" ಗುರುತಿರದ ಸುಳಿಯಲ್ಲಿ ಪ್ರೇಮವನ್ನು ಧ್ಯಾನಿಸುವ ಕವಿತೆಗಳು "
ನನ್ನಮ್ಮನೇ ಆಗಿಹೋಗಿರುವ ಮಧುರಾಣಿ ಎಚ್ ಎಸ್ ಅವರ ಎರಡನೇ ಕವನ ಸಂಕಲನ 'ನೀಲಿ ಚುಕ್ಕಿಯ ನೆರಳು'. ಈ ಕೃತಿಯು ಆಯ್ದ ನಲವತ್ತು ಪದ್ಯಗಳ ಗುಚ್ಚ. ಇಲ್ಲಿನ ಹೆಚ್ಚು ಕವಿತೆಗಳು ಸ್ತ್ರೀಯ ಒಳಧ್ವನಿಯಿಂದ ರಚನವಾಗಿವೆ. ಕೃತಿಗೆ 'ಈ ಹೊತ್ತಿಗೆ ಮೊದಲ ಕಾವ್ಯ ಪ್ರಶಸ್ತಿ' ಸಿಕ್ಕಿರುವುದು ಮತ್ತೊಂದು ಶ್ಲಾಘನೀಯ ಸಂಗತಿ.
ನನ್ನಮ್ಮನೇ ಆಗಿಹೋಗಿರುವ ಮಧುರಾಣಿ ಎಚ್ ಎಸ್ ಅವರ ಎರಡನೇ ಕವನ ಸಂಕಲನ 'ನೀಲಿ ಚುಕ್ಕಿಯ ನೆರಳು'. ಈ ಕೃತಿಯು ಆಯ್ದ ನಲವತ್ತು ಪದ್ಯಗಳ ಗುಚ್ಚ. ಇಲ್ಲಿನ ಹೆಚ್ಚು ಕವಿತೆಗಳು ಸ್ತ್ರೀಯ ಒಳಧ್ವನಿಯಿಂದ ರಚನವಾಗಿವೆ. ಕೃತಿಗೆ 'ಈ ಹೊತ್ತಿಗೆ ಮೊದಲ ಕಾವ್ಯ ಪ್ರಶಸ್ತಿ' ಸಿಕ್ಕಿರುವುದು ಮತ್ತೊಂದು ಶ್ಲಾಘನೀಯ ಸಂಗತಿ.
ಸ್ತ್ರೀಸಂವೇದನೆಗಳನ್ನೊಳಗೊಂಡ ಕವಿತೆಗಳನ್ನು ನಾವು ಹಿಂದಿನಿಂದಲೂ ಓದುತ್ತಾ ಬಂದಿದ್ದೇವೆ. ಅಂತಹದೇ ಒಂದು ವಿಭಿನ್ನ ಪ್ರಯತ್ನ ಈ 'ನೀಲಿ ಚುಕ್ಕಿಯ ನೆರಳು'. ಪ್ರತೀ ಪದ್ಯಗಳು ವೈವಿಧ್ಯಮಯ ದೃಷ್ಟಿಕೋನದಿಂದ ಕೂಡಿದ್ದು, ಅವುಗಳ ಆಳದೊಳಗೆ ಬಿದ್ದವರು ಮೇಲೇಳುವುದು ಕೊಂಚ ಕಷ್ಟವೇ! ರಚ್ಚೆ ಹಿಡಿಸುವಷ್ಟು ಚಮತ್ಕಾರಿಕೆ ಇಲ್ಲಿನ ಸಾಲುಗಳಲ್ಲಿ ಅಡಕವಾಗಿವೆ. ಮತ್ತು ಅಷ್ಟೇ ಆರ್ದ್ರತೆಯಿಂದ ಕೂಡಿವೆ.
