ವಿಷಯಕ್ಕೆ ಹೋಗಿ

ಲೆಕ್ಕಾಚಾರ (ಅಂಕಣ) - ನಾನು ನಾನಲ್ಲ, ನಾನಾರೆಂಬುದು ಗೊತ್ತಿಲ್ಲ! - ಅನಂತ ಕುಣಿಗಲ್


" ನಾನು ನಾನಲ್ಲ, ನಾನಾರೆಂಬುದು ಗೊತ್ತಿಲ್ಲ "

     ನಾವು ಯಾರನ್ನೋ ಹುಡುಕುತ್ತಿರುತ್ತೇವೆ. ಅವರು ಬೇಗ ಸಿಗುವುದಿಲ್ಲ. ಸಿಕ್ಕರೂ ಹೆಚ್ಚು ಕಾಲ ನಮ್ಮೊಂದಿಗೆ ಉಳಿಯುವುದಿಲ್ಲ. ಕಾರಣ, ಬೇರೆಯವರಲ್ಲಿ ನಾವು ನಮ್ಮನ್ನೇ ಹುಡುಕುತ್ತಿರುತ್ತೇವೆ. ಅರ್ಥಾತ್ ನಮ್ಮಲ್ಲಿರುವ ಕೆಲವು ಗುಣಗಳಾದರೂ ಇನ್ನೊಬ್ಬರಲ್ಲಿ ಇರದಿದ್ದರೆ, ಖಂಡಿತ ಅವರು ನಮಗೆ ಇಷ್ಟವಾಗುವುದಿಲ್ಲ. ಅನ್ಯ ಕಾರಣಕ್ಕೆ ಇಷ್ಟವಾದರೂ ಹೆಚ್ಚು ದಿನ ಉಳಿಯೋದಿಲ್ಲ. ಈ ಹುಡುಕಾಟದಲ್ಲಿ ನಾವು ನಮ್ಮನ್ನೇ ಹುಡುಕುತ್ತಿದ್ದೇವೆ ಎಂಬುದನ್ನು ನಾವೇ ಮರೆತ್ತಿದ್ದೇವೆ ಎಂದು ನಮ್ಮ ಅರಿವಿಗೆ ಬರುವುದೇ ಇಲ್ಲ.

ಅಯ್ಯೋ.. ಇದೆಂಥಾ ಹುಡುಕಾಟ??
ಹೀಗೊಂದು ಹುಡುಕಾಟವುಂಟೆ??
ಹೌದು, ಉಂಟು!
ಮನುಷ್ಯ ತಾನು ಸಂಘಜೀವಿಯಾಗಿ, ಏಕಾಂತವನ್ನು ಇಷ್ಟಪಡುವುದರಲ್ಲಿ ಆಶ್ಚರ್ಯವೇನಿಲ್ಲ. ಆ ಏಕಾಂತದಲ್ಲೂ ಕೂಡ ತಾನು ಯಾವುದಕ್ಕಾದರೂ ಹುಡುಕಾಡುತ್ತಿರುತ್ತಾನೆ. ತಾನು ಸಾಯುವವರೆಗೂ, ಬಹುಶಃ ಸತ್ತಮೇಲೂ ಆತ ಏನನ್ನು ಹುಡುಕುತ್ತಿದ್ದ ಎಂದು ಯಾರಿಗೂ ಗೊತ್ತಾಗುವುದೇ ಇಲ್ಲ. ಅದಕ್ಕಾಗಿಯೇ ಆ ಹುಡುಕಾಟ ಮನುಷ್ಯನ ಜೀವನದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎನಿಸುತ್ತದೆ.
ಮನುಷ್ಯ ಯಾವಾಗ ಹುಡುಕಲು ಫ್ರಾರಂಭಿಸುತ್ತಾನೆಂದರೆ, ತಾನು ಏನನ್ನಾದರೂ ಕಳೆದುಕೊಂಡಾಗ. ತಾನು ಯಾವಾಗ ಕಳೆದುಕೊಳ್ಳುತ್ತಾನೆಂದರೆ, ಆತ ಏನನ್ನಾದರೂ ಸಂಪಾದಿಸಿದ್ದಾಗ. ಈ ಸಂಪಾದನೆ ಎಲ್ಲಿಂದ ಬಂದಿತೆಂದರೆ, ಹೊಂದಾಣಿಕೆಯಿಂದ. ಈ ಹೊಂದಣಿಕೆಯನ್ನು ಹೇಗೆ ಕಲಿತನೆಂದರೆ, ಮನುಷ್ಯತ್ವ ಇರುವುದರಿಂದ. ಈ ಮನುಷ್ಯತ್ವ ಎಲ್ಲಿಂದ ಬಂದಿತೆಂದರೆ, ಆತ ಮನುಷ್ಯನಾಗಿರುವುದರಿಂದ. ಹೀಗೆ ಪಡೆದು, ಕಳೆದುಕೊಂಡು ಮತ್ತೆ ಹುಡುಕುವ ಸೋಜಿಗವಿದೆಯಲ್ಲಾ ಅದೇ ನಾನು ಎಂಬುವವನ ವಿಶೇಷತೆ. ಮತ್ತೆ ನಾನ್ಯಾರಿಗೆ ಹುಡುಕುತ್ತಿದ್ದೇನೆಂದರೆ, ನನಗಾಗಿಯೇ!.

ಬಹಳ ಗೊಂದಲಮಯ ಈ ನಾನು-ನೀನು ಎಂಬ ಸೀಳು ಮನೋಭಾವಗಳು. ನಾನೆಂದರೆ ನನ್ನ ಸ್ವಯೇಚ್ಚೆಯಿಂದ ರಚಿತವಾದ ಆತ್ಮ ಪರಿಧಿಯೊಳಗೆ ಬಂಧಿತನಾದವನು. ನೀನು ಎಂದರೆ ನನ್ನನ್ನು ಹೊರತುಪಡಿಸಿ ಮಿಕ್ಕುಳಿದೆಲ್ಲ. ಇಲ್ಲಿ ನಾನು ಎಂಬುದು ಎಷ್ಟು ಚಿಕ್ಕದಲ್ಲವೇ?? ನೀನು ಎಂಬ ದೊಡ್ಡ ಪ್ರಪಂಚದೊಳಗೆ ನಾನು, ನನ್ನನ್ನು ಹುಡುಕುವುದರಲ್ಲಿ ಅರ್ಥವಿದೆಯೇ?. ಆದರೂ ಕಳೆದುಕೊಂಡಾಗ ಹುಡುಕುವುದು ಮನುಜನ ಸಹಜ ಗುಣವಲ್ಲವೇ?. ನನ್ನಲ್ಲಿನ ನಾನು ಎಂಬುದರ ಅರ್ಥ ಕಳೆದುಕೊಂಡಾಗ, ಅದು ಯಾರ ಪಾಲಾದೀತೋ ಎಂಬ ಭಯದಲ್ಲೇ ನಮ್ಮನ್ನು ನಾವು ಹುಡುಕುತ್ತಿರುತ್ತೇವೆ. ಯಾಕೆಂದರೆ ನಾನು ಯಾವಾಗಲೂ ನಾನಾಗಿಯೇ ಇರಲು ಬಯಸುತ್ತಿರುತ್ತದೆ. ಇನ್ನೊಬ್ಬರೆಂದರೆ ಹುಳಿಯ ರುಚಿ ಸವಿದಾಗ ಮುಖ ಕಿವುಚಿದಂತಾ ಅನುಭವ ಅದಕ್ಕೆ. ನಂತರ ಸಹಿಸುವಿಕೆಯೂ ಕಡಿಮೆ. ಹಾಗಾಗಿ ಬಹುಬೇಗ ನೀನು ಎಂಬುವವನು ನಾನು ಎಂಬುವವನಿಂದ ಆದಷ್ಟು ಬೇಗ ದೂರವಾಗಿಬಿಡುತ್ತಾನೆ.

