಗೆ ದರ್ಶನವಾಯಿತು. ಅಲ್ಲಿ ಇನ್ನೂ ಕಲಿಯುತ್ತಿದ್ದೇನೆ. ನಾನು ಏನು ಎಂಬುದು ನನಗೆ ಅರ್ಥವಾಗುವವರೆಗೆ ಕಲಿಯುತ್ತಲೇ ಇರುತ್ತೇನೆ. ನನ್ನ ಜೀವನದಲ್ಲಿ ಗುರುಗಳ ಪಾತ್ರವಹಿಸಿದ ಅಪ್ಪ, ಅವ್ವ, ಅಣ್ಣ, ಗೆಳೆಯರು, ಗೆಳತಿಯರು ಅವರ ತಂದೆ ತಾಯಿಗಳು, ಅಪರಿಚಿತರು, ಶಿಕ್ಷಕರು, ಪುಸ್ತಕಗಳು ಎಲ್ಲರಿಗೂ ಕೂಡ ನಾ ಸದಾ ಋಣಿಯಾಗಿರುತ್ತೇನೆ.

# ಅನಂತ ಕುಣಿಗಲ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...