ಯುವ ಉತ್ಸಾಹಿ ಬೋರೇಗೌಡನ ಅನಂತಯಾನ
ನನ್ನ ಪ್ರಕಾರ ಸಾಧಕ ಎಂದರೆ ನಿರ್ದಿಷ್ಟವಾದ ಗುರಿ ಮುಟ್ಟುವುದು. ಸಾಧಕ ಎಂದಿಗೂ ಗುರಿ ಮುಟ್ಟಿ ನಿಲ್ಲಬಾರದು, ನಿರಂತರ ಶ್ರಮದ ಮೂಲಕ ಸಾಧನೆಯ ಉತ್ತುಂಗ ಮಟ್ಟವನ್ನು ಅಲಂಕರಿಸಿ, ಇತರರಿಗೆ ಮಾದರಿಯಾಗಬೇಕು. ನಾನು ಪರಿಚಯಿಸುತ್ತಿರುವ ವ್ಯಕ್ತಿಯನ್ನು ಸಾಧಕ ಅನ್ನುವುದರ ಬದಲು ಸಾಧನೆಯ ಹಾದಿಯಲ್ಲಿ ಚಲಿಸುತ್ತಿರುವ ಛಲಗಾರ ಎನ್ನಲು ಇಚ್ಛಿಸುವೆ.
ಬೋರೇಗೌಡ ಕೆ.ಎನ್ ಅವರು ಈಗಾಗಲೇ ಸಾಹಿತ್ಯ ಸೇವೆ ಹಾಗೂ ರಂಗಭೂಮಿಯ ಮೂಲಕ ಹಲವರಿಗೆ ಅನಂತ ಎಂದು ಪರಿಚಯವಿರಬಹುದು. ಇವರು ಹುಟ್ಟಿದ್ದು ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಒಂದು ಬಡ ಕುಟುಂಬದಲ್ಲಿ. ಹುಟ್ಟೂರಿನಲ್ಲಿ ಪ್ರಾಥಮಿಕ ಶಾಲೆ, ರಾಮನಗರ ಜಿಲ್ಲೆಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ. ಬೆಂಗಳೂರಿನಲ್ಲಿ ವಿಜ್ಞಾನ ಪದವಿ ಹಾಗೂ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ ಮುಗಿಸಿ, ಸಧ್ಯ ಚಲನಚಿತ್ರ ನಿರ್ದೇಶಕರಾಗುವ ತಮ್ಮ ಕನಸಿನತ್ತ ಪಯಣಿಸುತ್ತಿದ್ದಾರೆ. ಈಗಾಗಲೇ ಹಲವಾರು ಕಿರು ನಾಟಕಗಳು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಇವರಿಗೆ ಸುಮಾರು 21 ವರ್ಷ ಆಗಿತ್ತು ಬೋರೇಗೌಡ ಅನಂತನಾಗಿ ಕಾಣಿಸಿಕೊಂಡಾಗ. ಅನಂತ ಎಂಬ ಹೆಸರಿನಲ್ಲೇ ಇದೆ 'ಕೊನೆಯೇ ಇಲ್ಲ' ಎಂದು. ಇವರ ತಂದೆ-ತಾಯಿ ತಮ್ಮ ಮನೆ ದೇವರಾದ ಭೈರವೇಶ್ವರನ ಕೃಪೆಗಾಗಿ 'ಬೋರೇಗೌಡ' ಎಂದು ನಾಮಕರಣ ಮಾಡಿದರೆ, ಬುದ್ಧಿ ಬೆಳೆದಂತೆ ಸಾಹಿತ್ಯಾಭಿರುಚಿ ಹೆಚ್ಚಿಸಿಕೊಂಡು, ಬರೆಯಲು ಶುರುಮಾಡಿದಾಗ ಕಾವ್ಯನಾಮವಾಗಿ 'ಅನಂತ' ಎಂದು ಬದಲಾದರು. ಈಗ ಅನಂತ ಕುಣಿಗಲ್ ಎಂದರೆ ನನ್ನ ವಯಸ್ಸಿನ ಹುಮ್ಮಸ್ಸಿನ ಯುವಕ-ಯುವತಿಯರಿಗೆ ಬಹುದೊಡ್ಡ ಪ್ರೋತ್ಸಾಹದ ಮೆಟ್ಟಿಲು. ಎಲ್ಲರಿಗೂ ಬಾಲ್ಯದಿಂದ ಕನಸುಗಳಿರ್ತಾವೆ. ಆದರೆ ಆ ಕನಸುಗಳ ಬೆನ್ನತ್ತುವವರು ಮಾತ್ರ ಕೆಲವರು. ಅಂತಹ ಕೆಲವರಲ್ಲಿ ಅನಂತ ಅವರು ಕೂಡ ಒಬ್ಬರು ಎಂದು ಗುರುತಿಸಲು ಹೆಮ್ಮೆಯಾಗುತ್ತದೆ. ಇವರ ಬಗ್ಗೆ ಹೇಳಲು ಹೆಚ್ಚಿಗೆಯೇ ಇದೆ. ಯಾಕೆಂದರೆ ಇಪ್ಪತ್ತರ ಆಸುಪಾಸಿನಲ್ಲಿ ನಾವೆಲ್ಲ ಮಲಗಿ ಕನಸು ಕಾಣಲು ಶುರುಮಾಡಿದ್ದಾಗ, ಅನಂತ ಅವರು ಅವರ ಕನಸಿನ ನಾಲ್ಕೈದು ಮೆಟ್ಟಿಲುಗಳನ್ನು ಹತ್ತಿಬಿಟ್ಟಿದ್ದಾರೆ. ಎಲ್ಲವನ್ನು ಹೇಳಲು ಸಾಧ್ಯವಿಲ್ಲದಿದ್ದರೂ ಅನಂತ ನನಗೆ ತುಂಬಾ ಹತ್ತಿರದ ಗೆಳೆಯನಾದ್ದರಿಂದ ಕೆಲವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ತವಕ ನನ್ನದು.
ಅನಂತ ಅವರು ತಮ್ಮ ಡಿಗ್ರಿ ತೇರ್ಗಡೆಯಾದ ನಂತರ ಅವರಿಗಿದ್ದ ರಂಗಭೂಮಿಯ ಮೇಲಿನ ಕಾಳಜಿ, ಗೌರವ ಹಾಗೂ ಕಲಿಕಾ ಆಸಕ್ತಿ ಅವರನ್ನು ಸಾಣೇಹಳ್ಳಿಯಲ್ಲಿಯತ್ತ ಕರೆದೋಯಿತು. ಇವರು ಮುಂಗೋಪಿ ಹಾಗೂ ನೇರವಾದಿ ಅದು ಯಾರೇ ಆದರೂ ಸರಿಯೇ ನೇರ ಪ್ರಶ್ನೆ ಹಾಗೂ ಕಟು ಉತ್ತರ. ಹಾಗಾಗಿ ಇವರು ಎಲ್ಲರಿಗೂ ಮೊದಮೊದಲು ಹುಳಿಮವಿನ ಕಾಯಿ. ತಿನ್ನಲು ಆಗುವುದಿಲ್ಲ, ಉಗಿಯಲು ಮನಸ್ಸಾಗುವುದಿಲ್ಲ. ಮಾವಿನ ಕಾಯಿ ಹಣ್ಣಾಗಿ ಸಿಹಿಯಾಗಿ ರುಚಿಸಲು ಕೆಲವು ದಿನಗಳಾದರೂ ಕಳೆಯಬೇಕು. ಹಾಗೆಯೇ ಇವರೂ ಕೂಡ ಶಾಶ್ವತ ಹುಳಿ ಅಲ್ಲ ಎಂದು ತಿಳಿಯಲು ಇವರೊಂದಿಗೆ ಒಂದಷ್ಟು ದಿನ ಕಳೆಯಬೇಕು.
