ಕ್ಷಮಿಸಿ ಬಿಡಿ ಅಕ್ಕ
(ಕೇರಳದ ಯುವತಿಯ ಮೇಲಾದ ಪೈಶಾಚಿಕ ಕೃತ್ಯದ ಸುದ್ದಿ ಕೇಳಿ, ನೋವಿನಿಂದ ಬರೆದ ಹೃದ್ರ್ಯ ಕಾವ್ಯ)
"ಕ್ಷಮಿಸಿ ಬಿಡಿ ಅಕ್ಕ" ಅಗ್ನಿಗಾಹುತಿಯಾಗುತ್ತಿದ್ದ ಪತಿವ್ರತೆ ಸೀತೆಯನ್ನು ತಡೆಯದೆ ಅವಕ್ಕಾದಂತೆ ನಿಂತಿದ್ದ ಪ್ರಜೆಗಳಿರುವ ದೇಶದೊಳು। ಯಃಕಶ್ಚಿತ್ ನಾನೊಬ್ಬನೂ ಅಷ್ಟೆ ಇಂದು ನಿಮ್ಮ ಪರ ದನಿ ಎತ್ತಲಾಗುತ್ತಿಲ್ಲ ಗಂಟಲಿನ ಪಸೆ ಒಣಗಿದೆ।
"ಕ್ಷಮಿಸಿ ಬಿಡಿ ಅಕ್ಕ" ಸ್ತ್ರೀಯನ್ನು ಜಾರಿಣಿ,ಲೋಕನಿಂದಿತೆ ಎಂದ ಹೇವರಿಕೆಯ ದೇಶದೊಳು ಕಾನೂನಿನ ವಿರುದ್ಧ ಸೆಟೆದು ನಿಂತು ಸ್ತ್ರೀ ಸ್ವಾತಂತ್ರ್ಯದ ಪರ ಧ್ವನಿ ಎತ್ತಲು ನಮ್ಮ ಜನ ನಿಗಿ ನಿಗಿ ಬೆವರುತ್ತಿದ್ದಾರೆ। ಪೌರುಷತ್ವ ಕಳೆದುಕೊಂಡ ಅವರ ನೆನೆದು ನನಗೆ ಖೇದವಾಗಿದೆ।
"ಕ್ಷಮಿಸಿ ಬಿಡಿ ಅಕ್ಕ" ಹಾಸಿಗೆಯ ಮೇಲೆ ಮೈ ಚೆಲ್ಲಿ ಉದ್ರಿಕ್ತ ಉನ್ಮಾದಕ್ಕಾಗಿ ಇಷ್ಟ ಬಂದಂತೆಲ್ಲಾ ಬಳಸಿಕೊಂಡ ಜನರ ಸುತ್ತಲು ಇಂದು ಕಾಷ್ಠ ಮೌನ ಆವರಿಸಿದೆ। ಕತ್ತಲೆಯ ಕೋಣೆಯಲ್ಲಿ ತೊಡೆ ತಟ್ಟುವವರ ಪೌರುಷವು ಅರ್ಧಕ್ಕೆ ಮುರುಟಿ ಹೋಗಿದೆ।
"ಕ್ಷಮಿಸಿ ಬಿಡಿ ಅಕ್ಕ" ಪಾಪವನ್ನು ದ್ವೇಷಿಸ ಬೇಕು ಪಾಪಿಯನ್ನು ಪ್ರೀತಿಸ ಬೇಕು ಎಂಬ ಗಾಂಧಿ ತತ್ವದಡಿಯಲ್ಲಿ ಬದುಕುತ್ತಿದ್ದಾರೆ ನಮ್ಮ ದೇಶ ಬಾಂಧವರು। ರಸ್ತೆಯುದ್ದಕ್ಕೂ ಜಾಥಾ ಹೊರಟು ಮೋಂಬತ್ತಿ ಉರಿಸಿ "ನ್ಯಾಯ ಬೇಕು" ಎಂದು ಕೇಳಿದರೆ ಎಲ್ಲವೂ ಮುಗಿದು ಹೋಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ, ಆದರೆ ನಿಮ್ಮ ತಾಯ್ಗರಳು ಮಡತೆ ಬಿದ್ದು ಹೋಗಿರುವುದ ಮರೆತಿದ್ದಾರೆ।
"ಕ್ಷಮಿಸಿ ಬಿಡಿ ಅಕ್ಕ" ಸಾವಿರ ಕನಸುಗಳ ಮೂಟೆ ಹೊತ್ತು ಬದುಕ ಹೆಕ್ಕಿಕೊಂಡು ಹೊರಟ ನಿಮಗೆ ಹೀಗಾಗಬಾರದಿತ್ತು ಎಂದು ನನಗೆ ಅನಿಸುತ್ತಿದೆ। ಅನಾಮಧೇಯ ಕೋಣೆಯಲ್ಲಿ ಕಳೆದುಕೊಂಡ ಶೀಲವ ತರಲು ಸಾಧ್ಯವಿಲ್ಲವೆಂಬುದೂ ತಿಳಿದಿದೆ। ಆದರೆ ಲೋಕದ ವಾರ್ತೆಗಳು "ಸಂತ್ರಸ್ತೆಗೆ ನ್ಯಾಯ ಸಿಗುತ್ತದೆ" ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ
ಮತ್ತೊಮ್ಮೆ ನಿತ್ತರಿಸಿಕೊಳ್ಳಲಾಗದೆ ತೊಯ್ದು ಹೋದ ದನಿಯಲ್ಲಿ ಕೇಳುತ್ತಿದ್ದೇನೆ "ಕ್ಷಮಿಸಿ ಬಿಡಿ ಅಕ್ಕ"। ಕಾಮಕ್ಕೆ ಪರ್ಯಾಯ ಮಾರ್ಗವಿದೆ ಆದರೆ ಪ್ರೀತಿಗಿಲ್ಲ ಎಂಬುದ ಈಗಲಾದರೂ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆಯಲಿ ನಿಮ್ಮನ್ನು ಮತ್ತೂ ಕ್ಷಮೆ ಕೇಳುವೆ।
- ದೀಕ್ಷಿತ್ ನಾಯರ್, ಮಂಡ್ಯ
ಪ್ರತ್ಯುತ್ತರಅಳಿಸಿ"ಕ್ಷಮಿಸಿ ಬಿಡಿ ಅಕ್ಕ" ದೀಕ್ಷಿತ್ ನಾಯರ್ ರವರು ರಚಿಸಿರುವ ಕಥನ ಕಾವ್ಯವಿದು. ಇಲ್ಲಿ ಕವಿಯು ಸಮಾಜಿಕ ಅರಾಜಕತೆಯನ್ನ ಬಿಂಬಿಸುವಲ್ಲಿ ಮುಂದಾಗಿದ್ದಾನೆ. ಬೇರೇಯವರ ತಪ್ಪನ್ನು ಕೈಬೆರಳು ಮಾಡಿ ದೂಷಿಸುವಾಗ ಉಳಿದ ಬೆರಳುಗಳು ನಮ್ಮನ್ನೇ ತೋರಿಸ್ತುವಂತೆ. ಆದರೆ ಇಂತಹ ಬೆರಳುಗಳನ್ನ ನಿರ್ಲಕ್ಷ್ಯತನದಿಂದ ಬೆರೇಯವರತ್ತ ಬೆರಳು ಮಾಡತ್ತಲೇ ಇರುವ ಹುಂಬರ ನಡುವೆ ಕವಿ ವಿಭಿನ್ನ ಎನಿಸಿದ್ದು ಸುಳ್ಳಲ್ಲ. ಸಾಮಾಜಿಕ ಅರಾಜಕತೆಯ ವಿರುದ್ದದ ನನ್ನೊಬ್ಬನ ದ್ವನಿಗೆ ದ್ವನಿಗೂಡಿಸುವ ಮತ್ತೊಂದು ದ್ವನಿ ಕೇಳುತ್ತಿಲ್ಲ ಹಾಗಾಗಿ ನನ್ನ ಸಣ್ಣ ದ್ವನಿ ಬೀಳಬೇಕಾದವರ ಕಿವಿಗೆ ಕೇಳಲೇ ಇಲ್ಲ ಎನ್ನುವಲ್ಲಿ ಆ ಅಸಹಾಯಕತೆಯ ಹತಾಶೆಯ ಭಾವ ಓದುಗನ ಕಣ್ಣೀರಲ್ಲಿ ನೀರು ತರಿಸಿ, ಸಾಮಾಜಿಕ ಪ್ರಜ್ಞೆ ಮೂಡಿಸಿದರೂ ತಪ್ಪಿಲ್ಲ. ಹೌದು ನಾವು ನಮ್ಮ ಸ್ವಾರ್ಥಗಳನ್ನೆಲ್ಲ ಒಮ್ಮೆ ಪಕ್ಕಕ್ಕಿಟ್ಟು ದ್ವನಿ ಎತ್ತುವ ಧೈರ್ಯವಂತರಿಗೆ ನಮ್ಮ ಧ್ವನಿಯ ಹೆಗಲು ಕೊಡಬೇಕು. ಇಲ್ಲದಿದ್ದರೆ ಇಂತ ಪಾಪಕೃತ್ಯ ಎಸಗಿದ ಪಾಪಿಗಳ ಪಾಪಕ್ಕೆ ಪರೋಕ್ಷವಾಗಿ ನಾವು ಬೆಂಬಲ ನೀಡಿದಂತೆಯೇ ಸರಿ. ಗೆಳೆಯರೇ ಅಲ್ಪ ಸುಖಗಳಿಗಾಗಿ ದ್ವನಿ ಎತ್ತುನ ನಾವುಗಳು ಇನ್ಮುಂದಾದರೂ ಮಾನವೀಯತೆ ಮೆರೆಯೋಣ. ಇಂತ ಹೀನ ಕೃತ್ಯಗಳ ವಿರುದ್ದ ದ್ವನಿ ಎತ್ತೋಣ. ಹಾಗೂ ಹೀನ ಕೃತ್ಯಗಳು ನಡೆಯದಂತೆ ಎಚ್ಚರವಹಿಸೋಣ.
ದೀಕ್ಷಿತ್ ನಿಮ್ಮಂತರಾಳದ ನೋವು ಹತಾಶೆ ಇಲ್ಲಿ ಚಾಟಿ ಏಟಿನಂತಿದ್ದು, ಪ್ರತಿಯೊಬ್ಬ ಓದುಗನಲ್ಲಿ ಸ್ವಅಪರಾದದ ಪ್ರಜ್ಜೆ ಮೂಡಿಸಿ ಮನಪರಿವರ್ತನೆಗೆ ದಾರಿದೀಪವಾಗುವಂತಿದೆ. ನಿಮ್ಮಿಂದ ಇಂತಹ ಅನೇಕಾನೇಕ ಸಾವಾಜಿಕ ಜಾಗೃತಿಯ ಸಾಲುಗಳು ಹೊರಹೊಮ್ಮಲಿ, ಶುಭವಾಗಲಿ
ಇಂತೀ,
ನಿಮ್ಮ ಆತ್ಮೀಯ
ಶಂಭುಗೌಡ. ಆರ್. ಜಿ