ವಿಷಯಕ್ಕೆ ಹೋಗಿ

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು - ಲೇಖನ - ಪುನೀತ್ ಕುಮಾರ್


ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು

ಒಬ್ಬ ವ್ಯಕ್ತಿ ಒಂದು ಶಕ್ತಿಯಾಗಿ ಪರಿಣಮಿಸುವ ಪರಿ ಸದಾ ನನಗೆ ಬೆರಗು ಮೂಡಿಸುವಂಥದ್ದು. ನಮ್ಮ ನಡುವೆಯೇ ಹುಟ್ಟಿ, ನಮ್ಮಂತೆಯೇ ಬೆಳೆದು, ತಮ್ಮ ಬದುಕಿನ ಬಂಡಿಯನ್ನು ಏರಿ ಸಾಗುವ ಅವರು, ಯಾವುದೋ ಒಂದು ಸ್ತರದಲ್ಲಿ ಇದ್ದಕ್ಕಿದ್ದಂತೆ ಏಕೆ ವಿಶಿಷ್ಟವೆನಿಸುತ್ತಾರೆ? ಮಾನ್ಯರಾಗುತ್ತಾರೆ? ಮುಖ್ಯವಾಗುತ್ತಾರೆ? ಸಾಮಾನ್ಯರ ನಡುವೆ ಅಸಾಮಾನ್ಯರಾಗಿ ನಿಲ್ಲಲು ಕಾರಣವೇನು? ಉತ್ತರ ಸ್ಪಷ್ಟ- ಅವರ ವ್ಯಕ್ತಿತ್ವ, ವಿಚಾರಗಳು ಹಾಗೂ ಅವರ ಕೆಲಸಗಳು ಅವರನ್ನು ಅಂಥ ಗೌರವ ಸ್ಥಾನಕ್ಕೆ ತಂದು ನಿಲ್ಲಿಸಿರುತ್ತದೆ. ಹಾಗಂತ ಅವರು ಈ ಸ್ಥಾನಮಾನ, ಯಶಸ್ಸು, ಕೀರ್ತಿ, ಜನಪ್ರಿಯತೆಯ ಹಿಂದೆ ಬಿದ್ದವರಲ್ಲ, ಅವುಗಳಿಗಾಗಿ ಹವಣಿಸುವರಲ್ಲ. ಕೇವಲ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿರುತ್ತಾರೆ; ಅವರ ಮನಸ್ಸು ಸದಾ ಸಮಾಜಕ್ಕಾಗಿ ತುಡಿಯುತ್ತಿರುತ್ತದೆ.  ಅವರ ಪ್ರಾಶಸ್ತ್ಯ- ಜ್ಞಾನಕ್ಕೆ; ನಿಸ್ವಾರ್ಥತೆ ಅವರ ಬಲ; ಮಾನವೀಯತೆ ಅವರ ಮೊದಲ ಆದ್ಯತೆ; ಎಷ್ಟೇ ಕಷ್ಟ ಬಂದರೂ ಸತ್ಯದ ವಿನಾ ಅನ್ಯಮಾರ್ಗವನ್ನು ಅವರು ಅನುಸರಿಸಲೊಲ್ಲರು. ಹಾಗಾಗಿಯೇ ಜಗತ್ತು ಅವರನ್ನು ಅಪ್ಪಿ ಒಪ್ಪುವುದು. ಅವರ ವಿಚಾರಗಳಿಗೆ, ಕೆಲಸಗಳಿಗೆ ತಲೆಬಾಗುವುದು. ಅವರ ವ್ಯಕ್ತಿತ್ವಕ್ಕೆ ಮಾರುಹೋಗುವುದು. ಮಹಾನಾಯಕನೆಂದು ಪ್ರೀತಿಸಿ, ಗೌರವಿಸುವುದು. ಇಂಥ ಮಹಾತ್ಮರಿಗೆ ಯಾವುದೇ ಪ್ರಾದೇಶಿಕ ಗಡಿಗಳಿರುವುದಿಲ್ಲ. ತಮ್ಮ ನಡೆ-ನುಡಿಗಳ ಮೂಲಕ ಅವರು ಇಡೀ ಜಗತ್ತನ್ನೆ ಆವರಿಸಿಕೊಂಡಿರುತ್ತಾರೆ. ಅಸೀಮವಾಗಿ, ಅನಂತವಾಗಿ ಸೂರ್ಯನಂತೆ ಪ್ರಖರವಾಗಿ ಬೆಳೆಗುತ್ತಿರುತ್ತಾರೆ. ಅವರು ಹುಟ್ಟಿ, ಬದುಕಿ, ಬಾಳ ಪಯಣ ಮುಗಿಸಿದ ಬಳಿಕವೂ ಅನಂತ ವರ್ಷಗಳವರೆಗೆ ನೆನಪಿನಲ್ಲುಳಿಯುತ್ತಾರೆ, ಆಚಂದ್ರಾರ್ಕ ಅವರ ಹೆಸರು ಅಜರಾಮರ. ಅವರ ನಡತೆ, ವ್ಯಕ್ತಿತ್ವಗಳೆಲ್ಲವೂ ನಮಗೆ ಪಾಠ. ಅವರ ಕೆಲಸಗಳು, ಸಾಧನೆಗಳು ನಮಗೆ ಶಕ್ತಿ. ಅವರ ಬದುಕಿನ ಹೋರಾಟಗಳು ನಮಗೆ ಸ್ಫೂರ್ತಿ. ಅವರು ವಿಶೇಷವೆನಿಸಲು ಮತ್ತೊಂದು ಕಾರಣ-ಪ್ರಸ್ತುತತೆ. ಎಷ್ಟೋ ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು, ಅಳವಡಿಸಿಕೊಂಡ ಮೌಲ್ಯಗಳು, ಅನುಸರಿಸಿದ ದಾರಿ, ಬದುಕಿದ ಪರಿ, ಬರಹ, ಕಾರ್ಯ ಇಂದಿಗೂ ಪ್ರಸ್ತುತವಾಗುತ್ತವೆ. ಸರ್ವಕಾಲಕ್ಕೂ ಸಲ್ಲುವ ಗುಣವಂತರಾದ ಅವರು, ದೇದೀಪ್ಯಮಾನವಾಗಿ ತಾವಷ್ಟೇ ಬೆಳಗುವುದಲ್ಲದೇ ಅನ್ಯರಿಗೂ ದಾರಿದೀಪವಾಗಿರುತ್ತಾರೆ. ಹಾಗಾಗಿ ಅವರು ಬರಿ ವ್ಯಕ್ತಿಯಲ್ಲ, ಒಂದು ಶಕ್ತಿ. ಅಂಥ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ; ನಮ್ಮ ಪ್ರೀತಿಯ ಬಾಪು ಅಥವಾ ಬಾಪೂಜಿ. 