ಅನಂತ ಅವರು ಚಿಕ್ಕಂದಿನಿಂದ ವೆಟನರಿ ಡಾಕ್ಟರ್ ಆಗಿ ಪ್ರಾಣಿ, ಪಕ್ಷಿಗಳನ್ನ ಸಂರಕ್ಷಿಸುವ ಆಸೆಯಿದ್ದರೂ ಕೂಡ, ಪ್ರೌಢಶಾಲೆಯ ಜೀವನ ಇವರನ್ನು ಸಿನೆಮಾ ರಂಗದತ್ತ ಸೆಳೆಯಿತು. ಅಲ್ಲಿಂದ ಬಸ್ ಚಾರ್ಜಿಗೆ ಕೊಡುವ ಹಣದಲ್ಲಿ ಕದ್ದು ಸಿನೆಮಾ ನೋಡುತ್ತಾ ಬೆಳೆದರು. ರಂಗಭೂಮಿ ಸೇರುವುದಕ್ಕಿಂತ ಮೊದಲಿನಿಂದಲೂ ಓದು, ಬರಹ ಹಾಗೂ ಪುಸ್ತಕ ಪ್ರೀತಿ ಇವರಲ್ಲಿ ಅಗಾಧವಾಗಿ ಬೇರೂರಿತ್ತು. ಕಾಲೇಜಿನಲ್ಲಿದ್ದಾಗ ಅಂತರ ಕಾಲೇಜು ಸ್ಪರ್ಧೆ, ಎನ್.ಎಸ್.ಎಸ್, ಕನ್ನಡ ಪಾಂಚಜನ್ಯ ಸಂಘ ಅಂತ ಯಾವಾಗಲೂ ಅಲೆದಾಡುತ್ತಲೇ ಗೆಳೆಯರ ಗುಂಪು ಕಟ್ಟಿಕೊಂಡು ಕಿರುಚಿತ್ರ ಮಾಡುವಲ್ಲಿ ಯಶಸ್ವಿಯಾದರು. 'ರಕ್ತಾಕ್ಷಿ, ಬೈತಲೆ, ಮ್ಯಾಡ್' ಇವರ ನಿರ್ದೇಶನದ ಪ್ರಮುಖ ಕಿರುಚಿತ್ರಗಳು. ಹಾಗೇ ರಂಗಭೂಮಿ ಚಟುವಟಿಕೆಯ ಮುಖಾಂತರ ಇವರ ಅಭಿನಯದ 'ಅಶ್ವತ್ಥಾಮನ್' ನಾಟಕ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಸಂಭ್ರಮಹೋತ್ಸವದಲ್ಲಿ ಪ್ರದರ್ಶನಗೊಂಡಿದೆ. 'ಮೋಳಿಗೆ ಮಾರಯ್ಯ, ಮುಂದಣ ಕಥನ, ಏಕಲವ್ಯ, ಕದಡಿದ ನೀರು' ಇವರು ಅಭಿನಯಿಸಿರುವ ನಾಟಕಗಳು ರಾಜ್ಯಾದ್ಯಂತ ಪ್ರದರ್ಶನಗೊಂಡಿವೆ. ಓದುವ ಹವ್ಯಾಸದಿಂದ ಬರೆಯಲು ಶುರುಮಾಡಿ ಹಲವಾರು ಸಂಘ-ಸಂಸ್ಥೆಗಳಿಂದ ಮೆಚ್ಚುಗೆಗೆ ಪಾತ್ರವಾಗಿ, ಹಲವಾರು ಕಥೆ, ಕವನಗಳು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಓದು ಹಾಗು ಬರವಣಿಗೆ ಶುರುವಾದ ಸಮಯದಲ್ಲಿ ಇತರ ತಂಡಗಳಿಂದಾದ, ಸಾಹಿತ್ಯ ಸ್ಪರ್ಧೆಗಳ ಫಲಿತಾಂಶದಲ್ಲಿನ ಮೋಸ ಕಂಡು, ಈ ಹಾದಿಯಲ್ಲಿರುವ ಕೆಲವು ಯುವಕ/ಯುವತಿಯರಿಗಾದರೂ ಉಪಯೋಗವಾಗುವ ಹಾಗೆ ಯೋಚಿಸಿ, ಸ್ವಂತ ಖರ್ಚಿನಲ್ಲಿ 'ಕನ್ನಡ ಕಲರವ' ಎಂಬ ಸಾಹಿತ್ಯ ತಂಡವನ್ನು ಕಟ್ಟಿದರು. ಈಗಾಗಲೇ ತಂಡ ಒಂದು ವರ್ಷದ ನಿರಂತರ ಸಾಹಿತ್ಯ ಚಟುವಟಿಕೆಗಳ ಮೂಲಕ ಮನೆಮಾತಾಗಿದೆ.
