ನನ್ನಪ್ಪ
ಉಳ್ಳವರು ಬರೆಯುವರು
ಇಲ್ಲದವನು ನಾನೇನ ಬರೆಯಲಿ?
ಅಪ್ಪನೆಂಬುದು ನೆಪ್ಪು
ಕಾಪಿಟ್ಟುಕೊಂಡಿರುವ
ನೆನಪುಗಳೇ ನನಗೆ ಅಪ್ಪ
ಆದರೂ ಬರೆಯುವೆ
ನೋವ ಕಳೆಯುವೆ
ಜಗದ ಪರಿವೆ ಮರೆತು
ಹಾಡುವೆ ಅಪ್ಪನ ನೆನೆದು
ದಿನವೂ ಪ್ರತಿದಿನವೂ
ಜನ್ಮವೂ ಪ್ರತಿಜನ್ಮವು
ಇಲ್ಲದ ಭಾವ
ಬಲಿಸಿದ ಜೀವ
ಎತ್ತ ನೋಡಿದರೂ
ಅದೇ ಮುಖ, ಅದೇ ಸದ್ಧು
ಅದೇ ಚಹರೆ ಅದೇ ಪಹರೆ
ಅದೇ ರೂಪ, ಅದೇ ಕೋಪ
ಬಡವ ಕಣ್ರೀ ನನ್ನಪ್ಪ
ಮದ್ಯಪ್ರಿಯ, ಶೋಕ ವ್ಯಯ
ಲೋಕೋಪಚಾರಿ ನನ್ನಪ್ಪ
ಅಪ್ಪನಾಗುವುದೆಂದರೆ
ಸುಲಭವೇನು? ಮಕ್ಕಳಾದ ಹಾಗೆ!
ಗಾಯಗಳಿಗೆ ಸಾರಾಯಿ
ಕುಡಿವ ವೈದ್ಯ ನನ್ನಪ್ಪ
ಕಳ್ಳ ಮೋಸ ಮಾಡಿದ ಪಾಪವ
ಅಮಲಿನಲ್ಲೇ ಒಪ್ಪಿಕೊಳ್ಳುವ
ಪೋಲೀಸು ನನ್ನಪ್ಪ
ಹೆಗಲ ಮೇಲೆ ಹೊತ್ತು
ಊರ ಸುತ್ತಿಸಿ, ಜಗವ ತೋರಿದ
ಮಹಾಗುರು ನನ್ನಪ್ಪ
ಹರಿದ ಬಟ್ಟೆಗೆ ತ್ಯಾಪೆ ಹಾಕಿ
ವರ್ಷ ಕಳೆದವನೇ ನನ್ನಪ್ಪ
ಯಾರಿಗೆ ಹೇಳಲಿ ಶುಭಾಷಯ
ಇಲ್ಲದ ಅಪ್ಪನ ನೆನೆದು?
ನಾನೇ ಈಗ ಅಪ್ಪನ ರೂಪ
ಎಂದು ತಿಳಿದು
ನುಂಗುವೆ ಗಂಟಲಲ್ಲೇ
ಶುಭಾಷಯ
ಇದು ನೋವನು ಮರೆವ ಪರಿ
ಅಪ್ಪ ನನ್ನನ್ನು ಕಾಡುವ ಪರಿ!
- ಅನಂತ ಕುಣಿಗಲ್
ದೇಹಕ್ಕೆ ಅಳಿವುಂಟು, ಆತ್ಮಕ್ಕೆ ಅಲ್ಲ! ಇದ್ದಾಗ ಅಪ್ಪ ಕೇವಲ ಅಪ್ಪ, ಈಗ ಆವರೆ ದೈವಾತ್ಮ. ನೆನೆದು ಪೂಜೋಣ, ಜೊತೆಯಲ್ಲೇ ಜೀವಿಸೋಣ. ಮರುಗುವುದು ಬೇಡ. ಕೊರಗುವುದಂತೂ ಸಲ್ಲ.
ಪ್ರತ್ಯುತ್ತರಅಳಿಸಿಒಬ್ಬೊಬ್ಬರಿಗೆ ಒಂದೊಂದು ಭಾವ
ಪ್ರತ್ಯುತ್ತರಅಳಿಸಿಚೆನ್ನಾಗಿದೆ
💓ಚಂದ ಬರ್ದಿದ್ದೀರಿ!
ಪ್ರತ್ಯುತ್ತರಅಳಿಸಿ