ಪ್ರೀತಿ, ಪ್ರೇಮ ಹಾಗೂ ಬ್ರೇಕಪ್ ಗಳು
(ಅವರಿಬ್ಬರೂ ಪ್ರೀತಿಸುತ್ತಿದ್ದರು ಆದರೆ..)
ಪಕ್ಕದ ಮನೆಯ ಹುಡುಗ, ಕಾಲೇಜ್ ಎಂಬ ಬಣ್ಣದ ಗೂಡಿಗೆ ಕಾಲಿಟ್ಟು ಸ್ವಲ್ಪ ದಿನ ಕಳೆದಿದ್ದವು. ಮೊದ ಮೊದಲು ಸರಿಯಾಗೇ ಇದ್ದ ಆದರೆ ಕೆಲ ದಿನಗಳಿಂದ ಬದಲಾಗಿದ್ದಾನೆ. ಅವನು ಮರೆತಿದ್ದಾನೆ ಅವನಪ್ಪ ಅವನನ್ನ ಸೈಕಲ್ ಕಂಬಿಯ ಮೇಲೆ ಟವಲ್ ಹಾಸಿ ಮೇಲೆ ಮಗನನ್ನು ಕೂರಿಸಿ ಬೀಳ್ತಾನೆ ಅಂತ ಅಪ್ಪ ಅದೆಷ್ಟು ದೂರ ಸೈಕಲ್ ತಳ್ಳಿದ್ದು, ಇವನ ಕೂದಲಿಗೆ ಕತ್ತರಿ ಇಟ್ಟಾಗ ಕಣ್ಣೀರು, ಗೊಣ್ಣೆ ಒಂದಾಗಿ ಬಂದಾಗ ಅವನಪ್ಪ ಅದೆಷ್ಟು ಸಲ ಸ್ವಚ್ಚಮಾಡಿದ್ದ. ಕ್ರಾಪು ಬಾಚಿ ತಲೆಯನ್ನು ಹಿಡಿದು ಗಲ್ಲ ಹಿಡಿದ ಅವನ ಅಮ್ಮ ತಲೆ ಕೂದಲು ಬಾಚುವುದೇ ಪೌಡರ್ ಹಚ್ಚಿ, ಸಣ್ಣಗೆ ಮುತ್ತಿಟ್ಟು ಬ್ಯಾಗಿಗೆ ತಿನ್ನಲು ಇಟ್ಟು ಕಳಿಸುತ್ತಿದ್ದಳಲ್ಲ ಆ ನೆನಪುಗಳೆಲ್ಲ ಇವನ ತಲೆ ಇಂದ ಎಣಿಸಲಾಗದಷ್ಟು ಕಿಲೋಮೀಟರ್ ದೂರ ಸಾಗಿದೆ.
ಕೆಲದಿನಗಳಿಂದ ಕಿವಿಯಲ್ಲಿನ ಫೋನು ತೆಗೆಯುತ್ತಿರಲಿಲ್ಲ, ಸಣ್ಣಗೆ ಮುಗುಳು ನಗುತ್ತ ತನ್ನ ಇಡೀಯ ದಿನದ ಎಲ್ಲ ವಿಚಾರವನ್ನು ತನ್ನದೇ ಇನ್ನೊಂದು ಜೀವ ಆಕಡೆ ಇದೆ ಎಂಬಂತೆ ಎಲ್ಲವನ್ನೂ ಹೇಳುತ್ತಿದ್ದ. ಮಾತನಾಡುವಾಗೆಲ್ಲ ಆತನ ಮುಖದಲ್ಲಿ ಪ್ರಪಂಚವನ್ನೇ ಗೆದ್ದಷ್ಟು ಸಂತೋಷವಿತ್ತು. ಅದೆಷ್ಟು ಮಾತುಗಳು ?ಈ ಇಬ್ಬರ ನಡುವೆ ಅದೆಷ್ಟು ಕನಸುಗಳ ಬಗ್ಗೆ ಚರ್ಚೆ ? ಪ್ರೀತಿ ಎಂದರೆ ಇದೇನಾ ? ಎಲ್ಲ ವಿಷಯವನ್ನು ಇಬ್ಬರೂ ಹಂಚಿಕೊಳ್ಳುವುದಾ, ಇವರಿಬ್ಬರನ್ನು ಯಾರೂ ದೂರ ಮಾಡಲಾರರು ಎಂಬ ಗಟ್ಟಿಯಾದ ಭಾವ ನೋಡಿದವರಲ್ಲಿ ಬರುತ್ತಿತ್ತು. ಪ್ರತಿ ದಿನ ಇಳಿ ಸಂಜೆಯ ಪೋನಿನ ಮಾತುಗಳಿಗೆ ಸಾಕ್ಷಿಯಾಗುತ್ತಿದ್ದು, ಕೊನೆಯುಳಿರು ಎಳೆಯಲು ಹಾತೊರೆಯುತ್ತಿದ್ದ ಬೀದಿ ದೀಪ. ನಂಬರ್ ಅಳಿಸಿದ್ದ ಮೈಲಿಗಲ್ಲು. ಓಡೆಯನ ದಿಕ್ಕಿಲ್ಲದ ಬೀದಿ ನಾಯಿಗಳು ಮಾತ್ರ.