ಮೊದಲು ಪ್ರತಿಲಿಪಿ ವೇದಿಕೆಯಲ್ಲಿ ಬರೆಯಲು ಶುರುಮಾಡಿದ ಇವರು ತಮ್ಮ 22 ನೆ ವಯಸ್ಸಿಗೆ ತಮ್ಮ ಚೊಚ್ಚಲ ಕೃತಿ 'ಋಣಭಾರ' ಎಂಬ ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಸಂಬಂಧಿಸಿದ ಕಥಾಸಂಕಲನವನ್ನು 'ಅವ್ವ ಪುಸ್ತಕಾಲಯ' ಎಂಬ ಸ್ವ-ಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿ ಹಲವು ಓದುಗರನ್ನು ಮುಟ್ಟಿದರು. ಈ ಹೊತ್ತಿಗೆಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ 'ಯುವ ಬರಹಗಾರರ ಚೊಚ್ಚಲ ಕೃತಿ ಬಹುಮಾನ, ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರಗಳು' ದೊರೆತಿವೆ. ಮತ್ತೆ ಮೂರು ತಿಂಗಳ ಅವಧಿಯಲ್ಲೇ ಹೆಣ್ಣಿನ ಜೀವನವನ್ನು ಕುರಿತ 'ಮೂರನೆಯವಳು' ಎಂಬ ಕವನ ಸಂಕಲನವನ್ನೂ ಪ್ರಕಟಿಸಿ ಯಶಸ್ವಿಯಾಗಿದ್ದಾರೆ. ಖುಷಿಯ ವಿಚಾರವೆಂದರೆ ತಾವು ರಂಗಾಭ್ಯಾಸ ಮಾಡಿದ ರಂಗಸಂಸ್ಥೆಯ ವತಿಯಿಂದ 'ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ' ಈ ಕೃತಿಯು ಬಿಡುಗಡೆಯಾಗಿದೆ. ಸಧ್ಯ ಕಾದಂಬರಿ ಬರವಣಿಗೆಯಲ್ಲಿ ತೊಡಗಿದ್ದು, ಆದಷ್ಟು ಬೇಗ ನಮ್ಮೆಲ್ಲರಿಗೂ ಅದರ ರುಚಿ ಸವಿಯುವ ಅವಕಾಶ ಸಿಗಲಿದೆ. ಅವ್ವ ಪುಸ್ತಕಾಲಯದಿಂದ ಯುವ ಬರಹಗಾರರಿಗೆ ಹಾಗೂ ಲೇಖಕರಿಗೆ ಪ್ರತೀ ವರ್ಷ ತಮ್ಮ ತಂದೆ 'ಶ್ರೀಮಾನ್ ಲೇ. ನರಸಯ್ಯ' ಅವರ ಸ್ಮರಣಾರ್ಥವಾಗಿ 'ಅವ್ವ ಸಾಹಿತ್ಯ ಪ್ರಶಸ್ತಿ' ಕೊಡಲು ನಿರ್ಧರಿಸಿದ್ದಾರೆ. ಹೀಗೆ ಇವರ ಸಾಹಿತ್ಯ ಹಾಗೂ ರಂಗಚಟುವಟಿಕೆಗಳನ್ನು ಗಮನಿಸಿದ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ವತಿಯಿಂದ '2021 ನೇ ಸಾಲಿನ ರಾಜ್ಯ ಯುವರತ್ನ ಪ್ರಶಸ್ತಿ' ನೀಡಿ ಗೌರವಿಸಿದೆ.
