ವಿಷಯಕ್ಕೆ ಹೋಗಿ

ವಜ್ರೋತ್ಸವದಾ ಸ್ವಾತಂತ್ರ್ಯ - ಕವಿತೆ - ರೋಹಿತ್ ಜಿ


ವಜ್ರೋತ್ಸವದಾ ಸ್ವಾತಂತ್ರ್ಯ

ಎಲ್ಲೆಲ್ಲಿಹುದು? ಹೇಗೆಲ್ಲಾಇಹುದು?
ವಾಜ್ರೋತ್ಸವ ವಯಸಿನ ಸ್ವಾತಂತ್ರ್ಯ!
ವಜ್ರಕ್ಕಿಂತ ಹರಿತವಾಗಿಹುದು
ನಾಡಿಗೆ-ಗಾಡಿಗೆ ಈ ಸ್ವಾತಂತ್ರ್ಯ!

ಅಧಿಕಾರದಾ ಅತ್ಯಧಿಕ ದಾಹಕೆ
ದೇಶದ ಪ್ರಾಂತ್ಯವ ಹೊಡೆಯುವ ಸ್ವಾತಂತ್ರ್ಯ.
ಧರ್ಮ-ಧರ್ಮಗಳ ಕೋಮುಸಂಘರ್ಷದಿ
ಮಾನವ ಧರ್ಮವ ಕೊಲ್ಲುವ ಸ್ವಾತಂತ್ರ.
ಮಂದಿರ, ಮಸೀದಿ, ಚರ್ಚ್ಗಳ ಒಡೆದು
ಹುದುಗಿಹ ಇತಿಹಾಸ ಕೆದಕುವ ಸ್ವಾತಂತ್ರ್ಯ.
ದೈವ-ದೆವ್ವಗಳ, ಭಯ-ಭಕ್ತಿ ಮೌಢ್ಯ ಭಾವದಲಿ
ವಿಜ್ಞಾನವನ್ನೆ ದಹಿಸುವ ಸ್ವಾತಂತ್ರ್ಯ. |೧|

ನೋಟಿನ ನೆರಿಗೆಯ ಮೈ-ಮಾಟಕೆ ಬಿದ್ದು
ವೋಟನು ಒತ್ತಿ ತೂರಾಡುವ ಸ್ವಾತಂತ್ರ್ಯ.
ಬ್ಯಾಂಕಲೆ ಖಾತೆ ಇಲ್ಲದ ಜನಗಳ
ಮತಬ್ಯಾಂಕನು ಮಾಡಿ ಆಳುವ ಸ್ವಾತಂತ್ರ್ಯ.
ಜಾತಿ, ಮತ, ಸಿದ್ಧಾಂತಗಳ ಕಚ್ಚಾಟದಿ ಬಿದ್ದು
ಅಭಿವೃದ್ಧಿಗೆ ಸಮಾಧಿ ಕಟ್ಟುವ ಸ್ವಾತಂತ್ರ್ಯ.
ಕೊಲೆಪಾತಕನೂ, ಕಿಡಿಗೇಡಿ, ಅತ್ಯಾಚಾರಿಗಳ
ನಾಯಕನ ಮಾಡಿ ಮೆರೆಸುವ ಸ್ವಾತಂತ್ರ್ಯ.  | ೨|

ಹಗಲು-ರಾತ್ರಿ, ಹಾದಿ-ಬೀದಿಗಳ ಭಿನ್ನವೇ ಇಲ್ಲದೆ
ಹೆಣ್ಣನು ಕಿತ್ತು ಕೆಡವಿ ತಿಂದು ತೇಗುವ ಸ್ವಾತಂತ್ರ್ಯ.
ಧರ್ಮ, ಲಿಂಗ , ಜಾತಿ , ಅಂತಸ್ತುಗಳ ಗೋಡೆಯ ಕಟ್ಟಿ
ಪ್ರೇಮದ ಪಕ್ಷಿಗಳ ಸದೆಬಡಿಯುವ ಸ್ವಾತಂತ್ರ್ಯ.
ಮದಿರೆ, ಮಾದಕ, ಮದ್ಯದ ಮಡುವಲೆ
ಜೀವ-ಜೀವನ ಮರೆಯುವ ಸ್ವಾತಂತ್ರ್ಯ.
ಸರ್ವಾಂಗಗಳೂ ಸಂತೃಪ್ತವಾಗಿ ಕಣ್ಕುಕ್ಕುವ ಹಾಗೆ
ಉಡುಗೆ-ತೊಡುಗೆಯ ಧರಿಸುವ ಸ್ವಾತಂತ್ರ. |೩|

