ಆದಿ ಆಶಯ ಪದ್ಯ
ನಿಂತಿರುವೆ ನೆಲಕಂಟಿ ಮೋಹಗೊಂಡು
ಬದುಕಿಯೇ ತೀರುವ ಹಸಿವನುಂಡು
ಸ್ವೀಕರಿಸು ವಿಶ್ವವೇ
ಈ ಕೃತಜ್ಞತೆಗಳನು
ಈ ಭೂಮಿ ಈ ಬಾನು
ಬದುಕಿಸುವ ತಂಗಾಳಿ
ಈ ಬೆಳಕು ಸಿಹಿನೀರು ಹಸಿರಿಗಾಗಿ
ಹಕ್ಕಿಗಳ ಎದೆಗೊರಳ ಹಾಡಿಗಾಗಿ
ಒಡಹುಟ್ಟಿದವರ ಅಕ್ಕರೆಯ ಮಮತೆಗಾಗಿ
ಸ್ವೀಕರಿಸು ವಿಶ್ವವೇ ಪ್ರಾರ್ಥನೆಯ ಸೊಲ್ಲಹನಿ
ಈಡೇರು ತಪ್ಪದೆ ಬೇಡಿದ ಹಾಗೆಲ್ಲ
ನನ್ನೂರ ಮಕ್ಕಳಿಗೆ ಶಾಲೆ ಸಿಗಲಿ
ಹೃದಯದ ಧರ್ಮವದು ನೆತ್ತಿಗೇರದಿರಲಿ
ಮಧ್ಯಾಹ್ನದ ಹೊತ್ತಿಗೆ ಅನ್ನದ ಬುತ್ತಿಯನವರು ಹಂಚಿಕೊಳ್ಳುತ್ತಿರಲಿ
ಪ್ರೀತಿಯ ಸಂಕೇತವದು ರಕ್ತವರ್ಣವೇ ಇರಲಿ
ಕರುಳಿನ ಕೂಗು ಸದಾ ಕೇಳುತಿರಲಿ
ಹನಿಗಣ್ಣ ಭಾಷೆ ಗಡಿ ದಾಟುತಿರಲಿ
ದುಡಿವ ಕೈಗಳಿಗೆ ಸಂಜೆ ಕಾಸಾಗಲಿ
ತಿನ್ನುವ ಅನ್ನಕ್ಕೆ ಕುತ್ತು ಬಾರದಿರಲಿ
ಓ ಎನ್ನ ವಿಶ್ವವೇ
ಒಳಗಿರುವ ಶಕ್ತಿಯೇ
ರಾತ್ರಿಗೊಂಚೂರು ಕಣ್ಣಿಗೆ ನಿದ್ದೆ ನೀಡು
ಸಾಧ್ಯವಾದರೆ ಕನಸ ಲಾಲಿ ಹಾಡು
ದಾಟಿಸು ಊರು ದೇಶ ಕಾಲಗಳನು
ಸೃಷ್ಟಿಸು ಯುಗಗಳನು ಮತ್ತೆ ಮತ್ತೆ
ಹುಟ್ಟಿಸು ಬೆಳಗುಗಳ ಸಾಲು ಸಾಲು
ಮರೆಯದಿರು ಮೋಹದ ನನ್ನ ನೆನಪಲಿರಿಸು
ಹೆಜ್ಜೆ ಹೆಜ್ಜೆಗಳ ಆದಿ ಸುಲಭಗೊಳಿಸು
ಹೇ ದಿವ್ಯ ಶಕ್ತಿಯೇ
ನಿನ್ನ ನೆನಪನುಳಿಸು
~ ದಾದಾಪೀರ್ ಜೈಮನ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