ವಿಷಯಕ್ಕೆ ಹೋಗಿ

ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ - ಲೇಖನ - ಶ್ರೀನಾಥ್ ವಿ ಸಿ


ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ

ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ  ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ,  ಕೌತುಕದ  ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ  ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ.

ಚಂದ್ರ(ನಾಯಿ)ನೆಂಬ ಭಾವ ಜೀವಿಯ ಸುತ್ತ ಭಾವನೆಗಳನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಬಲ್ಲ ಮನುಜ ಪಾತ್ರಗಳ ಚಿತ್ರಣ ಸಹಜವಾಗಿವೆ. ಸಹಜವಾಗಿ ಮನುಷ್ಯರನ್ನು ಆಕ್ರಮಿಸುವ ಅರಿಷಡ್ವರ್ಗಗಳು ಪಾತ್ರಗಳಲ್ಲಿ ನೈಜವಾಗಿ  ತುಂಬಿದ್ದಾರೆ  ಕಾದಂಬರಿಕಾರರು. ಅವಾಸ್ತವಿಕತೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ಮತ್ತು ಒಪ್ಪಿಕೊಂಡಿರುವ ಈ ಸಮಾಜದಲ್ಲಿ ವಾಸ್ತವ ಜೀವನವನ್ನು ಬಿಚ್ಚಿಡಲು ಹೆಚ್ಚಿಗೆ ಯಾರೂ ಇಷ್ಟಪಡುವುದಿಲ್ಲ. ಅವರವರ ಹವ್ಯಾಸ, ಯೋಚನೆಗಳು, ವ್ಯಕ್ತಿತ್ವಗಳದೂ ಅದೇ ಕಥೆ. ಇರುವುದೊಂದು, ಮಾಡುವುದೊಂದು, ಹೇಳುವುದೊಂದು, ತೋರ್ಪಡಿಸಿಕೊಳ್ಳುವುದು ಮತ್ತೊಂದು.

ಬಾಬಣ್ಣನ  ಹೊಟ್ಟೆಪಾಡಿಗೊಂದು ಕೆಲಸ (ಕುಲುಮೆ) ಆತನ ವ್ಯಕ್ತಿತ್ವದ  ನೆಮ್ಮದಿಗೆ ಮತ್ತೊಂದು (ಬೇಟೆ).  ಎಲ್ಲರಿಗೂ ಕಾಣದ ವ್ಯಕ್ತಿತ್ವ ಎದುರಿಸಿದ ಅನಿರೀಕ್ಷಿತ ಘಟನೆಗಳು ತನ್ನ ಹಗಲು ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ನಿಭಾಯಿಸಲಿಕ್ಕೆ ಬಾಬಣ್ಣ  ಅವಿರತ ಹೋರಾಟ ಮಾಡುತ್ತಾನೆ. ಅದರಲ್ಲೂ ಅಸಮಾನತೆ,  ಮೌಢ್ಯ, ಜಾತಿವ್ಯವಸ್ಥೆ ಇತ್ಯಾದಿ ಸಮಾಜ ಕಂಟಕಗಳು ಬಹಳ ಆಳವಾಗಿ ಬೇರೂರಿದ್ದ ವಾತಾವರಣದಲ್ಲಿ, ತನ್ನ ಅಸಹಾಯಕತೆಯಿಂದ ಬಾಬಣ್ಣ ಬಹಳಷ್ಟು ಬಾರಿ ದೌರ್ಜನ್ಯಕ್ಕೆ ಒಳಪಡುತ್ತಾನೆ. ಎಲ್ಲರಲ್ಲಿಯೂ ಇರುವಂತೆ ಈತನಲ್ಲಿರುವ ಸಿಡಿದೇಳುವ ಮತ್ತು ಹೋರಾಡುವ ಕಿಚ್ಚು “ರೌದ್ರದ ಆವರಣ”ದ ಮುಖಾಂತರ ತನ್ನದೇ ರೀತಿಯಲ್ಲಿ ತಕ್ಕ ಪ್ರತ್ಯುತ್ತರ ಕೊಡುತ್ತಾನೆ.

