ಉರಿದು ಹಗುರಾಗುವ ಬಯಕೆ..
ಹೆಪ್ಪಾಗಿದೆ ದಣಿದು ಒಸರಿದ ಪಸೆಯ ಜೊತೆ
ಒಡಲ ನೋವ ಕಲಸಿದ ಬದುಕು.
ಮುಪ್ಪೆರಗಿ ಕುಂದಲು
ಬಲಹೀನ ತೋಳು
ಅದರುವ ಹೆಜ್ಜೆ,ಬೆದರು ಬೊಂಬೆ
ಮದ್ದಿಲ್ಲದ ಗಾಯದ ಮನಕೆ
ವಜ್ಜಾಗಿದೆ ಬದುಕು ..!
ಸುಡುವ ಕಿಚ್ಚಿಗೆ
ಉರಿದು ಹಗುರಾಗುವ ಬಯಕೆ
ಬಳಲಿ ಕೈಚೆಲ್ಲಿ ಉರುಳೊಳಗೆ ಜೋತು
ಕರುಳ ನೋವಿಗೆ
ಮೂಡಿದ ಸೋತ ನೆರಿಗೆಯ ಅಚ್ಚು
ಹಣೆಯ ಮೇಲೆ
ಉಸಿರು ಬಿಗಿದ ಮೇಲೆ ಕಾಣುವ ಸಜ್ಜು.
ಹಸನು ನೆಲದ ತೆನೆಯ
ದಕ್ಕದ ಕಾಳಿನ ತುತ್ತು
ಬದುಕ ನೆಲೆಯ ಕುತ್ತು
ಒಸರುವ ಕಂಬನಿಯ ಬಿಂದು
ಆಳುವ ನೀತಿಯ ಕೊಡುಗೆಯಿಂದು.
ಬಿಕ್ಕುವ ಎದೆಗೆ ಹನಿ ಗುಟುಕು,
ಭರವಸೆ ಬಸಿದ ಹುಸಿಯು..!!
ನಂಬಿಕೆಯ ಇಂಬಿನೊಳಗೆ
ಸುಖವಾಗಿ ತಲೆಯೊರಗಿ
ಮೆಲು ಹಾಸಿಗೆಯ ಗಾಢ ನಿದಿರೆಯ
ಕಾಯಕ, ಗೆದ್ದು ಬಂದವರದು.
ಕಟ್ಟಿದ ಕನಸಿನ ರೆಕ್ಕೆ
ಮುಗಿಲೆತ್ತರ ಹಾರಲು ಇನ್ನೂ,
ಬಲಿಯದ ಕೂಸು.!!
ನಿತ್ಯ ನಿರೀಕ್ಷೆಗಳ ವೇದನೆ
ಉಳಿದ ಜೀವದ ಯಾತನೆ...,
ನ್ಯಾಯ ಸಮ್ಮತಿಗಳಿಲ್ಲ
ಸಾಂತ್ವನದ ದನಿಗಳಿಲ್ಲ
ಕಸಿವ ಎದೆಯ ಕನಸುಗಳೇ
ಹೂಡುವ ಬಂಡವಾಳ,
ಹಸಿವಿನುದರದ ಬದುಕೇ ದಾಳ.!!
ಮೂಡದ ಒಮ್ಮತಗಳು
ನಡುವೆ ಹಗೆಯ ಹಗೇವು
ಹಸಿ ಬಿಸಿ ನೆತ್ತರಿನ ಕಲೆಗಳು
ಸದ್ಯ ಗದ್ದುಗೆಯ ಅಚ್ಚುಗಳು.
ಸದ್ದುಗದ್ದಲದ ಅಬದ್ದ ನಿಲುವುಗಳಲಿ
ಹುರುಳಿಲ್ಲದ ನೀತಿಯ ಕಟ್ಟುಪಾಡು
ಜಾತೀಯತೆಯ ಜಾಡು
ಸ್ವಾರ್ಥಗಳ ಬೀಡು...!!!
ಸಿದ್ದು ಮೂರ್ತಿ, ತುಮಕೂರು
ಪ್ರತ್ಯುತ್ತರಅಳಿಸಿಸಾವಿರ ಅರ್ಥಗಳನ್ನು ಒಂದೆಡೆ ಕಟ್ಟುವ ಕೆಲಸ ಬಹಳ ಅಚ್ಚುಕಟ್ಟಾಗಿದೆ ಸರ್....
ಧನ್ಯವಾದಗಳು 🙏
ಅಳಿಸಿ