ನಿಜ ಪರಿಸರ ಪ್ರೇಮಿ : ಸೊಲ್ಲಾಪುರದ ವೀರೇಶ್ವರ ಶರಣರು
ಮೂಡಣದಲ್ಲಿ ರವಿ ಆಗಮಿಸಿ ಬಾನಂಗಳದ ತುಂಬ ಬಂಗಾರ ಬಣ್ಣದ ರಂಗವಲ್ಲಿಯನ್ನು ಬರೆದಿದ್ದನು. ಇದನ್ನು ಕಂಡ ಹಕ್ಕಿಗಳು ಸಂತಸದಿಂದ ಚಿಲಿ ಪಿಲಿ ಸುಪ್ರಭಾತ ಹಾಡತೊಡಗಿದವು. ಹಕ್ಕಿಗಳ ಈ ಕಲರವ ಕೇಳಿ ರವಿ ಬಂದನೆಂದರಿತ ಮೊಗ್ಗುಗಳೆಲ್ಲ ಕೂಡ ರಂಗವಲ್ಲಿ ನೋಡುವ ಕುತೂಹಲ ತಡೆಯದೆ ಕಣ್ಣು ತೆರೆದೇ ಬಿಟ್ಟವು. ಕೆಲವು ಹೂಗಳು ಆನಂದದ ಭಾರ ತಡೆಯಲಾಗದೆ ಧರೆಗುರುಳುತ್ತಿದ್ದವು.
ಗಿಡದಿಂದ ಉದುರಿದ ಹೂಗಳು ನೆಲದ ಮೇಲೆ ರಂಗವಲ್ಲಿಯನ್ನೊಮ್ಮೆ ಹಾಗೂ ಬಾನಂಗಳದ ರಂಗವಲ್ಲಿಯನ್ನೊಮ್ಮೆ ಕಣ್ಣು ತುಂಬ ನೋಡುತ್ತ ಶರಣರೊಬ್ಬರು ನಿಂತಿದ್ದರು. ಒಂದು ಕ್ಷಣ ಕಣ್ಣು ಮುಚ್ಚಿ ಕೈ ಮುಗಿದರು. ನಂತರ ಕಣ್ಣು ತೆರೆದು ಮತ್ತೆ ನೆಲದತ್ತ ನೋಡತೊಡಗಿದರು. ಕೆಳಗೆ ಬಿದ್ದ ಹೂಗಳನ್ನು ಆಯ್ದುಕೊಳ್ಳತೊಡಗಿದರು.
ಅದೇ ಮಾರ್ಗದಿಂದ ಹೊರಟಿದ್ದ ಯುವಕನೊಬ್ಬ ಇದನ್ನು ನೋಡಿದ. ಅವಸರದಿಂದ ಅವರ ಹತ್ತಿರ ಓಡಿದ.
"ಪೂಜ್ಯರೆ, ಈ ಬಿದ್ದ ಹೂಗಳನ್ನು ನೀವೇಕೆ ತೆಗೆಯುತ್ತಿರುವಿರಿ? ನಾನು ಈಗಲೇ ಕಸಗುಡಿಸುತ್ತೇನೆ ತಡೆಯಿರಿ." ಎಂದ.
"ಇಲ್ಲಪ್ಪ, ನಾನು ಇಷ್ಟಲಿಂಗ ಪೂಜೆಗಾಗಿ ಈ ಹೂಗಳನ್ನು ಆಯ್ದುಕೊಳ್ಳುತ್ತಿರುವೆ." ಎಂದರು.
"ಪೂಜೆಗಾಗಿ ಬಿದ್ದ ಹೂಗಳನ್ನೇಕೆ ಆಯ್ದುಕೊಳ್ಳುತ್ತಿರುವಿರಿ. ಸ್ವಲ್ಪ ತಡೆಯಿರಿ. ನಾನು ತಮಗೆ ಒಂದು ನಿಮಿಷದಲ್ಲಿ ಒಂದು ಬುಟ್ಟಿ ಹೂಗಳನ್ನು ತೆಗೆದುಕೊಡುವೆ" ಎನ್ನುತ್ತ ಅವರ ಕೈಯಲ್ಲಿ ಇರುವ ಪಾತ್ರೆಯತ್ತ ಕೈ ಮಾಡಿದ.
"ಬೇಡಪ್ಪಾ, ನಾನು ಗಿಡದಲ್ಲಿರುವ ಹೂಗಳನ್ನು ಕುಡಿಯುವುದಿಲ್ಲ. ಹೂಗಳನ್ನು ಅದರ ತಾಯಿಯಿಂದ ಬೇರ್ಪಡಿಸುವುದು ನನಗೆ ಇಷ್ಟವಾಗುವುದಿಲ್ಲ. ಹೂಗಳನ್ನು ಕೀಳುವುದರಿಂದ ವನಸ್ಪತಿಗಳಿಗೂ ನೋವು ಆಗಬಹುದು. ನೋವು ಮಾಡಿ ತಂದ ಹೂವಿನಿಂದ ಪೂಜೆ ಮಾಡಿದರೆ ಅದು ಇಷ್ಟಲಿಂಗ ದೇವರಿಗೂ ಇಷ್ಟವಾಗಲಿಕ್ಕಿಲ್ಲ." ಎನ್ನುತ್ತ ಮತ್ತೆ ಬಿದ್ದ ಹೂಗಳನ್ನು ಆಯ್ದುಕೊಳ್ಳತೊಡಗಿದರು.
"೧೨ ನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರು 'ದಯೆ ಬೇಕು ಸಕಲ ಪ್ರಾಣಿಗಳಲ್ಲಿ' ಎಂದು ಹೇಳಿದ್ದರು. ಇಂದು ೨೦ ನೆಯ ಶತಮಾನದಲ್ಲಿಯೂ ವನಸ್ಪತಿಗಳ ಮೇಲೂ ದಯೆ ತೋರುವ ದಯಾನಿಧಿ ನಾಲ್ವತವಾಡದ ಶ್ರೀ ವೀರೇಶ್ವರ ಶರಣರು ನಮ್ಮ ಸೊಲ್ಲಾಪುರದದಲ್ಲಿ ನಮ್ಮ ಪುಣ್ಯ" ಎನ್ನುತ್ತಿದ್ದಂತೆಯೇ ಆ ಯುವಕನ ಕೈಗಳು ತಾನಾಗಿಯೇ ಜೋಡಿಸಲ್ಪಟ್ಟವು.
ಈ ಸುದ್ದಿಯನ್ನು ನಾನು ನಾಡಿಗೆಲ್ಲ ತಿಳಿಸುವೆ ಎಂದು ಮಾರುತದೇವ ಭರ್ರನೆ ತನ್ನ ಪಯಣ ಆರಂಭಿಸಿದ. ಸೂಕ್ಷ್ಮ ಸಂವೇದಿ ಶರಣರ ವರ್ತನೆಗೆ ಹೂವಿನ ಗಿಡಕ್ಕೂ ಅಳು ಉಕ್ಕಿ ಬಂತೋ ಏನೋ.. ಬಾಗಿ ಹೂಗಳನ್ನು ಆಯುತ್ತಿರುವ ಶ್ರೀ ವೀರೇಶ್ವರ ಶರಣರ ಮೇಲೆ ಹೂಗಳ ಮಳೆ ಸುರಿಯತೊಡಗಿತು.
- ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ, ಮಹಾರಾಷ್ಟ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