ನನಗೆ ತಿಳಿದಿರುವ ಪ್ರಕಾರ ಇವರ ಜೀವನದ ಅತ್ಯಮೂಲ್ಯ ಹಾಗೂ ಖುಷಿಯ ಕ್ಷಣವೆಂದರೆ ಇವರೊಟ್ಟಿಗೆ ರಾಜ್ಯ ಯುವ ರತ್ನ ಪ್ರಶಸ್ತಿಗೆ ಇವರ ಶಿಕ್ಷಕರು ಕೂಡ ಆಯ್ಕೆಯಾಗಿದ್ದರು. ಒಂದೇ ವೇದಿಕೆಯಲ್ಲಿ ಗುರು-ಶಿಷ್ಯ ಇಬ್ಬರೂ ಪ್ರಶಸ್ತಿ ಪಡೆದದ್ದು ಮರೆಯಲಾಗದ ಪುಣ್ಯ ಕ್ಷಣ. ಇನ್ನೂ ಇವರಿಗೆ ತನ್ನ ಅಣ್ಣನೆಂದರೆ ಬಹಳ ಪ್ರೀತಿ, ಅಪ್ಪನ ಮೇಲೆ ಮುನಿಸು, ಅವ್ವ ಎಂದರೆ ಜೀವ, ಕನ್ನಡ ಎಂದರೆ ಮುಂದು, ಸಿನೆಮಾ ಆಸಕ್ತಿ, ಅಜ್ಜ-ಅಜ್ಜಿ ಹೇಳುವ ಕಥೆ ಕೇಳುವಲ್ಲಿ ಕುತೂಹಲ, ರಂಗಭೂಮಿಯಲ್ಲಿ ನೆಮ್ಮದಿ, ಪುಸ್ತಕಗಳೇ ಪ್ರಪಂಚ, ಸ್ನೇಹಿತರೇ ಎಲ್ಲ, ಕಲಿಸಿದ ಗುರುಗಳೇ ದೇವರು, ಪರಿಸರ ಪ್ರೇಮಿ, ಅಡುಗೆ ಮಾಡುವುದು ಮತ್ತು ಊರು ಸುತ್ತುವುದನ್ನು ಸ್ವರ್ಗ ಅಂತಲೇ ಭಾವಿಸುತ್ತಾರೆ. ಇದಿಷ್ಟು ನಾ ಕಂಡ ಬೋರೇಗೌಡನ ಅನಂತಾವತಾರ. ಇವರ ಗೆಳೆತನವೇ ನನಗೆ ಒಂದು ವರ. ಇವರ ಎಲ್ಲ ಕನಸುಗಳು ನನಸಾಗಲಿ. ಇವರ ಸಮಾಜಮುಖಿ ಕಾರ್ಯವೈಖರಿ ಎಲ್ಲರನ್ನೂ ಹಬ್ಬಲಿ. ಎಲ್ಲರಿಗೂ ಸ್ಪೂರ್ತಿಯಾಗಲಿ.
ಅನಂತ ಅವರ ಬಗ್ಗೆ ಹೆಚ್ಚು ತಿಳಿಯಲು :
ಅನಂತ ಅವರ ಬಗ್ಗೆ ಹೆಚ್ಚು ತಿಳಿಯಲು :
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