ಆದರೆ ಕೆಲ ದಿನಗಳಿಂದ ಹುಡುಗ ಸಂಜೆಗತ್ತಲಿನಲ್ಲಿ ಓಡಾಡುತ್ತಿರಲಿಲ್ಲ. ಕೆಲ ದಿನಗಳ ನಂತರ ತಿಳಿದಿದ್ದು ಅವನದ್ದು ಬ್ರೇಕಪ್ ಆಯ್ತಂತೆ. ಹಾಗಂದರೇ ಏನೂ, ಅಷ್ಟು ಮಾತಾಡಿದ, ಅಷ್ಟೊಂದು ಒಬ್ಬರನ್ನು ಅರಿತು ಕೊಂಡ ಮೇಲೂ. ಹೀಗೆ ಆಗಬಹುದಾ ಇವರ ಜೋಡಿ ನಗರದ ಯಾವ ರಸ್ತೆಯನ್ನು ಬಿಡದೆ, ಕೈ ಹಿಡಿದು ಸುತ್ತಿದ,ನಗರದ ಬಹತೇಕ ಕಟ್ಟಡಗಳಿಗೆ, ಮಾಲ್ ಗಳಿಗೆ, ಸಿನಿಮಾ ಮಂದಿರಗಳಿಗೆ, ಪಾರ್ಕ್ ಗಳಿಗೆ, ಹಲವು ರಸ್ತೆಗಳಿಗೆ ಇವರ ಹೆಜ್ಜೆಗುರುತಿನ ಪರಿಚಯವಿತ್ತು.ಕೈ ಹಿಡಿದು ಹೋರಟರೆ ಕೈಯ ರೇಖೆಗಳು ಮಾಸುವಷ್ಟು ಬಿಗಿ ಹಿಡಿದಿದ್ದರು ಬ್ರೇಕಪ್ ಆಗುತ್ತಾ, ಇವರಿಬ್ಬರು ಅದೆಷ್ಟು ಬಾರಿ ಜೊತೆಗೆ ಕೂತು ಟೀ ಲೋಟಕ್ಕೆ ತುಟ್ಟಿ ಹಚ್ಚಿದ್ದರು, ಫೋಟೊಗಳಿಗೆ ನಿಂತರೆ ಮುಗೀತು ಇಬ್ಬರ ನಡುವೆ ಹೋಗಲು ಗಾಳಿಯೂ ಕೂಡ ಗುದ್ದಾಡಬೇಕಿತ್ತು.
ಪ್ರೀತಿಯಲ್ಲಿ ಬಿದ್ದ ಗಂಡುಹೆಣ್ಣು ಲೋಕ ಮರೆಯುತ್ತಾರೆ, ಪ್ರೀತಿ ಮಾಡುವ ಚಾಳಿ ಇಬ್ಬರಿಗೂ ಶುರುವಾದ ಮೇಲೆ ಮುಗೀತು. ನೀ ನಿಲ್ಲದೇ ನಾ ಇಲ್ಲ ಇಂತ ಅನೇಕ ಡೈಲಾಗ್ ಗಳು ಬರದೇ ಪ್ರೀತಿ ಸಾಧ್ಯವಾ. ಸದಾ ಜೊತೆಗೆ ಇರಬೇಕೆಂಬ ಹಂಬಲ ಇಬ್ಬರಿಗೂ ಇದ್ದೇ ಇರುತ್ತದೆ. ಪ್ರೀತಿ ಪೋನಿನ ಬಳಿ ಬಂದರೆ ಮುಗೀತು ಇವರ ಗುಡ್ ಮಾರ್ನಿಂಗ್ ಗುಡ್ ನೈಟ್ ಗಳು ನೆಟ್ವರ್ಕ್ ಅನ್ನೇ ನಾಚಿಸುವಂತೆ ಬಂದು ಹೋಗುತ್ತಿದ ಹೃದಯದ, ಗುಲಾಬಿ ಹೂಗಳು, ಮುತ್ತಿಡುವ ಗೊಂಬೆಗಳಿಗೇನು ಬರವೇ ಹೀಗೆ ಇತ್ಯಾದಿ ಇತ್ಯಾದಿಗಳಿಗೆ ಸಾಕ್ಷಿಯಾದದ್ದು ಅವರಿಬ್ಬರ ಪೋನುಗಳು ಮಾತ್ರ...
