ಗಝಲ್
ರೂವಾರಿಯಾಗಿ ಜೀವ ಜೀವನದ ನಕ್ಷೆಯ
ಬರೆಸಿದವರು ನೀವು
ಮಾದರಿಯಾಗಿ ಭಾವ ಭಾವನೆಗಳ ಹತೋಟಿ ಮೆರೆಸಿದವರು ನೀವು
ಚದುರಂಗ ಆಡುವ ಚಾತುರ್ಯವನು
ಮಸ್ತಕದಲಿ ತುಂಬಿದಿರಿ
ಪದರಂಗ ಬಿಡಿಸುವ ಕೌಶಲ್ಯವನು
ಕಲಿಸಿದವರು ನೀವು
ಮುನ್ನುಡಿಯಂತೆ ಸಮರ್ಥ ಶಿಕ್ಷಣದ
ಮಹತ್ವ ತಿಳಿಸಿದಿರಿ
ಕನ್ನಡಿಯಂತೆ ನಿರ್ಮಲ ಚಿಂತನೆಯ
ಮೂಡಿಸಿದವರು ನೀವು
ಹಣದ ವ್ಯಾಮೋಹವನ್ನು ಬೆಳೆಸಿಕೊಳ್ಳದ
ಅರಿವು ನೀಡಿದಿರಿ
ಗುಣದ ಪ್ರಾಮುಖ್ಯತೆಯ ಮೆಚ್ಚಿಕೊಳ್ಳುವಂತೆ ಮಾಡಿಸಿದವರು ನೀವು
ದಾರಿದೀಪವಾಗಿ ಜವಾಬ್ದಾರಿಗಳ ನಿಭಾವಣೆ
ನಿರ್ವಹಿಸಿದಿರಿ
ನಂದಾದೀಪವಾಗಿ ಸುಜಿಯ ಅಂತರಂಗವನು ಬೆಳಗಿಸಿದವರು ನೀವು
- ಸುಜಾ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