ಪತ್ರಿಕೆಯ ಸಂಪಾದಕರೂ, ಬರಹಗಾರರೂ ಆದ ವಿಶ್ವೇಶ್ವರ ಭಟ್ಟರು ಗಾಂಧೀಜಿಯನ್ನು ಕುರಿತ ತಮ್ಮ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು : "ನಾವು ಬಾಲ್ಯದಿಂದಲೇ ನೋಡಿದ, ಕೇಳಿದ, ಓದಿದ ವ್ಯಕ್ತಿಯೆಂದರೆ ಗಾಂಧೀಜಿ. ಪ್ರಾಯಶಃ ಅವರಷ್ಟು ಕಾಡಿದ, ಪ್ರಭಾವ ಬೀರಿದ, ತಟ್ಟಿದ ಇನ್ನೊಬ್ಬ ವ್ಯಕ್ತಿಯಿರಲಿಕ್ಕಿಲ್ಲ. ಅವರು ನಮ್ಮನ್ನಗಲಿ ಎಪ್ಪತ್ತ್ಮೂರು ವರ್ಷಗಳಾದರೂ ಗಾಂಧಿವಾದ ಇಂದಿಗೂ ಪ್ರಸ್ತುತ. ಇಂದಿಗೂ ಅವರು ಆದರ್ಶ. ಒಂದಿಲ್ಲೊಂದು ರೀತಿಯಲ್ಲಿ ಅವರ ಸ್ಮರಣೆಯಿಲ್ಲದೇ, ಅವರ ದರ್ಶನವಿಲ್ಲದೇ ನಮ್ಮ ದಿನ ಕಳೆಯುವುದಿಲ್ಲ. ಅಷ್ಟರಮಟ್ಟಿಗೆ ಅವರು ಸಮಸ್ತ ಭಾರತವನ್ನು ಮತ್ತು ವಿಶ್ವವನ್ನು ಆವರಿಸಿಕೊಂಡಿದ್ದಾರೆ. ಹಾಗಂತ ಗಾಂಧಿ ಟೀಕೆ ವಿರೋಧಗಳಿಂದ ಹೊರತಾದವರೇನೂ ಅಲ್ಲ. ಆದರೂ ಅವರನ್ನು ನಿರಾಕರಿಸುವುದು ಸಾಧ್ಯವೇ ಇಲ್ಲ. ಅಚ್ಚರಿಯೆಂದರೆ ವರ್ಷ ವರ್ಷ ಕಳೆದರೂ ಗಾಂಧಿ ಮತ್ತಷ್ಟು ಗಟ್ಟಿಯಾಗುತ್ತಿದ್ದಾರೆ, ಅವರ ಸಿದ್ಧಾಂತ, ವಾದ ಮತ್ತಷ್ಟು ಪ್ರಸ್ತುತವಾಗುತ್ತಿದೆ. ಗಾಂಧಿ ಆಪ್ತರಾಗುತ್ತಿದ್ದಾರೆ. ಗಾಂಧೀಜಿಯ ಅಹಿಂಸವಾದ, ಸತ್ಯಾಗ್ರಹ, ಪ್ರತಿಭಟನೆ ಇಂದಿಗೂ ಜಗತ್ತಿನಾದ್ಯಂತ ಸರ್ವಮಾನ್ಯ. ಈ ಕಾರಣದಿಂದ ಅವರು ವಿಶ್ವದೆಲ್ಲೆಡೆ ಗೌರವಕ್ಕೆ ಪಾತ್ರರಾಗಿದ್ದಾರೆ". ಗಾಂಧೀಜಿಯನ್ನು ಕುರಿತು ತಿಳಿಸುವ ಅತ್ಯಂತ ಸಮರ್ಪಕ ಹಾಗೂ ಯುಕ್ತ ಸಾಲುಗಳಿವು.