ಹೀಗೆ ಈ ನಾನು-ನೀನು ಎಂಬ ಸಂಬಂಧಗಳ ಬಗ್ಗೆ ಯಾವ ಪ್ರಶ್ನೆಗಳೂ ಹೆಚ್ಚು ಕಾಲ ನಿಲ್ಲುವುದಿಲ್ಲ. ಹಾಗೇಯೇ ಸಿಕ್ಕ ಉತ್ತರಗಳೂ ಕೂಡ ತೃಪ್ತಿ ತರುವುದಿಲ್ಲ. ಈ ಸಂಬಂಧಿತ ಪ್ರಶ್ನೋತ್ತರಗಳು ಸದಾಕಾಲ ಹುಟುತ್ತಲೇ ಇರುತ್ತವೆ. ಹುಟ್ಟಿದ ನಂತರ ತಲೆಭಾರದಿಂದ ಸತ್ತ ಹಾಗೆ ನಟಿಸಿ, ಮತ್ತೆ ತಮ್ಮನ್ನು ತಾವು ಹುಡುಕಿಕೂಳ್ಳುತ್ತಿರುತ್ತವೆ. ಇದು ಮನುಷ್ಯನ ಜೀವನದ ಅಗಣಿತ ಪ್ರಕ್ರಿಯೆ. ಇಲ್ಲಿ ಯಾರೂ ಕೂಡ ಬೇರೆ ಯಾರೋ ಆಗಲು ಎಳ್ಳಷ್ಟೂ ಇಷ್ಟಪಡುವುದಿಲ್ಲ. ಕಾರಣ ತಮ್ಮ ಮೇಲಿರುವ ನಂಬಿಕೆ ಬೇರೆ ಯಾರ ಮೇಲೂ ಇರುವುದಿಲ್ಲ. ಕೆಲವೊಮ್ಮೆ ಯಾರೂ ಕೂಡ ಆ ನಂಬಿಕೆಯನ್ನು ಉಳಿಸಿಕೊಳ್ಳುವುದಿಲ್ಲ. ಆದ್ದರಿಂದ ಯಾರೂ ಕೂಡ ಯಾರ ಬಗ್ಗೆಯೂ ಆಸಕ್ತಿವಹಿಸುವುದಿಲ್ಲ. ಆಸಕ್ತಿವಹಿಸುತ್ತಿದ್ದಾರೆ ಎಂದು ಕಂಡುಬಂದರೆ, ನಾನು ಎಂಬುವವನು ನೀನು ಎಂಬುದರೊಳಗೆ ಲೀನವಾಗಲು ಹಾತೊರೆಯುತ್ತಿರುತ್ತಾನೆ. ಮತ್ತು ಅಸಹಾಯಕನೂ ಆಗಿರುತ್ತಾನೆ. ಆಗ ಮತ್ತೇನನ್ನೋ ಹುಡುಕುತ್ತಿರುತ್ತಾನೆ. ಕಬ್ಬಿಣವನ್ನು ಕಾವಿನಲ್ಲೇ ತಟ್ಟಬೇಕು ಎಂಬಂತೆ, ನಾನು-ನೀನುಗಳ ಸಮಾಗಮಕ್ಕೆ ಸರಿಯಾದ ಮುಹೂರ್ತವೂ ಕೂಡಿಬರಬೇಕು. ಇಲ್ಲದಿದ್ದರೆ ಆ ಸಂಬಂಧ ಹಳಸಿದ ಅನ್ನದಂತೆ. ಆ ಸಮಯ ಬಂದಾಗ ಹೊಂದಾಣಿಕೆಯಾಗಿಬಿಡಬೇಕು. ಇನ್ನೆಂದೂ ಇಬ್ಬರಲ್ಲಿ ನಾನು ಎಂಬುವವನು ಹುಟ್ಟದಿರುವಂತೆ ನೋಡಿಕೊಳ್ಳಬೇಕು. ಈ ಅನುಸಂಧಾನದಿಂದ ನೀನು ಜಯಿಸಬಹುದು. ಆದರೆ ಸಾಯುವಾಗ ತಾನಾಗಿಯೇ ಸಾಯುವುದು. ಅಲ್ಲಿಗೆ ಯಾರು ಗೆದ್ದರು ಎಂದು ನಿರ್ಧರಿಸುವುದು ಕಷ್ಟ.

ಇವುಗಳಿಂದ ಏನು ಸಾಧಿಸಬಹುದು?
ಸಾಧಿಸುವುದೇನಿದೆ? ಸಾಗಿಸಬಹುದು ಅಚ್ಚುಕಟ್ಟಾದ ಜೀವನವೊಂದನ್ನು.
ನಾನೆಂಬುದು ಯಾಕೆ ಯಾವಾಗಲೂ ಮೇಲು?
ನನ್ನೊಳಗಿರುತ್ತಾನಲ್ಲ ಅದಕ್ಕೆ. ನೀನೂ ಕೂಡ!
ಇವುಗಳ ಅಂತ್ಯ?
ಯಾವುದಕ್ಕೆ ಅಂತ್ಯವಿದೆ? ಇಲ್ಲೇ ಹುಟ್ಟು, ಇಲ್ಲೇ ಮುರುಹುಟ್ಟು.
ಇವುಗಳಿಗೆ ಅರ್ಥವುಂಟೆ?
ನೀನಿರುವುದು ಸತ್ಯವಾದರೆ, ಅವುಗಳಿಗೂ ಅರ್ಥವುಂಟು!.
ಏನಿವುಗಳ ಅರ್ಥ?
ಯಾರು ಹೇಳಿದ್ದನ್ನು ಹೇಳಲಿ?
ಅಷ್ಟೊಂದು ವಿಶಾಲವೇ?
ಮನದ ವಿಸೃತಿಗೆ ದಡವೂ ಇಲ್ಲ. ಇನ್ನು ಅಂತ್ಯವುಂಟೆ?
ಅರ್ಥೈಸಿಕೊಳ್ಳುವುದು ಹೇಗೆ?
ಅವರವರ ಭಾವಕ್ಕೆ
ಕೊನೆಯ ಮಾತು?
ನಾನು ನಾನೇ.. ಮತ್ತೆ ಸಿಗುತ್ತೇನೆ.
ಶುಭವಾಗಲಿ 💐

