ಮೂರು ರಾತ್ರಿಯಲ್ಲಿ ಮೂರು ಬಾರಿ ಓದಿ, ಇನ್ನೂ ಓದಬೇಕೆನಿಸುವ ಕೃತಿ ಅನಂತ ಕುಣಿಗಲ್ ಅವರ 'ಮೂರನೆಯವಳು'.
"ಮೂರನೆಯವಳು" ಯುವ ಬರಹಗಾರ ಅನಂತ ಅವರು ಇತ್ತೀಚೆಗೆ ಪ್ರಕಟಿಸಿದ ಕವನ ಸಂಕಲನದ ಹೆಸರು. ಯಾವುದೇ ಪುಸ್ತಕವನ್ನಾದರೂ ಬಹಳ ತದೇಕಚಿತ್ತದಿಂದ ಮನಸ್ಸನ್ನು ಅತ್ತಿತ್ತ ಹರಿಯ ಬಿಡದೆ ಒಂದೇ ಗುಕ್ಕಿಗೆ ಓದಿ ಮುಗಿಸಿ ಗೆಳೆಯರೊಂದಿಗೆ ಹಂಚಿಕೊಳ್ಳುವ ನಾನು "ಮೂರನೆಯವಳು" ಪುಸ್ತಕವನ್ನು ಮೂರು ರಾತ್ರಿಗಳಲ್ಲಿ ಮೂರು ಬಾರಿ ಓದಿ ಮುಗಿಸಿದೆ. ಅವಕಾಶ ಸಿಕ್ಕಿದರೆ ಮತ್ತೂ ಓದುವೆ. "ಮೂರನೆಯವಳು" ಪುಸ್ತಕದ ತೊಂಬತ್ತೆರಡು ಪುಟಗಳ ಪ್ರತೀ ಕವಿತೆಗಳೊಂದಿಗೆ ಬೆರೆತು ಹೋಗಿ ಪಳಗಿದ ನನಗೆ ಈ ಕ್ಷಣಕ್ಕೂ ಹಾಳೆ ಹರವಿಕೊಂಡು ಅನಿಸಿಕೆ ಬರೆಯಲು ಮನಸ್ಸಾಗುತ್ತಿಲ್ಲ. ಎಲ್ಲಿ ನನ್ನ ಅನಿಸಿಕೆ ಅಂತಹ ಉತ್ತಮ ಕೃತಿಯ ಮುಂದೆ ಬಾಲಿಶವೆನಿಸಿ ಬಿಡುತ್ತದೆಯೋ ಎಂಬ ಸಣ್ಣ ಅಳುಕು. ಆದರೆ ಇನ್ನೂ ನಾನು ತಡ ಮಾಡಿದರೆ ಓದುಗ ದೊರೆಗಳಿಗೆ ಆ ಪುಸ್ತಕ ಎಟುಕದೆ ಹೋಗುತ್ತದೆ ಎಂಬ ಭಾವನೆಯಲ್ಲಿ ಈ ನನ್ನ ಅನಿಸಿಕೆ ಅಥವಾ ವಿಮರ್ಶಾತ್ಮಕ ಲೇಖನವನ್ನು ಬಿಚ್ಚಿಡುತ್ತಿದ್ದೇನೆ.
ವರುಷದ ಹಿಂದೆಯಷ್ಟೆ "ಋಣಭಾರ" ಎಂಬ ಕಥಾ ಸಂಕಲನವನ್ನು ಪ್ರಕಟಿಸಿ ಸದ್ದಿಲ್ಲದೆ ಸುದ್ದಿಯಾದ ಅನಂತ ಅವರು "ಮೂರನೆಯವಳು" ಕವನ ಸಂಕಲನವನ್ನು ಹೊರ ತಂದು ನಾನು ಕಥೆಗಾರ ಮಾತ್ರವಲ್ಲ ಕವಿಯೂ ಹೌದು ಎಂದು ಸಾಬೀತು ಪಡಿಸಿದ್ದಾರೆ. ಮತ್ತು ಪದಗಳೊಂದಿಗೆ ಸರಸವಾಡುವವನು ಮಾತ್ರ ಕವಿ ಎಂಬುದನ್ನು ಅವರ ಕವಿತೆಗಳ ಮೂಲಕ ಓದುಗ ದೊರೆಗಳಿಗೆ ತಿಳಿಸಿಕೊಟ್ಟಿದ್ದಾರೆ. ಹಡೆದ ತಾಯಿ ಮತ್ತು ಸಮಾಜದ ಸ್ತ್ರೀ ಕುಲಕ್ಕೆ ಅರ್ಪಿತವಾಗಿರುವ ಈ ಕೃತಿಗೆ ವಾಸುದೇವ ನಾಡಿಗ್ ಅವರು ಮುನ್ನುಡಿ ಬರೆದು ಅದರ ತೂಕವನ್ನು ಹೆಚ್ಚಿಸಿದ್ದಾರೆ. ಇಂತಹ ಉತ್ಕೃಷ್ಟ ಪುಸ್ತಕವನ್ನು ಪ್ರಕಟಿಸುವುದರ ಮೂಲಕ "ಅವ್ವಾ" ಪುಸ್ತಕಾಲಯವು ಕೂಡ ಒಂದು ಹೆಜ್ಜೆ ಮುಂದೆ ಹೋಗಿದೆ. ಮೂರನೆಯವಳು, ನನ್ನವಳು, ಅದೇ ರಾಗ ಅದೇ ಹಾಡು, ಹೆಣ್ಣೆಂದರೆ ಅಷ್ಟೇ ಸಾಕೆ?, ನೀ ಎಲ್ಲವನ್ನೂ ಮರೆತೆಯಾ, ಎಂಬ ಐದು ಭಾಗಗಳಲ್ಲಿ ಕವಿ ತನ್ನ ಕವಿತೆಗಳ ರಸದೌತಣವನ್ನು ಬಡಿಸಿದ್ದಾರೆ. ಅಮ್ಮ, ಪ್ರೀತಿ, ಪ್ರೇಮ, ಹಸಿವು, ಸಮಾಜದ ವಾಸ್ತವದ ಸತ್ಯ ಸಂಗತಿಗಳೊಂದಿಗೆ ಆತುಕೊಂಡಿರುವ ಅನಂತ ಅವರ ಕವಿತೆಗಳು ಓದುಗನ ಅನತಿ ದೂರದಲ್ಲಿಯೇ ಜನ್ಮ ತಾಳಿದೆಯೇನೊ ಎಂಬಂತೆ ಭಾಸವಾಗುತ್ತದೆ. ಅಂದರೆ ಒಂದಷ್ಟು ಕವಿತೆಗಳು ಓದುಗನ ಅನುಭವ ಮತ್ತು ಆತನ ಬದುಕನ್ನೇ ಚಿತ್ರಿಸಿದಂತೆ, ಕ್ಲಿಷ್ಟ ಪದಗಳ ಬಳಕೆ ಮಾಡದೆ ಮತ್ತು ಪ್ರಾಸಕ್ಕೆ ದುಂಬಾಲು ಬೀಳದೆ ಸರಳಗನ್ನಡದಲ್ಲಿ ಹೆಣೆಯುತ್ತಾ ಹೋಗಿದ್ದಾರೆ.
"ಇರುವುದು ಎರಡೇ ಕಣ್ಣು,
ಒಂದು ಗಂಡು ಇನ್ನೊಂದು ಹೆಣ್ಣು
ಆದರೆ...
ಮೂರನೆಯವಳು ಕಾಣುವುದು ಮಾತ್ರ
ಎರಡು ಕಣ್ಣುಗಳನ್ನು ತಿಂದುಕೊಂಡವರಿಗೆ "
ಎಂಬ ಸಾಲುಗಳ ಮೂಲಕ ಪ್ರಾರಂಭದಲ್ಲಿಯೇ ಒಂದು ರೋಚಕ ತಿರುವನ್ನು ನೀಡಿದ್ದಾರೆ. ಮುಂದೆ ಪೆಟ್ಟು, ಕಟ್ಟು, ಮುಟ್ಟು, ತವಕ ಹೀಗೆ ಹಲವಾರು ಶೀರ್ಷಿಕೆಯೊಂದಿಗೆ ಆರ್ದಗೊಂಡಿರುವ ಹೆಣ್ಣಿನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಸ್ವತಃ ಕವಿಯೇ ಹೆಣ್ಣಾಗಿ ಬರೆದಿದ್ದಾರೆ. ಕೆಲ ಕವಿತೆಗಳಲ್ಲಿ ಕವಿಯು ಕಾಮೋನ್ಮಾದ ಪರಾಕಾಷ್ಠೆಯಲ್ಲಿ ಮಿಂದಿರುವಂತೆ ಕಂಡರೂ ಕೊನೆಯ ಸಾಲುಗಳ ಮೂಲಕ ಅರಿವಿನ ಪಾಠ ಹೇಳಿದ್ದಾರೆ. ಖಿನ್ನತೆಯ ಚಾದರ ಹೊದ್ದುಕೊಂಡವರಿಗೆ ಕೆಲ ಕವಿತೆಗಳು ಸ್ಫೂರ್ತಿ ತುಂಬಿವೆ. ಲವಲೇಶವೂ ಉತ್ಪ್ರೇಕ್ಷೆ ಎನಿಸದೆ ವಾಸ್ತವದ ಚಿತ್ರಣಗಳನ್ನು ಕಣ್ಣ ಮುಂದೆ ತಂದಿಟ್ಟಿರುವ ಕವಿಯ ಪ್ರಾಮಾಣಿಕ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಹಲವೆಡೆ ಸನ್ನಿವೇಶಗಳನ್ನು ಸೃಷ್ಟಿ ಮಾಡುವಲ್ಲಿ ಕವಿಯು ಹೋಲಿಕೆಯಾಗದ ಪದಗಳನ್ನು ಬಳಸಿ ಎಡವಿದ್ದಾರಾದರೂ ಮುಂದೆ ಬಲಿಷ್ಠರಾಗುತ್ತಾ ಹೋಗಿದ್ದಾರೆ. ಹಾಗು ಒಂದೆರಡು ಕವಿತೆಗಳಲ್ಲಿ ಅಕ್ಷರ ದೋಷಗಳಾಗಿ, ಕವಿಗೆ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದೆನಿಸುತ್ತದೆ. ರಸದಲ್ಲಿ ಕಸ ಹುಡುಕುವುದು ಬೇಡವೆಂಬ ನಿರ್ಧಾರಕ್ಕೆ ಓದುಗರು ಬಂದರೂ ಬರಬಹುದು.