ಸಾಮಾನ್ಯವಾಗಿ ಗಾಂಧೀಜಿ ಎಂದಕೂಡಲೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಎಂಬುದಷ್ಟೇ ನಮಗೆ ಗೊತ್ತಿರುತ್ತದೆ. ಆದರೆ ಅವರ ಸತ್ಯಾಗ್ರಹಿ, ಅಹಿಂಸೆಯ ಪ್ರತಿಪಾದಕ, ಸರಳತೆಯ ಮೂರ್ತಿ, ದಾರ್ಶನಿಕ, ಹರಿಜನೋದ್ಧಾರಕ, ಗ್ರಾಮೋದ್ಧಾರಕ. ವಕೀಲ ವೃತ್ತಿ ಕೈಗೊಂಡಿದ್ದರು, ಪ್ರಕೃತಿ ಚಿಕಿತ್ಸೆಯಲ್ಲೂ ಅವರಿಗೆ ನಂಬಿಕೆ ಇತ್ತು


"When there is both inner and outer cleanliness, it approaches godliness" ಎಂದು ಹೇಳಿದ ಗಾಂಧೀಜಿಯವರು ಸ್ವಚ್ಫತೆಯ ಬಲು ದೊಡ್ಡ ಪ್ರತಿಪಾದಕ ಹಾಗೂ ರಾಯಭಾರಿ. "ಸ್ವಚ್ಛ ಮಾಡುವವನು ಎಂದಿಗೂ ಮುಜುಗರ, ನಾಚಿಕೆ ಪಟ್ಟುಕೊಳ್ಳಬಾರದು, ನಿಜವಾಗಿ ನಾಚಿಕೆಯಾಗಬೇಕಾದ್ದು ಗಲೀಜು ಮಾಡುವವನಿಗೆ. ಸ್ವಚ್ಛತೆ ಕೈಗೊಂಡವನು ಸದಾ ಶ್ರೇಷ್ಠ ವ್ಯಕ್ತಿ" ಎಂದು ಗಾಂಧೀಜಿ ಸಾರಿ ಸಾರಿ ಹೇಳುತ್ತಿದ್ದರು. 


ಇನ್ನು, ಮುಖ್ಯವಾಗಿ ಗಾಂಧೀಜಿ ಮೂಲತಃ ಪತ್ರಕರ್ತರಾಗಿದ್ದವರು, ಉತ್ತಮ ಬರಹಗಾರರು ಕೂಡ. 'ಯಂಗ್ ಇಂಡಿಯಾ', 'ನವಜೀವನ' ಮತ್ತು 'ಹರಿಜನ' ಪತ್ರಿಕೆಗಳ ಸಂಪಾದಕ ಸ್ಥಾನವನ್ನು ವಹಿಸಿಕೊಂಡಿದ್ದರು. ಈ ಪತ್ರಿಕೆಗಳಿಗೆ ಸ್ವತಃ ಗಾಂಧಿಯವರು ಹಲವಾರು ಲೇಖನಗಳನ್ನು ಬರೆಯುತ್ತಿದ್ದರು. ಓದುಗರು ಅಥವಾ ಇತರರು ಯಾರೇ ಆಗಲಿ ಕೇಳುವ ಪ್ರಶ್ನೆಗಳಿಗೆ ಉತ್ತರ ಬರೆದು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. "ಪತ್ರಿಕೋದ್ಯಮದ ಏಕೈಕ ಧ್ಯೇಯ ಸೇವೆಯಾಗಿರಬೇಕು" ಎಂದು ಗಾಂಧಿ ಹೇಳುತ್ತಿದ್ದರು. ಸ್ವಾತಂತ್ರ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪತ್ರಿಕೆಗಳೇ ಅವರಿಗೆ ಪ್ರಮುಖ ಸಾಧನವಾದವು. ಬರಹಗಳ ಮೂಲಕ ಸತ್ಯ ಹಾಗೂ ಅಹಿಂಸೆಯ ಮಹತ್ತ್ವವನ್ನು ಸಾರುತ್ತಿದ್ದರು, ಚಿಂತನಾರ್ಹ ವಿಷಯಗಳನ್ನು ಕುರಿತು ಬರೆಯುತ್ತಿದ್ದರು, ಈ ಬರಹಗಳು ಹಲವಾರು ಭಾಷೆಗಳಿಗೆ ತರ್ಜುಮೆಗೊಂಡು, ಪುಸ್ತಕ ರೂಪದಲ್ಲೂ ಪ್ರಕಟವಾಗಿ ಇಂದಿಗೂ ಜನಪ್ರಿಯವಾಗಿವೆ. 