ಇಷ್ಟೆಲ್ಲ ನಡೆದ ಮೇಲೆ ಬ್ರೇಕಪ್ ಹೇಗೆ??ಅಲ್ವ. ಇಬ್ಬರ ನಡುವೆ ಬಲವಾಗಿ ಇದ್ದ ಪ್ರೀತಿಯ ಮಧ್ಯೆ ಏನಾಯ್ತು? ಏಕೆ ದೂರಾದರೂ. ಸಿಡಿಲಿನಷ್ಟೇ ವೇಗವಾಗಿ ಇಬ್ಬರ ನಡೆವೆ ಸಂಭಾಷನೆ ನಡೆಯುತ್ತಿತ್ತು. ನೂರಾರು ಮೆಸೆಜ್ಗಳು ಕಣ್ಣು ಮಿಟುಕಿಸುವ ವೇಳೆಗೆ ಎದೆಗೂಡನ್ನು ಹೊಕ್ಕುತ್ತಿದ್ದವು. ಇದೇ ವೇಗ ಇವರ ಪ್ರೀತಿಗೆ ಮುಳುವಾಯ್ತಾ .ಹೌದು, ಹಿಂದೆ ಪತ್ರಗಳ ಕಾಲದಲ್ಲಿ ಪ್ರೀತಿ ಪ್ರೇಮಗಳಿಗೆ ಬರವೇ, ಆಗಲೂ ಇತ್ತು ಅಲ್ಲಿ ಕಾಯುವ ವಾರ, ತಿಂಗಳುಗಳು ಕಾದು ಪಡೆಯುತಿದ್ದ ಪತ್ರಗಳಿಗೆ ಅದೆಷ್ಟು ತಾಕತ್ತು ಇತ್ತು. ಇಬ್ಬರಿಗೂ ಧೈರ್ಯ ಸಂತೋಷ ಪಡಿಸಲಿಕ್ಕೆ ಅಲ್ಲಿ ಇರುತಿದ್ದದ್ದು ಕೆಲವೇ ಸಾಲು ,ಬೆಟ್ಟದಷ್ಟು ನಂಬಿಕೆ. ಈಗ ಹಾಗಿಲ್ಲ ಬಿಡಿ !!
ಮಾತುಗಳು ನಾಲಿಗೆ ಬಿಟ್ಟು ಬೆರಳಿನ ತುದಿಗೆ ಬರಲು ಶುರುಮಾಡಿದ ಮೇಲೆ ತಾಳ್ಮೆ ಯಾಗಲಿ ಮಾತು ಕೇಳಿಸಿಕೊಳ್ಳುವ ಸಮಯವಾಗಲಿ ಈ ಮೆಸೇಜಿನ ಪೀಳಿಗೆಗೆ ಇಲ್ಲ.
ಇಬ್ಬರು ಇಷ್ಟು ದಿನ ಇದ್ದದ್ದು ಪ್ರೀತಿಯಲ್ಲ ಅಥವಾ ಆಕರ್ಷಣೆಯಲ್ಲಿಲ್ಲ ಬಣ್ಣದ ಮಾತುಗಳಿಗೆ ಇಬ್ಬರು ಮರುಳಾದರಾ, ಗುರಿತಪ್ಪಿದ ಗಾಳಿಪಟದಂತೆ ಇವರ ಕನಸುಗಳಿಗೆ ಮಿತಿಯೇ ಇರಲಿಲ್ಲವಲ್ಲ ಅದರ ಕತೆ ಏನಾಯ್ತು? ಸಣ್ಣ ಸಿಟ್ಟು ದೊಡ್ಡ ಬ್ರೇಕಪ್ ಗಳಿಗೆ ಕಾರಣವಾಗಿ ಸಂಬಂಧ ಅಂತ್ಯಕ್ಕೆ ಕಾರಣ.