ನನ್ನ ಪ್ರಕಾರ “ಕರಿಗುಡ್ಡ”ದ ಪಾತ್ರವೂ  ಕೂಡ ಬಹಳ ಮಹತ್ವವಾದದ್ದು ಕಾದಂಬರಿಯಲ್ಲಿ. ಸರಳವಾಗಿ ಸಾಗುತ್ತಿದ್ದ ಬಾಬಣ್ಣನ ಜೀವನದಲ್ಲಿ ಅನಿರೀಕ್ಷಿತವಾಗಿ ಬಿರುಗಾಳಿಯಂತ ತಿರುವುಗಳು ಎದ್ದದ್ದು  ಕರಿಗುಡ್ಡದಲ್ಲಿ. ಇವೇ ಮುಂದೆ ತನ್ನ ಜೀವನಕ್ಕೆ ಹೊಸ ಅರ್ಥ ಮತ್ತು ಸವಾಲುಗಳನ್ನು ಉಚಿತವಾಗಿ ಕೊಟ್ಟವು. ಆಕಸ್ಮಿಕ ಮತ್ತು ಆಕಸ್ಮಿಕವಲ್ಲದ ಘಟನೆಗಳಲ್ಲಿ ಬಲಿಪಶುವಾದದ್ದು ಅಸಹಾಯಕರಾದದ್ದು ಬಾಬಣ್ಣ ಮತ್ತು ಅಗಸ್ತ್ಯ. ಬಲಿತವರ ಪೊಳ್ಳು ತತ್ವಗಳಿಗೆ, ಆಚಾರಗಳಿಗೆ ಮತ್ತವರ  ಕಾಲ್ತುಳಿತಕ್ಕೆ ಒದ್ದಾಡುವ ನಿರ್ಗತಿಕರ ನಡುವೆ ಮಾನವೀಯತೆಯ ಸಹಾಯಕ್ಕೆ ಬರುವ  ಕೈಗಳು ಕೂಡ  ದಂಡ ಕಟ್ಟಲೇಬೇಕಾಗುತ್ತದೆ. ಇಲ್ಲಿ ಮೇಷ್ಟ್ರು ಇಂಥಹ ಕಾರ್ಯ ಸಿದ್ಧಿಗಾಗಿ ಪ್ರಯತ್ನಿಸಿ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಾರೆ. ದೇಹ ದೇಗುಲಗಳ ಸಂಬಂಧಗಳನ್ನು ನೇರವಾಗಿ  ಕಲ್ಮಶ ಕೆದಕದೇ ಪದಗಳನ್ನು ಜೋಪಾನವಾಗಿ ಜೋಡಿಸಿದ್ದಾರೆ ಅನಂತರವರು. ಪತಿ, ಪತ್ನಿ ಮತ್ತು ಮಕ್ಕಳ ಮುಖ್ಯ ಧರ್ಮ ಯಾವುದು ಎನ್ನುವ ಪ್ರೆಶ್ನೆಗೆ ರೌದ್ರವರಣಂ ಇಂದ ಒಪ್ಪಿಕೊಳ್ಳಬಹುದಾದ ಹೊಸ ಉತ್ತರ ಸಿಗುತ್ತದೆ ಓದುಗರಿಗೆ.  ಐನೋರ ಹೊಟ್ಟೆಯುರಿ ಮತ್ತು ತಿಕ್ಕಲುತನ!  ಅದಕ್ಕೆ ಬಾಬಣ್ಣನ ‘ಖಾರದಪುಡಿ ದ್ವೇಷ’ ಈತರಹದ ಅನೇಕ ಸನ್ನಿವೇಶಗಳು ಖಂಡಿತ ನಗು ತರಿಸುತ್ತವೆ ಓದುಗರ ಮುಖದಲ್ಲಿ.