ಪೆನ್ನನು ಹಿಡಿದು ಸತ್ಯವ ನುಡಿಯುವ ತಲೆಗೆ
ಗನ್ನನು ಇಟ್ಟು ಹೂಡೆದುರುಳಿಸೋ ಸ್ವಾತಂತ್ರ.
ಸಿದ್ಧಾಂತಗಳ ಕಾಲಡಿಯಲ್ಲಿಯೆ ಕಲೆ, ಸಂಸ್ಕೃತಿ
ನಂಬಿಕೆ, ಸೃಜನಶೀಲತೆ ಜೀತವ ಗೆಯ್ಯುವ ಸ್ವಾತಂತ್ರ್ಯ.
ಸಂತುಷ್ಠ ದೇಹ, ಸ್ವಚ್ಛಂದ ಮನಸು, ಅಂಗಾಂಗಗಳ 
ನಡುಬೀದಿಯ ಸಂತೆಯಲಿ ಮಾರುವ ಸ್ವಾತಂತ್ರ್ಯ.
ಖಾಸಗಿ ಕ್ರಿಯೆಗಳ ಸಾರ್ವಜನಿಕವಾಗೇ
ಬಿಚ್ಚಿಟ್ಟು ಬೀಗುವ ಬಯಕೆಯ ಸ್ವಾತಂತ್ರ. |೪|

ಬಡತನದಲ್ಲಿ ಹುಟ್ಟುವ ಜೀವಕೆ
ಹಸಿವು, ನೋವು, ತುಳಿತದ ಸ್ವಾತಂತ್ರ್ಯ.
ಬೆವರ ನೀರಿನ ಭಗೀರಥ ರೈತಗೆ
ಆತ್ಮಹತ್ಯೆಯ ಆಯ್ಕೆಗಳ ಸ್ವಾತಂತ್ರ್ಯ.
ಈಗಷ್ಟೇ ಹುಟ್ಟಿದ ಕೂಸಿಗು ಉಂಟು
ಖಾಯಿಲೆ, ಕುಪೋಷಣೆ, ಸಾವಿನ ಸ್ವಾತಂತ್ರ್ಯ.
ದುಡಿಯುವ ಶ್ರಮಿಕ ವರ್ಗಕೆ ಸಿಕ್ಕಿದೆ
ಶ್ರಮಿಸುತ್ತಲೆ ಸಮಾಧಿ ಸೇರುವ ಸ್ವಾತಂತ್ರ್ಯ. |೫|


ಬೆಳೆಯುವ ನಗರದ ದಾಹಕೆ ಬಂದಿದೆ
ಕೆರೆ-ಕುಂಟೆ, ನಾಲೆಗಳ ಕಬಳಿಸೋ ಸ್ವಾತಂತ್ರ್ಯ.
ಹಾರುವ, ತೇಲುವ, ಎಗ್ಗಿಲ್ಲದೆ ನುಗ್ಗುವ ಸಂಚಾರಕೀಗಾ
ಹಸಿರನೆ ನೆಲಸಮ ಮಾಡುವ ಸ್ವಾತಂತ್ರ.
ಹರಿಯುವ ನದಿಗಳ ರಭಸಕೆ ತುಂಬಿದೆ
ಮಾನವ ಪಾಪವ ತುಂಬಿಸಿಕೊಳ್ಳುವ ಸ್ವಾತಂತ್ರ್ಯ.
ಕಾಡಲಿ ಕಾಡದೆ ಬದುಕುವ ಜೀವಿಗೂ
ಅಳಿವಿನ ಅಂಚಲಿ ನಲುಗುವ ಸ್ವಾತಂತ್ರ. |೬|