ನಾನು ಇಷ್ಟು ಪ್ರೀತಿಸುತ್ತೇನೆ ನನ್ನ ಸಣ್ಣ ಮಾತುಕೇಳಲಿಲ್ಲ ಎಂಬ ಹಠ ಗಂಡಸಿಗೆ, ನನ್ನ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ವಾದ ಹೆಣ್ಣಿನದು. ಕೂತು ಮಾತಾಡಿದರೆ ಕ್ಷಣದ ಹೊತ್ತಿಗೆ ಬಗೆಹರಿಸಿ ಕೊಳ್ಳಬಹುದಾದ್ದು ಆದರೆ ನಾನೇ ಸರಿ ಎಂಬ ಅಹಂ ಎಂಬ ಇಬ್ಬರ ನಡುವಿನ ಗೋಡೆಯು ಮೂರು ನಾಲ್ಕು ಅಂತಸ್ತು ಮೇಲೆ ಎದ್ದು ನಿಂತಿತ್ತು. ಒಂದೆರೆಡು sry ಇಬ್ಬರ ತಪ್ಪಿಗೂ ಬಿಸಿ ಕಾಫಿ ಸಾಕ್ಷಿಯಾಗಿದ್ದರೆ ಸಾಕಿತ್ತು. ಆದರೆ ಸಣ್ಣ ಗರ್ವ ಇಬ್ಬರಿಗೂ ಇದ್ದು. ಇಬ್ಬರೂ ಮೊದಲ ಮಾತಿಗೆ ಸಿದ್ಧರಿಲ್ಲ, ಒಬ್ಬರೂ ಸೋತರೂ ಪ್ರೀತಿಯನ್ನು ಉಳಿಸಿಕೊಳ್ಳಬಹುದಿತ್ತು.! ಆದರೆ ಸೋಲುವವರು ಯಾರು??
ಕೊನೆ ಮಾತು, ಬಹುತೇಕ ಪ್ರೀತಿಗಳಿಗೆ ಅರ್ಧಕ್ಕೆ ಸಾವು ಬರಲು ಕಾರಣ ಅನುಮಾನ & ಸ್ವಾರ್ಥ. ಹೌದು, "ಪ್ರೀತಿಯಲ್ಲಿ ಬಿದ್ದ ಪ್ರತೀ ಗಂಡಸು ಸ್ವಾರ್ಥಿಯಾಗುತ್ತಾನೆ"!! ಅದು ತಪ್ಪಾ? ಇಲ್ಲ, ಅವಳೇ ತನ್ನ ಎಲ್ಲವೂ ಅಂದುಕೊಳ್ಳುವ ಹುಡುಗ ಅವಳಿಂದಲೂ ಅದೇ ನಿರೀಕ್ಷೆಯಲ್ಲಿ ಇರುತ್ತಾನೆ. ಆದರೆ ಕೆಲವೊಮ್ಮೆ ಸಮಯ ಅವನಿಗಾಗಿ ಕೊಡಲಾಗದೇ ಇದ್ದಾಗ .ಸಣ್ಣಗೆ ಬೆಂಕಿ ಪ್ರೀತಿಯಲ್ಲಿ ಶುರು, ಅವಳೂ ಅವನನ್ನೂ ಬಿಟ್ಟು ಬೇರೆಯವರೊಂದಿಗೆ ಅಗತ್ಯಕ್ಕಿಂತ ಹೆಚ್ಚು ಮಾತು & ನಗು ಶುರು ಮಾಡಿದಳೆಂದರೆ ಮೊದಲಿನ ಸಣ್ಣ ಬೆಂಕಿ ಕಾಡ್ಗಿಚ್ಚಿನಂತೆ ಹೊತ್ತಿ ಉರಿಯತ್ತೆ!.
