ಇತ್ತೀಚಿಗೆ
ಅಪ್ಪ ಕನಸಿನಲ್ಲಿ ಬರುವುದನ್ನು ಹೆಚ್ಚು ಮಾಡಿದ್ದಾನೆ
ಅದು ಶುಭ ಸೂಚನೆಯೋ..
ಅಥವಾ ಅಮಂಗಳಕರವೋ..
ಎಂದು ಯೋಚಿಸಲು ಕೂಡ ಬಿಡುವು ಕೊಡದೆ
ಸದಾ ಕಾಡುತ್ತಾನೆ
ಅದೊಂದು ದಿನ
ಬೆಳಗಿನ ಜಾವ ಏಳುವ ಮುನ್ನ
ಅಪ್ಪಾ ಕನಸಿಗೆ ಬಂದಿದ್ದ
ಮಾತನಾಡಿಸುವ ಗೋಜಲು ನನಗಿರಲಿಲ್ಲ
ಅಪ್ಪನ ಮುಖವೂ ಬಾಡಲಿಲ್ಲ
ಕನಸು ಮುಗಿಯಿತು
ಮತ್ತೊಂದು ದಿನ ಅಪ್ಪ ಬಂದ
ಅದೇ ಭಂಗಿ, ಅದೇ ಮುಖ
ನನ್ನದೂ ಅದೇ ಪ್ರತಿಕ್ರಿಯೆ
ಆಗಲೂ ಆತನಿಗೆ ಬೇಸರವಾದಂತೆ ಕಾಣಲಿಲ್ಲ
ಇದೇ ಪುನರಾವರ್ತಿಯಾಗಿ
ಒಂದಷ್ಟು ದಿನ ಕಳೆಯಿತು
ಅದೊಂದು ದಿನ ಅಪ್ಪ ಬಂದು ಹೋಗುವುದರಲ್ಲಿದ್ದ
ತಾಳ್ಮೆ ಕಳೆದುಕೊಂಡು ಅಪ್ಪನನ್ನು ತಡೆದೆ
'ಯಾಕೆ ದಿನವೂ ಏನೂ ಮಾತಾಡದೆ ಹೋಗ್ತಿ?'
ಎಂದು ಜೋರಿದೆ
ಅಪ್ಪ ಸ್ವಲ್ಪ ಬೆದರಿ, ದಾರಿ ಕಾಣದೆ ಬಾಯ್ಬಿಟ್ಟ
'ಒಮ್ಮೆ ನನ್ನ ಸಮಾಧಿಯ ಬಳಿ ಬಂದು ನೋಡು'
ಥಟ್ಟನೆ ಕಣ್ಬಿಟ್ಟೆ, ಅಪ್ಪ ಇರಲಿಲ್ಲ
ಸಮಾಧಿಯ ಬಳಿ ಬಂದೆ
ಇರುವೆಗಳು ಗೂಡು ಕಟ್ಟಿದ್ದವು
ಬತ್ತಿದ ದೀಪವಿತ್ತು, ನಾಲ್ಕು ಸಣ್ಣ ಕಲ್ಲುಗಳು
ಮತ್ತೇನು ವಿಶೇಷ ನನಗೆ ಕಾಣಲಿಲ್ಲ
ಕನಸಿನಲ್ಲಿ ತುಂಬಾ ಕಾದೆ
ಅಪ್ಪ ಬರಲೇ ಇಲ್ಲ
ಅದೊಂದು ದಿನ ಬಂದೇ ಬಿಟ್ಟ
ನಾನಾಗಲೇ ತಾಳ್ಮೆ ಕಳೆದುಕೊಂಡಿದ್ದೆ
'ನಿನ್ನ ಸಮಾಧಿಯೇನು ಮಹಲ್ ಅಲ್ಲಾ..'
ಎಂದು ಕಿರುಚಿದೆ
'ಅದನ್ನು ಕಟ್ಟಿಸಿದವರು ನೀವೇ..' ಎಂದ
'ನೀನು ಅಷ್ಟು ದೊಡ್ಡ ಮನುಷ್ಯನೂ ಅಲ್ಲಾ..' ಮತ್ತೆ ಚೀರಿದೆ
'ಅಲ್ಲಿರುವ ಇರುವೆ ಗೂಡುಗಳಿಗೆ ಗೊತ್ತು'
ಸಮಾಧಾನದಿಂದಲೇ ಉತ್ತರಿಸಿದ ಅಪ್ಪ
ಅವನ ನಗುವಲ್ಲಿ ಗೆಲುವಿತ್ತು
ನನ್ನ ನಾಲಿಗೆ ಹೊರಳಲಿಲ್ಲ..
ಅಪ್ಪ ಅದೃಶನಾದ
ಇರುವೆಗಳಿಗೆ ಬೆಲ್ಲ ಉಣಿಸಿದೆ
ಅಪ್ಪ ಕನಸಿನಲ್ಲಿ ಬರುವುದನ್ನು ಮರೆತೇಬಿಟ್ಟ!!
#ಅನಂತ ಕುಣಿಗಲ್
ಅಪ್ಪನ ನೆನಪು ನಿಮಗೂ ಹೀಗೆ ಕಾಡುತ್ತದೆ ಸರ್ ಐ ಮಿಸ್ ಮೈ ಅಪ್ಪ ಸೋ ಮಚ್ 😭😭😭😭😭 ನೋ ಕಾಮೆಂಟ್ಸ್ ಸರ್ 🙏🙏🙏🙏🙏🙏
ಪ್ರತ್ಯುತ್ತರಅಳಿಸಿ