ಶಿಕ್ಷಿತ, ಶೋಷಿತ, ಸಾಧಕನಿಗೀಗ
ನಿರುದ್ಯೋಗದ ನಿಲುವಿನ ಬವಣೆಯ ಸ್ವಾತಂತ್ರ್ಯ.
ಬೆಳೆಯುವ ಬಾಲ್ಯಕೆ ಬಿದ್ದೆದೆ ಇಲ್ಲಿ
ಅಂಕದ ಸುಂಕವ ತೆರುವ ಸ್ವಾತಂತ್ರ್ಯ.
ಆಕಾಂಕ್ಷೆಭರಿತ ಯವ್ವನಕಂತೂ
ಅವಕಾಶ ಬರಡಿನ ಭಾಗ್ಯದ ಸ್ವಾತಂತ್ರ್ಯ.
ಹಳ್ಳಿಯ ಸೊಗಡಿನ ಸೊಬಗಿನ ಜೀವನಕೆ
ಎಳೆದಿದೆ ನಗರದ ವಲಸೆಯ ಸ್ವಾತಂತ್ರ್ಯ. |೭|

ಪಟ್ಟಣ-ಪುರಗಳ ವಾಸಿಗರಿಗಂತೂ ಒದಗಿದೆ
ಕೊಳಚೆ, ಖಾಯಿಲೆ, ದಟ್ಟಣೆಯ ದಾರಿದ್ರ್ಯದ ಸ್ವಾತಂತ್ರ.
ಖಾಸಗಿ ಕಂಪನಿ ಬರುತಿದೆ ಎಲ್ಲೆಡೆ
ರಾಷ್ಟ್ರೀಕರಣವಾ ನಲುಗಿಸಿ ನಡುಗಿಸೋ ಸ್ವಾತಂತ್ರ್ಯ.
ಶ್ರೀಮಂತನಿಗಂತೂ ಮನೆಯಲ್ಲೇ ಚಿನ್ನ-ವಜ್ರದ
ಗಣಿ ನಿಕ್ಷೇಪವ ಸೃಷ್ಟಿಸಿಕೊಳ್ಳುವ ಸ್ವಾತಂತ್ರ್ಯ.
ಕಿತ್ತು ತಿನ್ನುವ ನರ ರಾಕ್ಷಸರಿಗಂತೂ
ಕಪ್ಪು-ಕೆಂಪಿನ ಹಣ ಗಳಿಸುವ ಸ್ವಾತಂತ್ರ್ಯ. |೮|

ಯೋಧನಿಗುಂಟು ವೈರಿಯ ಗುಂಡಿಗೆ
ಎದೆಯನು ಒಡ್ಡುತ ಹುತಾತ್ಮನಾಗುವ ಸ್ವಾತಂತ್ರ್ಯ.
ನೆರೆ-ಹೊರೆ ರಾಷ್ಟ್ರಕೆ ದಕ್ಕಿರುವುದುಂಟು
ನಮ್ಮದೇ ಭೂಮಿಯ ದೋಚುವ ಸ್ವಾತಂತ್ರ್ಯ.
ವಿಜ್ಞಾನ-ತಂತ್ರಜ್ಞಾನ ಬೆಳೆಯುತ್ತಾ ನುಗ್ಗಿದೆ
ಭಾವನಾ ಲೋಕವಾ ಸೀಳುತ್ತಾ ಸಾಗುವ ಸ್ವಾತಂತ್ರ್ಯ.
ಸರ್ವಜನರಿಗೂ ದೊರಕಿದೆ ಇಂದು
ಸ್ವಾರ್ಥದ ಜಂಜಡದಲಿ ಮುಳುಗುವ ಸ್ವಾತಂತ್ರ್ಯ. |೯|