ಹರಿಜನ ಪತ್ರಿಕೆಗೆ, ಮೇ 1, 1937 ರಲ್ಲಿ ಅವರು ಬರೆದ ಲೇಖನದಿಂದ ಆಯ್ದ ಸಾಲುಗಳನ್ನು ಓದಿದರೆ, ಸತ್ಯ ಮತ್ತು ಅಹಿಂಸೆಯನ್ನು ಎಷ್ಟು ತೀವ್ರವಾಗಿ ಅವರು ಬದುಕಲ್ಲಿ ಅಳವಡಿಸಿಕೊಂಡಿದ್ದರೆಂಬುದು ನಮಗೆ ಅರಿವಾಗುತ್ತದೆ : "ನನ್ನ ದೇಶಕ್ಕಾಗಿ ನಾನು ತ್ಯಾಗ ಮಾಡಲಾರದುದು ಈ ಜಗತ್ತಿನಲ್ಲಿ ಏನೂ ಇಲ್ಲ ಎರಡನ್ನು ಹೊರತು ಅವು- ಸತ್ಯ ಮತ್ತು ಅಹಿಂಸೆ. ಇಡೀ ಜಗತ್ತನ್ನೇ ನನ್ನ ಮುಂದಿಟ್ಟರೂ ಈ ಎರಡನ್ನು ಮಾತ್ರ ನಾನು ಬಿಡಲಾರೆ. ಏಕೆಂದರೆ ನನ್ನ ಪಾಲಿಗೆ ಸತ್ಯವೇ ದೇವರು. ಸತ್ಯಸಾಧನೆಗೆ ಅಹಿಂಸೆಯಲ್ಲದೆ ಅನ್ಯ ಪಥವಿಲ್ಲ". ಅವರ ಆತ್ಮಕಥನದಲ್ಲಿ ಬರೆದುಕೊಂಡಿರುವ ಈ ಸಾಲುಗಳು ನೋಡಿ : "ಭಗವಂತನ ಪ್ರತ್ಯಕ್ಷ ದರ್ಶನದ ಹಂಬಲ ನನ್ನದು. ಭಗವಂತನೇ ಸತ್ಯ ಎಂಬುದನ್ನು ನಾನು ಬಲ್ಲೆ. ನನ್ನ ಪಾಲಿಗೆ ಭಗವಂತನನ್ನು ಕಾಣಲು ಇರುವ ಒಂದೇ ಒಂದು ನಿಶ್ಚಿತ ಮಾರ್ಗವೆಂದರೆ-ಅಹಿಂಸೆ, ಪ್ರೇಮ". 


ಗಾಂಧೀಜಿಯ ಬರಹಗಳನ್ನು ಕುರಿತು ಮಾತಾಡುವಾಗ ಬಹಳ ಮುಖ್ಯವಾಗುವುದು ಅವರ ಆತ್ಮಕಥೆ. ಅವರ ವಸ್ತುನಿಷ್ಠ ಬರಹ, ಸತ್ಯವನ್ನು ಒಪ್ಪಿಕೊಳ್ಳುವ ದಿಟ್ಟತನ, ಸ್ಫುಟತೆ, ಘಟನೆಗಳನ್ನು ಸಾದರಪಡಿಸಿರುವ ರೀತಿ ನಿಜಕ್ಕೂ ಅನನ್ಯ. ಆತ್ಮಕಥೆಗಳಲ್ಲಿಯೇ ಬಹಳ ಅಪೂರ್ವ ಹಾಗೂ ಭಿನ್ನ ಮಾದರಿ ಗಾಂಧೀಜಿಯವರ ಆತ್ಮಕಥೆ. 


