2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ
ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ಕಳೆದ ಎರಡು ವರ್ಷಗಳಿಂದ ದಿ. ಶ್ರೀಮಾನ್ ನರಸಯ್ಯ ಅವರ ಸ್ಮರಣಾರ್ಥ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ, ಆಯ್ಕೆಯಾದ ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಪ್ರಶಸ್ತಿಗೆ ಸುಮಾರು 80ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ನಿರ್ಣಾಯಕರ ಆಯ್ಕೆಯಂತೆ ಸೃಜನಶೀಲವೆನಿಸುವ 15 ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 15 ಕೃತಿಗಳಲ್ಲಿ ಸೃಜನಶೀಲವೆನಿಸುವ ಆರು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ರೇವಾ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸೃಜನಶೀಲವೆನಿಸುವ ಒಂದು ಕೃತಿಗೆ 2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು, ಅದರ ನಂತರದ ಐದು ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಮೆಚ್ಚುಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಕೆ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಶಸ್ತಿಗೆ ಹಾಗೂ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾದ ಕೃತಿಗಳ ಹೆಸರು ಮತ್ತು ಲೇಖಕರ ಹೆಸರನ್ನು ಈ ಕೆಳಗೆ ನೀಡಲಾಗಿದೆ.
2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯ ವಿಜೇತ ಕೃತಿ ಶಶಿಧರ ಹಾಲಾಡಿಯವರ "ಚಿತ್ತ ಹರಿದತ್ತ"
ಅವ್ವ ಸೃಜನಶೀಲ ಸಾಹಿತ್ಯ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾದ ಕೃತಿಗಳು :
* ಆಮ್ರಪಾಲಿ - ಗಾಯತ್ರಿ ರಾಜ್
* ಉತ್ತರಾರ್ಧ - ಜಯಶ್ರೀ ದೇಶಪಾಂಡೆ
* ಎಲವೋ ವಿಭೀಷಣ - ಪ್ರದೀಪ್ ಬೇಲೂರು
* ನಕ್ಷತ್ರಗಳ ಸುಟ್ಟ ನಾಡಿನಲ್ಲಿ - ಭಾರತಿ ಬಿವಿ
* ಫೀನಿಕ್ಸ್ - ಅರುಣ್ ಕಿಲ್ಲೂರು
ಆಯ್ಕೆಯಾದ ಎಲ್ಲ ಲೇಖಕರಿಗೂ ಅಭಿನಂದನೆಗಳು.
- ಅವ್ವ ಪುಸ್ತಕಲಯ
ಪ್ರಶಸ್ತಿ ವಿಜೇತ ಕೃತಿಯ ಬಗ್ಗೆ ತೀರ್ಪುಗಾರರ ಟಿಪ್ಪಣಿ :
ಶ್ರೀ ಶಶಿಧರ ಹಾಲಾಡಿಯವರ "ಚಿತ್ತ ಹರಿದತ್ತ" ಕೃತಿಯ ಪ್ರತಿಯೊಂದು ಅಂಕಣ ಬರಹಗಳು ಆಸಕ್ತಿದಾಯಕ ಹಾಗೂ ಮಾಹಿತಿಯುತವಾಗಿವೆ. ಪ್ರತಿಯೊಂದು ಶೀರ್ಷಿಕೆಗಳು ಕುತೂಹಲಕಾರಿಯಾಗಿದ್ದು, ವೈವಿಧ್ಯಮಯ ವಿಷಯಗಳನ್ನೊಳಗೊಂಡಿವೆ.
ಮೈಕೆಲೇಂಜಲೋ, ಇಟಲಿಯ ಕಲಾವಿದ, ಮಲ್ಲಿತಮ್ಮ ಮತ್ತು ದಾಸೋಜ ಅಂಕಣಗಳಲ್ಲಿ ಐತಿಹಾಸಿಕ ಶಿಲ್ಪಗಳ ಪರಿಚಯ ಮತ್ತು ಹೊಯ್ಸಳರ ಶಿಲ್ಪಕಲೆಗಳ ನಿರೂಪಣೆ ಮೈನವಿರೇಳಿಸುತ್ತವೆ. ಯಾಣ ಅಂಕಣದಲ್ಲಿ ಪ್ರಕೃತಿಯ ಸೌಂದರ್ಯವನ್ನು ಆರಾಧಿಸುತ್ತಲೇ ಮಾಲಿನ್ಯ ಬಗೆಗಿನ ಕಾಳಜಿಯನ್ನು ಜವಾದ್ದಾರಿಯುತ ನಾಗರಿಕನಾಗಿ ಅಭಿವ್ಯಕ್ತಿಸಿದ್ದಾರೆ. ಹಾಗೆಯೇ ಸ್ವತಂತ್ರ ಪೂರ್ವ ಘಟನಾವಳಿಗಳು, ರಾಜಕೀಯ ಚಿತ್ರಣಗಳು, ನೊಬೆಲ್ ಪ್ರಶಸ್ತಿ ನೀಡುವಲ್ಲಿ ನಡೆದ ಹೊಣಗೇಡಿತನ, ಹಾಗು ಪ್ರಸ್ತುತ ಸಮಸ್ಯೆಗಳನ್ನು ಬಹಳ ಸೂಕ್ಷ್ಮವಾಗಿ ವಿಶ್ಲೇಷಿಸಿ, ಅಪಾರವಾದ ಸೃಜನಶೀಲತೆಯಿಂದ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ.
- ಡಾ. ನೇತ್ರಾವತಿ ಹರಿಪ್ರಸಾದ್
ಅವ್ವ ಪುಸ್ತಕಾಲಯ ತಂಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಿಂಬಾಲಿಸಿ ಮತ್ತು ಬೆಂಬಲಿಸಿ. ಹೆಚ್ಚಿನ ಮಾಹಿತಿಗಾಗಿ ನಮಗೆ ಮೇಲ್ ಬರೆಯಿರಿ avvapustakaalaya@gmail.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