ನನ್ನಿಂದ ನಾನೇ ಶುಭಕೋರಿ ಹೋದಮೇಲೆ ನನ್ನ ಬಗ್ಗೆ ಹೇಳಿಕೊಳ್ಳುವುದೇನಿದೆ?
ಈ ಅಮೂರ್ತ ರೂಪಗಳ ಸಂಭಾಷಣೆಗಳು, ವ್ಯಾಖ್ಯಾನಗಳು, ಹುಟ್ಟು-ಸಾವು ಎಂಬ ಸಂಬಂಧಾರ್ಥಗಳು ಎಂದಿಗೂ ಮುಕ್ತಿಪಡೆಯಲಾರವು. ನಾನು-ನೀನು ಈಗ ಅದೇ ಮಾರ್ಗದಲ್ಲಿದ್ದೇವೆ.
ಎಲ್ಲರಂತೆ ನಾನೂ ಒಬ್ಬ ಕಲಾವಿದ. ಕುಣಿಯುತ್ತಿದ್ದೆ, ಈಗ ಕುಣಿಸುತ್ತೇನೆ. ಮೊದಲು ಬರೀ ಓದುತ್ತಿದ್ದೆ, ಈಗ ಬರೆಯುತ್ತೇನೆ ಕೂಡ. ಹುಟ್ಟು ಬಡತನದಲ್ಲಿ, ಮರುಹುಟ್ಟು ಪುಸ್ತಕದಿಂದ. ಸಾಕಿಸಲುಹಿದವರು ಎಷ್ಟೋ ಜನ. ಸಧ್ಯ ಬದುಕಿದ್ದೇನೆ. ಏನನ್ನಾದರೂ ಸಾಧಿಸುವ ಉತ್ಸಾಹ, ಹಂಬಲದೊಂದಿಗೆ ನನ್ನನ್ನು ನಾನೇ ಹುಡುಕುತ್ತಿದ್ದೇನೆ. ಯಾಕೆ, ಯಾವಾಗ, ಏನನ್ನು ಕಳೆದುಕೊಂಡೆ ಎಂಬ ಕಾರಣ ಮಾತ್ರ ಇದುವರೆಗೂ ಸಿಕ್ಕಿಲ್ಲ. ಇದಕ್ಕಿಂತ ಹೆಚ್ಚು ಇನ್ನೇನಿದೆ. ಹಲವರು ಗುರುತಿಸಿದ್ದಾರೆ. ಕೆಲವರಿಂದ ಜಯಿಸಿದ್ದೇನೆ. ನನಗೆ ಎಲ್ಲರೂ ಇದ್ದರು. ಈಗ ಯಾರೋ ಒಬ್ಬರು ಇಲ್ಲ ಅಂತ ಆಗಾಗ ಅನಿಸುತ್ತಿರುತ್ತದೆ. ಒಂದು ರಾತ್ರಿ ಕಳಿಯುವ ಹೊತ್ತಿಗೆ ಯಾರಿಲ್ಲ ಎಂಬುದು ಮರೆತುಹೋಗಿರುತ್ತದೆ. ಪ್ರತೀ ಕ್ಷಣಕ್ಕೂ ಮರುಹುಟ್ಟು ಪಡೆಯುತ್ತಲೇ ಇರುತ್ತೇನೆ. ಹಾಗಾಗಿ ನನ್ನ ಬಗ್ಗೆ ಯಾವುದು? ಏನು? ಎಷ್ಟು? ಹೇಳಬೇಕೆಂಬುದು ನನಗೆ ನೀಜವಾಗಿಯೂ ತಿಳಿದಿಲ್ಲ. ಆದರೂ ಈವರೆಗೆ ನಾನು ಕಂಡುಕೊಂಡಿರುವ ಒಂದು ಸತ್ಯವೇನೆಂದರೆ.. ನಾನೂ ಕೂಡ ಆಗಾಗ ಮನುಷ್ಯನಾಗುತ್ತಿರುತ್ತೇನೆ.