ಗಾಂಧೀಜಿಯ ಅನೇಕ ಆಪ್ತರು ಆತ್ಮಕಥೆಯನ್ನು ಬರೆಯುವಂತೆ ಅವರಿಗೆ ಒತ್ತಾಯಿಸುತ್ತಿದ್ದರು. ಪುಸ್ತಕರೂಪದಲ್ಲಿ ಗಾಂಧೀಜಿಯ ಆತ್ಮಕಥೆಯನ್ನು ಪ್ರಕಟಿಸಬೇಕೆಂದು ಗಾಂಧಿಯ ಆಪ್ತಾರದ 'ಸ್ವಾಮಿ ಆನಂದ'ರ ಆಸೆಯಾಗಿತ್ತು. ಅದರಂತೆ ಗಾಂಧೀಜಿ ಒಪ್ಪಿ ಬರೆಯಲು ಶುರುಮಾಡುತ್ತಾರೆ. ಆದರೆ ಸ್ವಾತಂತ್ರ್ಯ ಸಂಗ್ರಾಮ, ಸೆರೆಮನೆವಾಸ ಇವುಗಳ ಬಿಕ್ಕಟ್ಟಿನಲ್ಲಿ ಬರೆದು ಮುಗಿಸಲು ಬಿಡುವು ಸಿಗುವುದಿಲ್ಲ. ಪೂರ್ಣಗೊಳಿಸಲು ಎಷ್ಟು ಸಮಯ ಹಿಡಿಯುವುದೊ? ಗೊತ್ತಿಲ್ಲ. ಆಗ ಗಾಂಧೀಜಿ ಆಲೋಚಿಸುತ್ತಾರೆ : “ಒಟ್ಟಿಗೆ ಪೂರ್ತಿ ಬರೆಯುವುದು ಕಷ್ಟಸಾಧ್ಯ. ವಾರಕ್ಕೊಂದು ಅಧ್ಯಾಯದಂತೆ ಆದರೆ ನಾನು ಬರೆಯಬಲ್ಲೆ. ಹೇಗೂ 'ನವಜೀವನ' ಪತ್ರಿಕೆಗೆ ಬರೆಯಲೇಬೇಕು. ನನ್ನ ಆತ್ಮಕಥೆಯನ್ನೇ ಬರೆದು ಪ್ರಕಾಶಿಸಿದರೆ ಹೇಗೆ?” ಎಂದು ಸ್ವಾಮಿ ಆನಂದರಿಗೆ ತಿಳಿಸುತ್ತಾರೆ. ಅವರೂ ಒಪ್ಪಿಗೆ ಸೂಚಿಸಿದ ತರುವಾಯ ಪ್ರತಿವಾರ ಒಂದೊಂದು ಕಂತು 'ನವಜೀವನ' ಪತ್ರಿಕೆಗೆ ಬರೆಯುತ್ತಾರೆ. ಇದು 1925 ರಿಂದ 1929 ರವೆರಗೆ 'ನವಜೀವನ' ಪತ್ರಿಕೆಯಲ್ಲಿ ಪ್ರಕಟವಾದರೆ; 'ಯಂಗ್ ಇಂಡಿಯಾ' ಪತ್ರಿಕೆಯಲ್ಲಿ ಇಂಗ್ಲಿಷಿಗೆ ಭಾಷಾಂತರವಾಗಿ ಪ್ರಕಟವಾಗಿದ್ದವು. ಹೀಗೆ ಅವರ ಆತ್ಮಕಥೆ ಮೊದಲು ಪತ್ರಿಕೆಗಳಲ್ಲಿ ಪ್ರಕಟವಾಗಿ ಅನಂತರ ಪುಸ್ತಕವಾಗಿ ಹೊರಬಂತು.. 


ಹಲವಾರು ಭಾಷೆಗಳಲ್ಲಿ ಗಾಂಧೀಜಿಯವರ ಆತ್ಮಕಥೆ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು 'ನನ್ನ ಸತ್ಯಾನ್ವೇಷಣೆ' ಹೆಸರಿನಲ್ಲಿ ಗಾಂಧೀಜಿಯವರ ಆತ್ಮಕಥನವನ್ನು ಕನ್ನಡಕ್ಕೆ ತಂದಿದ್ದಾರೆ. 


ಗಾಂಧೀಜಿ ತಮ್ಮ ಆತ್ಮಕಥೆಯನ್ನು ಬರೆದದ್ದು ಮೂಲ ಗುಜರಾತಿಯಲ್ಲಿ. ಇದರಲ್ಲಿ ತಮ್ಮ ಬಾಲ್ಯದಿಂದ ಹಿಡಿದು 1921ರವರೆಗಿನ ಘಟನಾವಳಿಗಳನ್ನು ಕುರಿತು ಬರೆದಿದ್ದಾರೆ. ಸತ್ಯದ ಹುಡುಕಾಟ, ಸತ್ಯದರ್ಶನ, ಸತ್ಯದೊಂದಿಗೆ ತಮ್ಮ ಜಿಜ್ಞಾಸೆಯೇ ಇಲ್ಲಿನ ಅಧ್ಯಾಯಗಳ ಮೂಲ ಹಾಗೂ ಗುರಿ ಎಂದು ಗಾಂಧಿ ತಿಳಿಸಿದ್ದಾರೆ. "ನನ್ನ ಜೀವನದ ಘಟನೆಗಳನ್ನು ತಿಳಿಸಬೇಕೆಂಬುದು ನನ್ನ ಉದ್ದೇಶವಲ್ಲ. ಸತ್ಯದ ವಿಷಯದಲ್ಲಿ ನಾನು ಮಾಡಿದ ಅನೇಕ ಸಾಧನೆಗಳ ಕತೆಯನ್ನು ಹೇಳಬೇಕೆಂಬುದು ಮಾತ್ರ ನನ್ನ ಆಶಯ" ಎಂದು ಗಾಂಧೀಜಿಯೇ ಆತ್ಮಕಥೆಯ ಪೀಠಿಕೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗಾಗಿ 'ಸತ್ಯ ನಾ ಪ್ರಯೋಗೊ' ಅರ್ಥಾತ್ 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಎಂದು ಗಾಂಧೀಜಿ ತಮ್ಮ ಆತ್ಮಕಥೆಗೆ ಹೆಸರಿಸಿಕೊಂಡಿದ್ದು.


