ಹೀಗೊಂದು ವಿಷಾದ..
ಹಾಡು ಹಗಲೇ
ಕಾರಿರುಳ ಛಾಯೆ
ಭಯದ ಬೆನ್ನಿಗೆ
ಬದುಕ ಬವಣೆಯ ಭಾರ..
ಹೊತ್ತು ಸಾಗಿದೆ...
ಸ್ವಾತಂತ್ರ್ಯದ ಹಾದಿಯಲಿ...
ಬಿತ್ತುವ ನೆಲಗಳೀಗ
ಬತ್ತಿವೆ,ಬಿರಿದಿವೆ..
ಹಸಿರು ಹುಟ್ಟನು ನುಂಗಿ
ಉಳುವ ನೆಲದ ಮೇಲೆ
ಮೊಳೆಯುವ ಬೀಜದ ಬದಲು
ಹಾಳು ಕಟ್ಟಡಗಳು ತುಂಬಿ
ಹಸಿದ ಹೊಟ್ಟೆಗಳ
ಅಸಹಾಯ ಹೆಗಲುಗಳ
ಬುನಾದಿಯ ಮಾಡಿ...
ಶ್ರಮದ ಬಸಿದ ಪಸೆಯ
ಉಂಡ ಮಣ್ಣ ಕಣ ಕಣವು
ಫಸಲಾಗದೆ ಹುಸಿಯಾಗಿವೆ.
ಹಸಿವಿನ ದಾರಿಯ ಬದಿ
ಎದೆಯ ಕನಸುಗಳ
ಬಗೆದು ಬರಿದು ಮಾಡಿದ
ಬದುಕು ಬೀಡು ಬಿಟ್ಟಿದೆ...
ಉಳಿದ ಉಸಿರಿಗಾಗಿ...
ತನ್ನೊಳಿತಿಗೆ ತಾನು
ಅರಿವ ಕುರುಹುಗಳ ತುಳಿದು
ಮೌಲ್ಯ ನೆಲೆಗಳ ಅಳಿಸಿ
ಮಿಕ್ಕಿ ಮಿಗಿಲಾಗಿ
ಕರಗದ ದಾಹ ಮೀರಿ
ತಿರುಗಿ ಎರಗುವ ದಾಳಿಗೆ
ವಾಸ್ತವದಿ ನಲುಗುವ ಕ್ಷಣ
ಮರೆತು ನಡೆಯುತಲಿದೆ...
ಒಮ್ಮೆ ಅರಿವುಗಣ್ಣ ತೆರೆದು ನಡೆ
ಪಾಪಕೂಪಗಳು ಮುಂದಿವೆ...
- ಸಿದ್ದು ಮೂರ್ತಿ ತುಮಕೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