ಮುಗೀತು ಅಲ್ಲಿಗೆ. ಅವಳಿಗೆ ನನ್ನದು ತಪ್ಪಿಲ್ಲಾ ಎಂಬ ಬಿಗಿಯಾದ ವಾದ ಇಷ್ಟೋಂದು ಅವನನ್ನು ಪ್ರೀತಿಸಿದ ಮೇಲೆ ನನ್ನನ್ನೇ ಅನುಮಾನ ದಿಂದ ಕಾಣುತ್ತಾನಲ್ಲ? ಈಗಲೇ ಹೀಗಾದರೇ ಮುಂದೇನು? ಎಂಬ ಪ್ರಶ್ನೆ ಸಹಜವಾಗಿಯೇ ಅವಳಲ್ಲಿ ಬಂದೇ ಬರುತ್ತದೆ.
ಹಾಗಾದರೆ ,ಇಲ್ಲಿ ಅವನ ಸ್ವಾರ್ಥ ಕೆಟ್ಟದ್ದ? ಇಲ್ಲ, ಅವಳ ಪ್ರೀತಿಯೂ ಸುಳ್ಳಲ್ಲ. ಸದಾ ತನ್ನೊಂದಿಗೆ, ತನಗಾಗಿ, ತನಗೋಸ್ಕರವೇ, ತಾನೂ ಹೇಳಿದಂತೆಯೇ ಅವಳ ನಡೆದುಕೊಳ್ಳದು ಕೊಳ್ಳಬೇಕೆಂಬ ಗಂಡಿನ ಹಠ ಅವಳಿಗೆ ಹಿಂಸೆ ಅನಿಸಲು ಯಾವಾಗ ಶುರುವಾಗತ್ತೋ. ಆಗ ಬ್ರೇಕಪ್ ಎಂಬ ಸಣ್ಣ ಮೊಳಕೆಯೊಡಯಲು ಶುರು ಆಗತ್ತೆ. ಇಲ್ಲಿ ದೂರಾಗಲೂ ಇಬ್ಬರಿಗೂ ಇಷ್ಟ ಇಲ್ಲ!ಗಂಡಸಿಗೆ ಯಾರಾದರು ತನ್ನ ಪ್ರೀತಿಯನ್ನು ದೂರ ಮಾಡುತ್ತಾರೆ ಅಥವಾ ಕಿತ್ತುಕೊಳ್ಳುತ್ತಾರೆ ಎಂಬ ಭಾವ ಸದಾ ಕಾಡುತ್ತಲೇ ಇರುತ್ತದೆ . ಇದೇ ಹೆಣ್ಣಿಗೆ ಅನುಮಾನಿಸುತ್ತಿದ್ದಾನೆ ಎಂದು ಅನಿಸುತ್ತದೆ. ಇವೆಲ್ಲವುದರ ಪ್ರತಿ ಫಲವೇ ಬ್ರೇಕಪ್ ನತ್ತ ಸಾಗುತ್ತೆ ಪ್ರೀತಿ!!!
ಪ್ರೀತಿಯೆಂಬುದು ಆಳ ಸಮುದ್ರದ ಮೇಲಿನ ದೋಣಿಯ ಹಾಗೆ. ಅನುಮಾನ, ಅಪನಂಬಿಕೆಗಳು ನೀರಿನಲ್ಲಿ ಇರುವ ದೋಣಿಗೆ ರಂಧ್ರಗಳನ್ನ ಮಾಡಿದ ಹಾಗೇ ಮುಳುಗದೇ ದೋಣಿಯನ್ನ ತೇಲಿಸುವುದೇ ಇಲ್ಲಿ ಇಬ್ಬರಿಗೂ ಸವಾಲಿನ ವಿಷಯ. ಪ್ರೀತಿಯೆಂಬ ಆಳ ಸಮುದ್ರದಲ್ಲಿ ತಮ್ಮ ದೋಣಿಯನ್ನ ತೇಲಿಸಿದವರಿಗಿಂತ, ಮುಳುಗಿಸಿಕೊಂಡವರೇ ಹೆಚ್ಚು ಜನ. ದಡ ಸೇರಿ ನಿಟ್ಟುಸಿರು ಬಿಟ್ಟವರು ಕೆಲವೇ ಕೆಲ ಮಂದಿ ಮಾತ್ರ...
- ಚಂದ್ರು ಎಂ ಎಲ್ ಶಿವಮೊಗ್ಗ
nice and best
ಪ್ರತ್ಯುತ್ತರಅಳಿಸಿಉತ್ತಮ ಮತ್ತು ಪ್ರಸ್ತುತ 😍 😊
ಅಳಿಸಿ