ಇಂಗ್ಲಿಷ್‌ನಲ್ಲೂ ಗಾಂಧೀಜಿಯೇ ಬರೆದಿದ್ದಾರೆ ಎಂದು ಬಹುತೇಕರು ಭಾವಿಸಿದ್ದಾರೆ ಆದರೆ ಅದು ತಪ್ಪು. ಗಾಂಧೀಜಿಯವರ ಆತ್ಮಕಥೆಯನ್ನು “Story of My experiments with Truth” ಎಂಬ ಹೆಸರಿನಲ್ಲಿ ಅತ್ಯಂತ ಸಮರ್ಪಕವಾಗಿ ಇಂಗ್ಲಿಷಿಗೆ ಅನುವಾದಿಸಿ ಗಾಂಧೀಜಿಯ ಜೀವನವನ್ನು, ಆದರ್ಶ, ನುಡಿ, ನಿಲುವುಗಳನ್ನು ಲೋಕಕ್ಕೆ ಪ್ರಚುರಪಡಿಸಿದವರು- ಗಾಂಧೀಜಿಯ ಆಪ್ತಸಹಾಯಕರೂ, ಪ್ರೀತಿಪಾತ್ರರೂ ಆಗಿದ್ದ ಮಹಾದೇವ ದೇಸಾಯಿ. ದೇಸಾಯಿ ಅವರು ಗಾಂಧೀಜಿಗೆ ಬಹಳ ಆಪ್ತರಾಗಿದ್ದರು, ತಮ್ಮ ನಡೆನುಡಿಗಳ ಮೂಲಕ ಗಾಂಧೀಜಿಯ ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ಗಾಂಧೀಜಿಯನ್ನು ಕಂಡರೆ ಅವರಿಗೆ ಬಹಳ ಭಕ್ತಿ ಹಾಗೂ ಗೌರವ. ಆಶ್ರಮಕ್ಕೆ ಬಂದು ಸೇರಿದಾಗಿನಿಂದ ತಮ್ಮ ಕೊನೆಯುಸಿರಿರುವರೆಗೂ ಅಂದರೆ ಇಪ್ಪತ್ತೈದು ವರ್ಷಗಳ ಕಾಲ ಗಾಂಧಿಯವರ ಆಶ್ರಮದಲ್ಲಿ ಗಾಂಧಿಯವರೊಡನೆ ಅವರಿಗೆ ಸಹಾಯಕರಾಗಿ, ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ್ದಾರೆ.


^^^^^^

ಶಾಂತಿಯನ್ನು ಅಸ್ತ್ರವಾಗಿ ಬಳಸಿಕೊಂಡು ದೇಶವನ್ನು ದಾಸ್ಯದಿಂದ ಮುಕ್ತಮಾಡಲು ಪಣತೊಟ್ಟಿದ್ದ ಗಾಂಧೀಜಿ ಪಟ್ಟಾಗಿ ತಮ್ಮ ಮೌಲ್ಯಗಳ ಮೇಲೆ ನಿಂತು, ಶ್ರಮವಹಿಸಿ, ಸತತ ಪ್ರಯತ್ನಗಳನ್ನು ಮಾಡಿ ಕೊನೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಸಫಲರಾದರು. ಹಾಗಾಗಿಯೇ ಅವರು ಮಹಾತ್ಮರೆನಿಸಿಕೊಂಡಿದ್ದು. ಶತ್ರುಗಳನ್ನೂ ಪ್ರೀತಿಯಿಂದಲೇ ಗೆಲ್ಲಬೇಕೆಂಬುದು ಅವರ ನಿಲುವು. ಈ ರೀತಿ ಸತ್ಯ, ಅಹಿಂಸೆ, ಪ್ರೇಮ ತ್ಯಾಗ, ಶಾಂತಿ ತತ್ತ್ವಗಳ ಮೇಲೆ ಬಾಳಿದ ಗಾಂಧೀಜಿ ಪ್ರಾರ್ಥನೆಯಲ್ಲೂ ಅಪಾರ ವಿಶ್ವಾಸವಿರಿಸಿದ್ದರು. ಪ್ರಾರ್ಥನೆ ಅವರ ದೈನಂದಿನ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು. ಎಂದಿಗೂ ಭಜನೆ ತಪ್ಪಿಸುತ್ತಿರಲಿಲ್ಲ. 