" ಕತ್ತಿಗಳು ಮೊಂಡುಬಿದ್ದು ನೆಲಕಚ್ಛಿದ ಇತಿಹಾಸವಿದೆ
ಹೂವುಗಳು ಅನವರತ ಹುಟ್ಟುತ್ತಲೇ ಇವೆ "
ಪ್ರಸ್ತುತ ಧೃತಿಕೆಟ್ಟ ಸಮಾಜಕ್ಕೆ ಇಂಥಾ ಧೈರ್ಯ ತುಂಬುವ ಸಾಲುಗಳು ಅತ್ಯಗತ್ಯ. ಶತಮಾನಗಳಿಂದ ಯುದ್ಧಗಳು ನಡೆದು, ರಕ್ತದ ಹೊಳೆ ಹರಿದ ಕುರುಹುಗಳು ಮಾಸಿದರೂ.. ಹೂವುಗಳು ಅರಳುವುದನ್ನು ನಿಲ್ಲಿಸಿಲ್ಲ. ಯುದ್ಧ ಏರ್ಪಡಲು ವೈಷಮ್ಯ ಬೇಕು. ಹೂವು ಅರಳಲು ಸೂರ್ಯನ ಕಿರಣಗಳ ಸ್ಪರ್ಶಪ್ರೀತಿ ಸಾಕು. ಬೆಳಕಿಗೆ ಹೇಗೆ ಆಳ, ಆಕಾರ, ಕೊನೆ ಇಲ್ಲವೋ.. ಪ್ರೀತಿಗೂ ಕೂಡ ಹಾಗೇ.. ಪ್ರೀತಿ ಒಂದು ಅದಮ್ಯ ಕಡಲು. ಅಲ್ಲಿ ಮುಳುಗಲೂಬಹುದು, ಜೀವಿಸಲೂಬಹುದು.
" ಸಿಟ್ಟು ಸೆಡವುಗಳನ್ನೆಲ್ಲಾ ಸಗಣಿ ಬಗ್ಗುಡ ಮಾಡಿ ಎರಚಿದಲ್ಲಿ ನೆಲವೆಲ್ಲಾ ಮಟ್ಟಸ.. "
ಸಂಬಂಧಗಳೊಳಗಿನ ಅಂಕುಡೊಂಕುಗಳನ್ನು ಮಟ್ಟಸ ಮಾಡಲು ನೀಲಿ ಚುಕ್ಕಿಯಂತ ಹಿಡಿ ಪ್ರೀತಿಯೇ ಆಯುಧ. ಅದು ಎಲ್ಲರಿಗೂ ಸಲ್ಲುತ್ತದೆ. ಉಳಿಸಿಕೊಳ್ಳುವ ಆಸ್ಥೆ ಇಲ್ಲದವರು ಬಡವರಾಗುತ್ತಾರೆ.
ಕವಿತೆಗಳ ಕಸುವಿನ ಗುಣಮಟ್ಟವನ್ನು ಎಷ್ಟೆಂದು ಹೇಳುವುದು? ಎಲ್ಲವನ್ನೂ ಹೇಳಿದರೆ ಓದುಗರಿಗೇನು ಬಿಟ್ಟೇನು?? ನಲವತ್ತು ಕವಿತೆಗಳು ಒಂದು ದಿನಕ್ಕೆ ಮುಗಿದವು. ಆದರೆ ಅವು ನನ್ನೊಳಗೆ ಸೃಷ್ಠಿಸಿರುವ ಸಂಚಲನ ಈ ಜನ್ಮಕ್ಕೆ ತೀರುವುದಿಲ್ಲ. ಇಷ್ಟನ್ನು ಮಾತ್ರ ಹೇಳಬಲ್ಲೆ.
ಎಲ್ಲರೂ ಓದಬಹುದಾದ ಕವಿತೆಗಳು ಇಲ್ಲಿ ಮಡುಗಟ್ಟಿ ನಿಮ್ಮ ಓದಿನ ಸ್ಪರ್ಶಕ್ಕಾಗಿಯೇ ಕಾದು ಕೂತಿವೆ. ಬೇಗ ಓದಿಕೊಂಡು ಕಣ್ಮುಚ್ಚಿ ಒಮ್ಮೆ ಧ್ಯಾನಿಸಿಬಿಡಿ. ಪರಿಶುದ್ಧ ಪ್ರೇಮದ ಅರಿವಾದೀತು. ಅಮ್ಮನ ಇನ್ನಷ್ಟು ಕವಿತೆಗಳನ್ನು ಓದುವ ತವಕದಲ್ಲಿ ನಾನಿದ್ದೇನೆ. ಓದಿ ಬರೆದರೆ ಸಾಲದೆಂದು ಒಂದು ಕವಿತೆಯನ್ನೂ ವಾಚಿಸಿದ್ದೇನೆ. ಅದನ್ನು ನೀವು ಇಲ್ಲಿ ಆಲಿಸಬಹುದು.
- ಅನಂತ ಕುಣಿಗಲ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