ಎಲ್ಲಿಯ ಅಂತ್ಯ ಇದಕ್ಕೆಲ್ಲಾ??!
ಬದುಕುವ ಛಲವಿದೆ
ಬದುಕಲು ಭಯವಾಗುತಿದೆ
ನೋಟ ಬೀರಿದೆಲ್ಲೆಡೆ
ಅಪಹರಣದ ಸುದ್ದಿಗಳ ಕೇಳಿ ಕೇಳಿ
ಕಿವಿಗಳೂ ಮಂದವಾಗುತಿವೆ..
ಹೆಣ್ಣು ಹಣ್ಣಾಗುತಿರುವಳೇನೋ
ತಿಂದೆಸೆದ ಸಿಪ್ಪೆಯಾಗುತಿರುವಳಲ್ಲ?
ಅಬ್ಬಾ ಅದೆಂಥ ಕೃತ್ಯಗಳು
ಎಳೆಕೂಸುಗಳ ತೋಯ್ದು ಹೋದ ಧ್ವನಿಗೆ ಬಗ್ಗದ ಪಾಪಿಗಳಿರಾ..
ಅಮ್ಮಾ ಎಂದು ತೊದಲ್ನುಡಿವ
ಹಸುಳೆ ಕಾಪಾಡಿ,,, ಎನ್ನುತಿರಲು
ಮಾನವೀಯತೆ ಮೂಲೆ ಸೇರಿತೆ? ಇನ್ನೂ ಬಲಗೊಳ್ಳದ
ಎಳೆ ಮೂಳೆಗಳು ವಿಲ ವಿಲ ಎನ್ನುತಿವೆ
ಮುಗಿಬಿದ್ದ ಬಿಸಿರಕ್ತಕ್ಕೂ ತೋಚದೆ ಹೋಯಿತೆ.
ಅತ್ತ ಅತಂತ್ರಗೊಂಡ ಆತ್ಮಗಳೆ ಬಡದಾಡುತ್ತಿದ್ದರೆ,
ಇತ್ತ ಕಂಡು ಕಾಣರಿಯದೇ
ಹಿಂದೇಟು ಹಾಕುವ ಸಮಾಜ,
ಮೇಣದ ಬತ್ತಿಗೂ ಬೇಸರ ತಂದಿದೆ
ಸತ್ವವಿಲ್ಲದ ಹೋರಾಟ ನೋಡಿ..
ಜಗಮುಖವ ನೋಡಲು
ಹೊಸ್ತಿಲೆ ದಿಗ್ಬಂಧನ ಹಾಕುತಿದೆ
ಸಂಸ್ಕಾರದ ಮೇಲೆ ಲಗ್ಗೆ ಇಟ್ಟು
ಜೊಲ್ಲು ಸುರಿಸುತ ನಿಂತ
ಕಾಮುಕರ ದಂಡನು ನೋಡಿ..
ಮಹಾಯುದ್ಧಗಳು ನಡೆದರೂ
ಹೆಣ್ಣಿಗೆ ಕಾವಲಿತ್ತೆನೋ,
ಆದರಿಂದು ಕಿರುಚಾಟ
ಮುಗಿಲೇರಿದರೂ ಕುರುಡರಾಗುವುದ
ನೋಡಿ ಬಿಕ್ಕಿಸುತಿದೆ ಮನ..
ಜಗವ ಕಂಡಿರದ ಹೆಣ್ಗೂಸೂ
ಕಂಕುಳ ಹುರಿಯನ್ನೆ
ಬಿಗಿದುಕೊಳ್ಳುತ್ತಿದೆ
ಪಾಪಿಗಳಿಗೆ ಬಲಿಯಾಗದಿರಲು
ಇನ್ನಾದರೂ ರಕ್ಷಣೆ ಕೊಡುವಿರೇ?
- ಮೇಘನಾ ಕರಿಸೋಮನಗೌಡ್ರ, ಹಾವೇರಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