ಹಿಂದೂ-ಮುಸಲ್ಮಾನರ ಒಗ್ಗಟ್ಟನ್ನು ಸಾರಲು, ಎಲ್ಲರೂ ಒಟ್ಟಾಗಿ ಸಹಬಾಳ್ವೆಯಿಂದ ಬಾಳಬೇಕೆಂಬ ಆಶಯದಲ್ಲಿ ಮತ್ತು ನಾಮಹಲವು ದೇವರೊಬ್ಬ ಎಂಬ ಸತ್ಯವನ್ನು ಪ್ರತಿಪಾದಿಸಲು ಗಾಂಧೀಜಿ ಅವರು ಲಕ್ಷ್ಮಣಾಚಾರ್ಯರು ಬರೆದ 'ಶ್ರೀ ನಾಮ ರಾಮಾಯಣಂ'ದಿಂದ ಆಯ್ದ ಜನಪ್ರಿಯ ಭಜನೆಯನ್ನು ಈ ಕೆಳಗಿನಂತೆ ಕೊಂಚ ಮಾರ್ಪಾಡು ಮಾಡಿ ಹಾಡುತ್ತಿದ್ದರು. ಹಾಡಿಸುತ್ತಿದ್ದರು. ಹಲವು ಪ್ರತಿಭಟನೆಗಳಲ್ಲೂ ಇದನ್ನು ಎಲ್ಲರೂ ಒಟ್ಟಿಗೆ ಹಾಡುತ್ತಿದ್ದರು. ಇದು ಅವರ ಮೆಚ್ಚಿನ ಭಜನೆ ಸಹ ಆಗಿತ್ತು:


"ರಘುಪತಿ ರಾಘವ ರಾಜಾರಾಮ್

ಪತಿತ ಪಾವನ ಸೀತಾರಾಮ್

ಸೀತಾರಾಮ್ ಸೀತಾರಾಮ್

ಭಜ್ ಪ್ಯಾರೇ ತು ಸೀತಾರಾಮ್

ಈಶ್ವರ ಅಲ್ಲಾ ತೇರೇ ನಾಮ್

ಸಬಕೊ ಸನ್ಮತಿ ದೇ ಭಗವಾನ್"


ಹೀಗೆ ಗಾಂಧೀಜಿ ಸರ್ವರ ಹಿತವನ್ನು ಬಯಸುತ್ತಿದ್ದವರು. ‌ಜಾನ್ ರಸ್ಕಿನ್ ಅವರ 'Unto This Last' ಪುಸ್ತಕ ಓದಿದ ಗಾಂಧೀಜಿ ಅದರಲ್ಲಿ ಪ್ರತಿಪಾದಿಸಲಾಗಿದ್ದ ತಾತ್ತ್ವಿಕ ಚಿಂತನೆಗಳಿಂದ ಅತ್ಯಂತ ಪ್ರಭಾವಿತರಾಗಿ, "ಸರ್ವೋದಯ" ತತ್ವವನ್ನು ಕುರಿತು ಎಲ್ಲರಿಗೂ ತಿಳಿಸುತ್ತಿದ್ದರು, ಪ್ರತಿಪಾದಿಸುತ್ತಿದ್ದರು. ಸರ್ವಜನರ ಸುಖವೇ ಜೀವನದ ಗುರಿಯಾಗಬೇಕೆಂಬುದು ಅವರ ದೃಢ ನಂಬಿಕೆಯಾಗಿತ್ತು.


ಗಾಂಧೀಜಿಯ ಅಗಲಿಕೆಯ ಅನಂತರ ಕವಿ ಡಿ. ಎಸ್ ಕರ್ಕಿ ಅವರು ಬರೆದ ಕವನದ ಸಾಲುಗಳು ಹೀಗಿವೆ :


ತಿಳಿನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು; ಇನ್ನೊಮ್ಮೆ ಏಕೆ ಬಾರ?


ಎಷ್ಟು ಅರ್ಥಪೂರ್ಣ ಸಾಲಿದು- “ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು”. ಹೌದು ಆ ಮಹಾತ್ಮ ಬಿಟ್ಟು ಹೋದದ್ದು ಸತ್ಯದ ಬೆಳಕು, ಶಾಂತಿಯ ಬೆಳಕು, ಪ್ರೀತಿಯ ಬೆಳಕು, ಸರಳತೆಯ ಬೆಳಕು, ಸ್ವಚ್ಛತೆಯ ಬೆಳಕು, ಮಾನವೀಯತೆಯ ಬೆಳಕು, ಸೌಹಾರ್ದತೆಯ ಬೆಳಕು.. ಇವು ಸದಾ ಪ್ರಜ್ವಲಿಸುವ ಬೆಳಕು; ದಾರಿ ತೋರುವ ಬೆಳಕು; ಗುರಿ ತಲುಪಿಸುವ ಬೆಳಕು. ಈಗಲೂ ಆ ಬೆಳಕು  ಸಮಾಜಕ್ಕೆ ಅತ್ಯಗತ್ಯ. ಆ ಬೆಳಕಿನ ಜಾಡು ಹಿಡಿದು ನಡೆದರೆ ಸಾಕು ನಮ್ಮ ಬದುಕಿಕೊಂದು ಅರ್ಥ ಸಿಗುತ್ತದೆ, ಸಾರ್ಥಕತೆ ಸಿಗುತ್ತದೆ. ಹಾಗಾಗಿ ಸದಾ ಬೆಳಕನ್ನು ಅರಸುತ್ತ ಹೊರಡೋಣ. 