ನಿಮಗೂ ಒಂದು ಪರಿಚಯವಿರುತ್ತದೆ. ಅದನ್ನು ಬೇಗ ಹುಡುಕಿಕೊಳ್ಳಿ. ಅಲ್ಲಿ ಕಳೆದುಕೊಂಡಿರುವುದರ ಬಗ್ಗೆ ಸುಳಿವು ಸಿಗಬಹುದು. ಆ ಸುಳಿವಿನೊಂದಿಗೆ ಹುಡುಕಾಟ ಮಾಡಲು ಬೇಕಾದ ಸಾಮರ್ಥ್ಯ ಇದೆಯೇ ಎಂದು ಮತ್ತೂ ಹುಡುಕಾಡಿ. ಎಲ್ಲವೂ ಸರಿ ಇದೆ ಎನಿಸಿದರೆ ಸಾವನ್ನೂ ಹುಡುಕಾಡಿ. ಅದೊಂದು ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟರೆ ಮುಂದಿನ ಯಾವ ಹುಡುಕಾಟಗಳು ಅಷ್ಟು ಕಷ್ಟ ಎನಿಸುವುದಿಲ್ಲ.

ನಾನು ನಾನಲ್ಲ, ಬೇರೆ ಯಾರೋ ನನ್ನಲ್ಲಿ ಅವರನ್ನು ಹುಡುಕುತ್ತಿರಲು ಬಳಸಿಕೊಳ್ಳುತ್ತಿರುವ ಜೀವಂತ ವಸ್ತು ನಾನು!


                                ಜೈ
                     ಅನಂತ ಕುಣಿಗಲ್

ಕಾಮೆಂಟ್‌ಗಳು

  1. ಈ ನಾನು-ನೀನುಗಳ ಹುಡುಕಾಟ ಇಂದು ನಿನ್ನೆಯದಲ್ಲ. ಎಂಟನೇ ಶತಮಾನದಲ್ಲಿ ದ್ವೈತ, ಅದ್ವೈತ, ವಿಶಿಷ್ಟದ್ವೈತ ಸಿದ್ಧಾಂತಗಳು ಮಾಡಲು ಯತ್ನಿಸಿದ್ದು ಇದನ್ನೇ.
    ಕಳೆದುಕೊಂಡದ್ದಷ್ಟೆ ಅಂದ್ರೆ, ಸಂಪಾದಿಸಿದಷ್ಟೆ ಹುಡುಕುವಷ್ಟು ಶ್ರೇಮಂತನಾ ಮನುಷ್ಯ! ಹುಡುಕಾಟವೆಂಬ ಆಟದ ಮರ್ಮವೆ ಬೇರೆ. ಕಂಡ-ಕಂಡ ಹಸಿವಿನ ಹುಡುಕಾಟ, ಕಾಣದ ಮಾಯೆಯ ಹುಡುಕಾಟ, ಕಪೋ ಕಲ್ಪಿತ ಕಲ್ಪನೆಗಳ ಬೆನ್ನು ಹಿಡಿವ ಹುಡುಕಾಟ, ಇಲ್ಲದಿರುವುದನ್ನು ಇದೇ ಎಂದು ತೋರಲು ಹುಡುಕಾಟ...ಇದಕ್ಕೆ ಕಾರಣ ಮನುಷ್ಯತ್ವ ಅಲ್ಲ!
    'ಮಂಗನಿಂದ ಮಾನವ' ಎಂಬಂತೆ ಮನಸ್ಸಿನ ಮನೋಚಾಂಚಲ್ಯ ಸುಮ್ಮನೆ ಇದ್ದರೂ, ಸುಮ್ಮನೆ ಕೂರಲು ಬಿಡದು. ಹಿಂದಿಗೂ...ಇಂದಿಗೂ! ಇಂದು ಮನುಷ್ಯನ ಸೃಷ್ಟಿ ಗುಣ.
    ಮನೋಚಾಂಚಲ್ಯಗಳ ಮೀರಿದ ಹುಡುಕಾಟದ ಪತ್ತೆದಾರಿ ನಿಮ್ಮದಾಗಲಿ.

    ಪ್ರತ್ಯುತ್ತರಅಳಿಸಿ
  2. ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ 👏👏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...