ಕಾದಂಬರಿಯ ಪೂರ್ತಿಕಥೆಯ ನಾ ಹೇಳಲಾರೆ ಇಲ್ಲಿ. ಆದರೆ, ಒಂದಷ್ಟು ಸಾಲುಗಳನ್ನು ನಾ ಇಲ್ಲಿ ನೆನೆಯಲು ಇಚ್ಛಿಸುವೆ.
“ ಹೆಸರಲ್ಲೇನಿದೆ ಎಲ್ಲಾ ಇರೋದು ಮನಸಲ್ಲಿ.”  ಇದು ಸೈಕಾಕನ ಪಾತ್ರದ  ಅಭಿಪ್ರಾಯ.   ಮುಂದೆ ಹೊಗಳಿ ಹಿಂದೆ ತೆಗಳುವ ವ್ಯಕ್ತಿಗಳಿಗಿಂತಲೂ, ಮುಂದೆ ಗಡುಸಾಗಿ ಪ್ರೆಶ್ನಿಸಿ ಹಿಂದೆ ಗೌರವಿಸುವ ವ್ಯಕ್ತಿತ್ವಗಳು ಲೇಸು. ಜನ ನಮ್ಮನ್ನು ಏನೆಂದು ಕರೆಯುತ್ತಾರೆ, ಗುರುತಿಸಿದ್ದಾರೆ ಎನ್ನುವುದಕ್ಕಿಂತ ನಮ್ಮನ್ನು ಎಷ್ಟು ಗೌರವಿಸುತ್ತಾರೆ ಎನ್ನುವುದು ಬಹಳ ಮುಖ್ಯ.

“ಹೊಸ ವಸ್ತುಗಳನ್ನು ನಾವು ಅತಿಯಾಗಿ ಪ್ರೀತಿಸುತ್ತೇವೆ.” ಇದು ಎಲ್ಲರಿಗೂ ಗೊತ್ತಿರುವ ಸತ್ಯವಾದರೂ ಪದೇ ಪದೇ ಪುನರಾವರ್ತಿಸಿ ನೋವು ತಿನ್ನುತಲಿರುತ್ತೇವೆ. ಇದಕ್ಕೆ  ಸಾಕ್ಷಿ ಹಳೇ ವಸ್ತು/ವ್ಯಕ್ತಿಗಳ ಮೇಲಿನ ನಿರ್ಲಕ್ಷ್ಯ ಅಥವಾ ‘ಹೊಸತು’ಗೆ ಕೊಡುವ ಹೆಚ್ಚು ಮಹತ್ವ. ಇದು ಮನುಜನ ಸಹಜ ಸ್ವಭಾವ. ಆತರಂಗದಲ್ಲಿ ಪ್ರೀತಿ ಅಪರಿಮಿತವಾಗಿದ್ದರೂ ಬಹಿರಂಗದಲ್ಲಿ ಎಲ್ಲವೂ ಮಿತಿಯಲ್ಲಿರಬೇಕು. ಆಗಲೇ ಪಾತ್ರಗಳಿಗೆ ಸರಿಯಾದ ತೂಕ ಬರುತ್ತದೆ ಮತ್ತು ಅವುಗಳ ನಿಜವಾದ ಬೆಲೆ ಏನು? ಎಂದು ಮನದಟ್ಟಾಗುತ್ತದೆ.

