ಬಿಡೆನಾ ನುಡಿಯ
ಚಂದನದ ನಾಡಲ್ಲಿ ಚಂದದಾ ಬೀಡಲ್ಲಿ
ಅಂದ ಕನ್ನಡ ನನ್ನ ಜಿಹ್ವೆಯಲ್ಲಿ
ಬಂಧವನು ಬಿಡೆನಾನು ಕನ್ನಡದ ನುಡಿಯಲ್ಲಿ
ಸಂದು ಹೋದರು ಜೀವ ಲೋಕವನ್ನು
ನಾಲಿಗೆಯ ಸೀಳಿದರೆ ಮೂಗಿನಲಿ ಕನ್ನಡವ
ಆಲಿಸುವ ತೆರನಾಡುವಂಥ ರತ್ನ
ಪಾಲಿಸಲೆ ಬೇಕಲ್ಲ ಹೊನ್ನು ಕನ್ನಡ ನುಡಿಯ
ಲಾಲಿ ಹಾಡಿನ ಹಾಗೆ ಹಾಡಿ ಚೆನ್ನು
ನನಗೆ ನನ್ನಯ ನಾಡು ತಾಯಿಗಿಂತಲು ಮಿಗಿಲು
ತನು ಮನದಿ ನಮಿಸುವೆನು ನಿತ್ಯ ನಾನು
ಕನಸು ಮನಸಲು ಎರಡು ಎಣಿಸದಿಹ ಭಾವವದು
ಎನಗಿಹುದು ಇದು ನಿಜಕು ಹಾಲು ಜೇನು
ತೊರೆಯೆ ಕನ್ನಡ ನಾಡ ಮೆರೆವೆ ಇಲ್ಲಿಯೆ ಎನುವ
ಹಿರಿಯ ಭಾವವ ತುಂಬಿ ಕೊಳ್ಳಬೇಕು
ನರಿಯಂತೆ ಕಪಟತನ ಹೊಂದಿ ನಾಡನು ಮರೆಯೆ
ತರವಲ್ಲ ಬದುಕಿನಲಿ ಇಂಥ ನೀತಿ
ಡಾ ಸುರೇಶ ನೆಗಳಗುಳಿ
ಮಂಗಳೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