"ಹೊಳೆದಂಡೆ ಮೇಲಣ
ಕರಿಬಂಡೆ ಕೆಳಗಣ
ಕಪ್ಪಂಚಿನ ನೆರಳಿನ ತುದಿಯಲ್ಲಿ
ಕೆರೆ ನೀರಿನ ಹಿತ
ತಂಪು ಗಾಳಿಯ ಮೊರೆತ
ಬಂಡೆ ನೆರಳಿನ ತಂತ್ರಗಳೆಲ್ಲವೂ ಸಜ್ಜಾಗಿವೆ
ಮೈದೊಗಲುಗಳ ಸಮಾಗಮಕ್ಕೆ ಕಣ್ಣಾಗಲು "
ಸಮ್ಮಿಲನ ಶೀರ್ಷಿಕೆ ಹೊಂದಿರುವ ಈ ಕವಿತೆಯ ಮೊದಲ ಏಳು ಸಾಲುಗಳು ಒಂದು ಕ್ಷಣ ನನ್ನನ್ನು ಸೆಳೆಯಿತು. ಒಂದಷ್ಟು ಪದ ಪ್ರಯೋಗಗಳು ಹೆಣ್ಣು ಮಕ್ಕಳನ್ನು ಕಮ್ಮಗೆ ನಾಚುವಂತೆ ಮಾಡಿದರೂ ಇನ್ನೊಂದಷ್ಟು ಪದಗಳು ಬಿಕ್ಕುವಂತೆಯೂ ಮಾಡಿದೆ. ಒಟ್ಟಾರೆ ಮೊದಲ ಪ್ರಯತ್ನದಲ್ಲಿಯೇ ಅದ್ಬುತ ಯಶಸ್ಸು ಕಂಡ ಅನಂತ ಅವರಿಗೆ ಅಭಿನಂದನೆಗಳು. ಗೋಪಾಲಕೃಷ್ಣ ಅಡಿಗ, ಡಾ. ಎಚ್.ಎಸ್ ವೆಂಕಟೇಶಮೂರ್ತಿ, ನಿಸಾರ್ ಅಹಮದ್, ಸುಬ್ರಾಯ ಚೊಕ್ಕಾಡಿ, ಬಿ.ಆರ್.ಎಲ್ ಹೀಗೆ ಹಲವಾರು ಹಳೆ ತಲೆಮಾರಿನ ಖ್ಯಾತ ಕವಿಗಳ ಕವಿತೆಗಳನ್ನು ಓದಿದರೆ ಅನಂತ ರವರ ಕಾವ್ಯದ ಶಕ್ತಿ ಮತ್ತಷ್ಟು ಹೆಚ್ಚುತ್ತದೆ ಎಂಬ ಸಲಹೆಯೊಂದಿಗೆ ಅವರಿಂದ ಮತ್ತಷ್ಟು ಪುಸ್ತಕಗಳು ಪ್ರಕಟವಾಗಲಿ ಎಂದು ಆಶಿಸುತ್ತೇನೆ. ಕೊನೆಯದಾಗಿ ಅವರ "ಮೂರನೆಯವಳು" ಕೃತಿಗೆ ಶಿರಸಾವಹಿಸಿ ಪ್ರಣಾಮಿಸುವೆ.
- ದೀಕ್ಷಿತ್ ನಾಯರ್
(ಯುವ ಲೇಖಕ, ಮಂಡ್ಯ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