ಸರ್ಕಾರಕೆ ಈಗ ಸಿಕ್ಕೇ ಬಿಟ್ಟಿದೆ
ಖಾಸಗಿತನಗಳ ಕಾದ್ದಾಲಿಸೋ ಸ್ವಾತಂತ್ರ್ಯ.
ಮಾಧ್ಯಮ ರಂಗವು, ರಣರಂಗವಾಗಿದೆ
ಮಾತಿನ ಶಸ್ತ್ರಾಸ್ತ್ರದಿ ಮನಗಳ ಒಡೆಯುವ ಸ್ವಾತಂತ್ರ್ಯ.
ಸರ್ಕಾರಿ ಶಾಲೆ, ಆಸ್ಪತ್ರೆ, ಬ್ಯಾಂಕು, ಉದ್ಯಮಕೀಗ
ಬಾಗಿಲು ಮುಚ್ಚಿ ಹೊರಡುವ ಸ್ವಾತಂತ್ರ್ಯ.
ಲಂಚದ ಮಂಚದಿ ಮಿನುಗುವ ಅಧಿಕಾರಕೆ
ಸಾಲದ ಶೂಲದಿ ಜನಗಳ ತಿವಿಯುವ ಸ್ವಾತಂತ್ರ್ಯ. |೧೦|

ಇಲ್ಲಿಗೆ ಬಂದಿದೆ, ಮುಪ್ಪಿಂದ ನಿಂದಿದೆ
ಸ್ವಾತಂತ್ರ್ಯದ ಎಂಬೋ ಅತಂತ್ರ.
ಆತ್ಮಗಳಂತೂ ಬಿಡುಗಡೆಯಾಗುತಲಿಲ್ಲ
ಇಲ್ಲಿದೆ ಹಲವು ಕುತಂತ್ರ.
ಇನ್ನೂ ಬೇಕು, ಹಲವೆಡೆ ಬೇಕು
ಹಳೆ ಬೇರಲೇ, ಹೊಸ ಚಿಗುರಿನ ಸ್ವಾತಂತ್ರ.
ಬವಣೆಯ ಬಾಳಿಗೆ ಭರವಸೆಯೊಂದೆ
ಆತ್ಮನಿರ್ಭರತೆಯ ಹೊಸ ಮಂತ್ರ. |೧೧|


ಸಲಿಂಗಿಗಳ ಪ್ರೇಮಕೆ ಬೇಕಿದೆ, 
ಲೈಂಗಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ.
ಗಂಡು-ಹೆಣ್ಣಿನ ಮಧುರ ಬಾಂಧವ್ಯಕೆ ಬೆಸುಗೆ
ಜಾತಿ-ಧರ್ಮವ ಮೀರುವ ಸ್ವಾತಂತ್ರ್ಯ.
ತೃತೀಯ ಲಿಂಗಕೆ ಅವಶ್ಯ ಬೇಕಿದೆ
ಬದುಕುವ ಲಿಂಗದ ಗುರುತಿನ ಸ್ವಾತಂತ್ರ್ಯ.
ಜನ್ಮ ಪಡೆಯುವ ಹೆಣ್ಣು ಶಿಶುವಿಗೆ ಬೇಕಿದೆ,
ಲಿಂಗ ಭೇದವಿಲ್ಲದ ಬದುಕುವ ಸ್ವಾತಂತ್ರ್ಯ.  |೧೨|

ಮೀಸಲಾತಿಯ ಜೇಡರ ಬಲೆಗೆ, ಬೇಕಿದೆ
ಅಂತ್ಯೋದಯ, ಸರ್ವೋದಯ ಸ್ವಾತಂತ್ರ್ಯ.
ವಿಚಾರ ಕ್ರಾಂತಿಯ ಮನಗಳಿಗೆ ಬೇಕಿದೆ
ಸತ್ಯಾನ್ವೇಷಣೆ ಮಾಡುವ ಸ್ವಾತಂತ್ರ್ಯ.
ದುಡಿಯುವ ಶ್ರಮಿಕ ಕೈಗಳಿಗೆ ಬೇಕಿದೆ
ಆಳುವ ಅಧಿಕಾರದ ಸ್ವಾತಂತ್ರ.
ತರುಣ ಯವ್ವನಕೆ ಬೇಡವೇನೂ
ನವ ನೂತನ ಕನಸುಗಳ ನನಸಾಗಿಸಿಕೊಳ್ಳುವ ಸ್ವಾತಂತ್ರ್ಯ. 
|೧೩|