ಹುಟ್ಟು ಸಾವು ಮನುಜನಿಗೆ ಸಹಜ ಈ ನಡುವೆ ಬದುಕಿನಲ್ಲಿ ನಾವೆಷ್ಟು ದಿನಗಳು ಬದುಕಿದ್ದೆವು ಎಂಬುದಕ್ಕಿಂತ ನಾವು ಹೇಗೆ ಬದುಕಿದ್ದೆವು ಎಂಬುದು ಬಹಳ ಮುಖ್ಯವಾಗುತ್ತದೆ- ಇದನ್ನು ಅರಿಯಲು ಇಂಥ ಮಹಾತ್ಮನ ಜೀವನಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಅಲ್ಲವೇ? 

- ಪುನೀತ್ ಕುಮಾರ್ 

ಕಾಮೆಂಟ್‌ಗಳು

  1. ಬಹಳ ಅರ್ಥಪೂರ್ಣವಾದ, ಅಗತ್ಯ ವಾದ ಬರಹ. ಗಾಂಧೀಜಿ ಮನುಷ್ಯ ರಾಗಿಯೂ ಒಂದು ವಿಶ್ವವಿದ್ಯಾನಿಲಯದಂತೆ. ಅವರಲ್ಲಿಯೂ ಕುಂದುಹುಡುಕುವ ಮನಸ್ಸುಗಳು ತುಚ್ಛ ಮೂಲದವು. ಹಾಸುಹೊಕ್ಕಾಗಿ ವಿಜೃಂಭಿಸುತ್ತಿರುವ ಎಲ್ಲ ಲೋಪ ದೋಷಗಳನ್ನು ಎತ್ತಾಡಲು ಹೆದರಿ ಅಸಾಮಾನ್ಯ ವ್ಯಕ್ತಿತ್ವದಲ್ಲಿ ಕುಂದು ಕೊರತೆಗಳಿಗಾಗಿ ತಡಕಾಡುವ ಲಂಪಟರು. ಕೇವಲ ಒಂದು ಕುಟುಂಬದ ಸಮಸ್ಯೆಯನ್ನು ಬಗೆಹರಿಸಲು ಕೂಡ ಹೆಣಗಾಡಬಲ್ಲ ಇಂತವರು, ಭಾರತದಂತಹ ವೈವಿಧ್ಯಮಯ ಸಾಂಸ್ಕೃತಿಕ ವಾತಾವರಣದಲ್ಲಿ ಎಲ್ಲರನ್ನೂ ನಿಭಾಯಿಸುತ್ತ ಅವರನ್ನೆಲ್ಲ ಒತ್ತಟ್ಟಿಗೆ
    ಕೂಡಿಸಿ ಭಾರತದಲ್ಲಿ ಬೇತಾಳರಂತೆ ಬೇರುಬಿಟ್ಟಿದ್ದ ಬ್ರಿಟಿಷರನ್ನು ಹೊರದೂಡಿ ಸ್ವಾತಂತ್ರ್ಯ ಗಳಿಸಿಕೊಟ್ಟವರು. ಅದಕ್ಕಾಗಿ ಅಸಂಖ್ಯಾತ ಭಾರತೀಯರು ಒಟ್ಟಾಗುವಂತೆ
    ಮಾಡಲು ದುಡಿದವರು. ಅಂದಿನ ಸಮಾಜದ ಮೌಡ್ಯ ಗಳನ್ನು ತೊಡೆಯಲು ಶ್ರಮಿಸಿದವರು.
    ಅಂತರ ರಾಷ್ಟ್ರೀಯ ದೃಷ್ಟಿಯಿಂದ ಭಾರತದ ತಾಕತ್ತು ಮತ್ತು ದೌರ್ಬಲ್ಯ ಗಳೇನೆಂದು ಅರಿತಿದ್ದವರು.
    ಅದನ್ನು ಅರಿತುಕೊಳ್ಳಲು ಈಗಲೂ ಏಗುತ್ತಿರುವ ಕೆಲವು ಭಾರತೀಯರು ಭಾರತದ ಬಗ್ಗೆ ವೀರಾವೇಶದ ಹುಂಬತನವನ್ನಷ್ಟೇ ಪ್ರದರ್ಶಿಸುತ್ತಿರುವುದು.
    ಈ ಉತ್ತಮ ಲೇಖನ ಗಾಂಧೀಯ ಮಹಾನ್ ವ್ಯಕ್ತಿತ್ವವನ್ನು ಸರಳವಾಗಿ ಬಿಚ್ಚಿಟ್ಟಿದೆ.
    ಗಾಂಧೀಜಿಯ ಬಗೆಗಿನ ಬರಹಗಳು ಮತ್ತೆ ಮತ್ತೆ ಬರಲಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ತುಂಬ ಧನ್ಯವಾದ ಮೇಡಮ್. ಓದಿ, ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...