“ಬದುಕು ಶೂನ್ಯಮಯ ಎನಿಸುವುದು ನಮಗೆ ತುಂಬಾ ಹತ್ತಿರವಾದ ಜೀವ ದೂರವಾದಾಗ.” 
ಜೊತೆಗಿದ್ದ ಜೀವಗಳು ದೂರವಾದ ಮೇಲೆ ಬಾಬಣ್ಣನ ಜೀವನ ಯಾಂತ್ರಿಕವಾಗಿ  ಸಾಗುತ್ತಿದ್ದ ಸಮಯದಲ್ಲಿ ಆತನಿಗೆ ಜೊತೆಯಾಗಿದ್ದು ‘ಚಂದ್ರ.’ ಆತನ ಎಲ್ಲ ಕಷ್ಟ-ಸುಖಗಳಲ್ಲಿ ಪಾಲುಗಾರನಾಗಿದ್ದ  ಮತ್ತು ಒಡೆಯನ ಒಂಟಿತನವನ್ನು ಹೋಗಲಾಡಿಸಿಬಿಟ್ಟ ಸ್ನೇಹದಿಂದ.  ಅಗಸ್ತ್ಯ ಬಾಬಣ್ಣನ ಪಾಲಾಗಿದ್ದು ಕೂಡ ಒಂದು ರೀತಿ ಚಂದ್ರನಿಂದಲೇ..! ಹೀಗಿರುವಾಗ ಚಂದ್ರನ ಸಾವು ಅಲ್ಲ ‘ಕೊಲೆ’ ಜೀರ್ಣಿಸಿಕೊಳ್ಳಲಾಗದಂತಹ ವಿಷಯವಾಗಿತ್ತು ಬಾಬಣ್ಣನಿಗೆ (ಓದುಗರಿಗೂ ಕೂಡ). ತುಂಬಾ ಹತ್ತಿರವಾಗಿದ್ದ ಜೀವವನ್ನು ಕಳೆದುಕೊಂಡ ಬಾಬಣ್ಣನಿಗೆ, ಬದುಕು ನಿರಾಶಾದಾಯಕವಾಗಿ, ಶೂನ್ಯಮಯವಾಗಿ ಕಂಡಿತು.  ಬಾಬಣ್ಣ ಕಣ್ಣೀರ ಹೊಳೆಹರಿಸಿ, ಮರಳಿ ಭೂಮಿತಾಯಿಯ ಮಡಿಲಿಗೆ ಸೇರಿಸಿದ ಚಂದ್ರನನ್ನು.
ಅದೇ ಭೂತಾಯವ್ವನ ಮಡಿಲಲಿ ಬಚ್ಚಿಟ್ಟಿದ್ದ ಬಂದೂಕನ್ನು ಹೊರತೆಗೆದು ಭಯಂಕರ ‘ರೌದ್ರಾವರಣ’ದಿಂದ ಕರಿಗುಡ್ಡದೆಡೆಗೆ ನಡೆದ.
ಮುಂದೇನು ?
ಹೊರಟಿದ್ದು ಮಗನಿಗಾಗೋ? ಚಂದ್ರನಿಗಾಗೋ? ಅಥವಾ ಸೇಡಿಗೋ?  ಗೊತ್ತಿಲ್ಲ!. ಅದಕ್ಕೆ ಉತ್ತರ “ರೌದ್ರವರಣಂ”-೨.
ಇದೊಂದು ಉತ್ತಮವಾದ ಕಾದಂಬರಿ. ಓದುಗರೆಲ್ಲರೂ ಕೊಂಡು ಆಸ್ವಾದಿಸಿ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಹೆಚ್ಚಿಗೆ ಏನೂ ಮಾಡಬೇಕಾಗಿಲ್ಲ  ಪುಸ್ತಕ ಓದಿ, ಬರಹಗಾರರಿಗೆ ನಮ್ಮ ಬೆಂಬಲ ಕೊಟ್ಟರೆ ಸಾಕು!

ಅನಂತನೆಂಬ ಗೆಳೆಯನಿಗೆ ಶುಭವಾಗಲಿ
ಪುಸ್ತಕ ಕೊಳ್ಳಲು ಸಂಪರ್ಕಿಸಿ : 8548948660

- ಶ್ರೀನಾಥ್ ವಿ ಸಿ
ಪ್ರಾಧ್ಯಾಪಕ & ಛಾಯಾಗ್ರಾಹಕ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...