ಎಳೆ ಹಸಿ ಹುಟ್ಟಿದ ಕಂದಮ್ಮಗೆ ಬೇಕಿದೆ
ಕಲೆ-ನೆಲೆ ಪೋಷಕದ ಬೆಳವಣಿಗೆಯ ಸ್ವಾತಂತ್ರ್ಯ.
ಬಣ್ಣ-ಬಣ್ಣದ ಬಾಲ್ಯಕೆ ಬೇಕಿದೆ
ಓದುವ ,ಓಡುವ, ಹಾಡುವ, ಹಾರುವ ಸ್ವಾತಂತ್ರ್ಯ.
ಅಬಲೆಯ ಹೆಣ್ಣಿನ ಜೀವನಕೀಗ ಬೇಕಿದೆ
ಆರ್ಥಿಕ ಭದ್ರತೆ, ಜೀವ ಸುರಕ್ಷತೆಯ ಸ್ವಾತಂತ್ರ್ಯ.
ಮುಪ್ಪಿನ ಹಿರಿಯ ಜೀವಗಳಿಗಂತೂ ಬೇಕಿದೆ
ಸಾಮಾಜಿಕ ಸುರಕ್ಷತೆಯ ನೆಮ್ಮದಿ ಸ್ವಾತಂತ್ರ್ಯ. |೧೪|

ಬೇಯುತಿಹ ಬಿಸಿ ಭುವಿಗೆ ಬೇಕಿದೆ
ಹಸುರಿನ ಹೊದಿಕೆಯ ಸ್ವಾತಂತ್ರ್ಯ.
ಭಯ-ಭೀತಿಯಲ್ಲಿಯೆ ಬದುಕುವ ಮನಗಳಿಗೆ
ಬೇಕಿದೆ ಭರವಸೆಯ ಬೆಳಕಿನ ಸ್ವಾತಂತ್ರ್ಯ.
ಪುರಾಣ ಧರ್ಮದ ಜಿಡ್ಡಿಗೆ ಬೇಕಿದೆ
ಮಾನವ ಧರ್ಮವ ಉಗಮದ ಸ್ವಾತಂತ್ರ್ಯ.
ನಾನೇ ನಾನು , ಎಂಬ ಅಳಿವಿಗೆ ಬೇಕಿದೆ
ನಾವೆಲ್ಲರೂ ಒಂದೇ, ಭಾರತೀಯರೆಂಬುವ ಸ್ವಾತಂತ್ರ್ಯ. |೧೫|

ಬೆಳೆಯಲುಬಹುದು, ಮುಂದುವರೆಯಲುಬಹುದು
ಶತಮಾನದತ್ತಲಿ ನಮ್ಮೀ ಸ್ವಾತಂತ್ರ್ಯ.
ನಿತ್ಯ ನಿರಂತರ ಬದಲಾವಣೆಗೆ ಬೇಕಿದೆ
ಕ್ರಾಂತಿಯ ಕಿಚ್ಚಿನ ಸ್ವಾತಂತ್ರ್ಯ.


 ರೋಹಿತ್ ಜಿ                       
ಸ್ವತಂತ್ರ ಭಾರತದ ಸ್ವತಂತ್ರಾಕಾಂಕ್ಷಿ

ಸರ್ವ ಭಾರತದ , ಭಾರತೀಯ ಬಾಂಧವರಿಗೆ
೭೫ನೇ ವಜ್ರಮಹೋತ್ಸವ "ಸ್ವಾತಂತ್ರ್ಯ ದಿನದ" ಶುಭಾಷಯಗಳು.
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
# ಸ್ವಾತಂತ್ರ್ಯ ದಿನಾಚರಣೆ
#ಅಮೃತ ಮಹೋತ್ಸವ @೨೦೨೧

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...