ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು
ಬಾಲ್ಯವಿವಾಹ ಎಂಬುದು ನಮ್ಮ ಸಮಾಜವನ್ನು ಕಾಡಿದ ಒಂದು ಸಾಮಾಜಿಕ ಸಮಸ್ಯೆಯಾಗಿದೆ. 21 ವರ್ಷದ ಒಳಗಿನ ಹುಡುಗ ಹಾಗೂ 18 ವರ್ಷದ ಒಳಗಿನ ಹುಡುಗಿಯ ನಡುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನ ಒಳಗಿದ್ದರೂ ಇಂಥಹ ಮದುವೆಗೆ ಬಾಲ್ಯವಿವಾಹ ಎಂದು ಕರೆಯುತ್ತಾರೆ.ಈ ಸಾಮಾಜಿಕ ಸಮಸ್ಯೆಯನ್ನು ತಡೆಯೋಕೆ ಕಠಿಣ ಕಾನೂನನ್ನು ಜಾರಿಗೊಳಿಸಿದರೂ ಸದ್ಯ ಇದರ ನಿಯಂತ್ರಣ ಇನ್ನು ಆಗಿಲ್ಲ. ಬಾಲ್ಯವಿವಾಹ ಮಾಡುವುದು ಕಾನೂನು ಪ್ರಕಾರ ಅಪರಾಧ.ಒಂದು ಹೆಣ್ಣು ಮದುವೆಯಾಗಬೇಕಾದರೆ ಅವಳ ದೇಹ,ಮನಸ್ಸು, ಮಾನಸಿಕ ಪ್ರಬುದ್ಧತೆ ಹಾಗೆ ಆಕೆಯ ಶಾರೀರಿಕ ಸಾಮರ್ಥ್ಯ ಬೆಳೆಯಲು 18 ವರ್ಷ ಅವಶ್ಯಕವಾಗಿ ಬೇಕೇ ಬೇಕು, ಆದರೆ ನಮ್ಮ ಹಳ್ಳಿಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ಸಂಭವಿಸುತ್ತಿವೆ ಯಾಕೆಂದರೆ ನಮ್ಮ ಹಳ್ಳಿಯಲ್ಲಿ ಬಾಲ್ಯವಿವಾಹಕ್ಕೆ ಒಳಗಾದ ಗಂಡು ಅಥವಾ ಹೆಣ್ಣಿನ ಪೋಷಕರಿಗೆ ಸರಿಯಾದ ಶಿಕ್ಷಣ ಇಲ್ಲದಿರುವುದರಿಂದ ಮತ್ತು ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿರುವುದರಿಂದ ಈ ಪಿಡುಗು ಹೆಮ್ಮರವಾಗಿ ಬೆಳೆದಿದೆ.ಈ ಕೊರೋನಾ ಸೋಂಕು ಮಕ್ಕಳ ಬಾಲ್ಯವನ್ನೇ ಕಸಿಯುತ್ತಿದೆ. 'ಯುನಿಸೆಫ್' ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಬಾಲಕಿಯರು 18 ವರ್ಷ ತುಂಬುವ ಮೊದಲೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ ಹಾಗೆ ಜಗತ್ತಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತಿರುವ ದೇಶಗಳಲ್ಲಿ ಮುಂಚೂಣಿಯಲ್ಲಿ ಬಾಂಗ್ಲಾದೇಶವಾದರೆ ನಂತರದ ಸ್ಥಾನವೇ ಭಾರತವಾಗಿದೆ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಾಲ್ಯ ವಿವಾಹ ಕಾನೂನಿನ ಭಯವಿಲ್ಲದೆ ನಡೆಯುತ್ತಿರುವುದು ಒಂದು ವಿಷಾದಕರ ಸಂಗತಿಯಾಗಿದೆ. ಮಕ್ಕಳ ಹಕ್ಕುಗಳ ಆಯೋಗದ ಪ್ರಕಾರ 2020 ಏಪ್ರಿಲ್ ನಿಂದ 2021 ಜನೇವರಿವರೆಗೆ ಸದ್ಯ ನಮ್ಮ ರಾಜ್ಯದಲ್ಲಿ ನಡೆದ ಬಾಲ್ಯ ವಿವಾಹಗಳ ಸಂಖ್ಯೆ 2180 ಆಗಿದೆ. ಈ ಕೊರೋನಾದ ಲಾಕ್ಡೌನ್ ಸಂದರ್ಭವು ಬಾಲ್ಯವಿವಾಹಕ್ಕೆ ಒಳಗಾದ ಮಕ್ಕಳಿಗೆ ಎಲ್ಲದರಿಂದ ವಂಚಿತರನ್ನಾಗಿಸಿ ಅವರ ಕನಸುಗಳನ್ನು ನುಚ್ಚುನೂರು ಮಾಡಿ ಭವಿಷ್ಯವನ್ನೇ ಕಸಿದುಕೊಂಡು ಬಿಟ್ಟಿದೆ ಅದಕ್ಕೆ, ಮೊದಲು ಮಕ್ಕಳು ಮತ್ತು ಅವರ ತಂದೆ-ತಾಯಿಗಳು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಲೇಬೇಕು ಅದರ ಜೊತೆಗೆ ಜನರು ಈ ಸಾಮಾಜಿಕ ಪಿಡುಗಿನ ಬಗ್ಗೆ ಜಾಗೃತರಾಗಿ ಎಲ್ಲಿಯಾದರೂ ಬಾಲ್ಯವಿವಾಹವು ಆಗುತ್ತಿದ್ದರೆ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಕ್ಕೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ತಲುಪಿಸಬೇಕು. ಮಕ್ಕಳ ಹಕ್ಕುಗಳ ಸಂಘಟನೆಗಳು ಮತ್ತು ಈ ಬಾಲ್ಯವಿವಾಹವನ್ನು ತಡೆಯೋಕೆ ಸರ್ಕಾರವು ನೇಮಿಸಿರುವಂತ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚೆಚ್ಚು ಕೆಲಸ ಮಾಡಿ ಬಾಲ್ಯವಿವಾಹವನ್ನು ತಡೆಯಬೇಕು. ಜನರು ಕೂಡ ಈ ಸಾಮಾಜಿಕ ಸಮಸ್ಯೆಯ ವಿರುದ್ಧ ಹೋರಾಡಿ ಮಕ್ಕಳ ಬಾಲ್ಯವನ್ನು ರಕ್ಷಿಸುವ ಕರ್ತವ್ಯವನ್ನು ಪಾಲಿಸಬೇಕು.
ಬಾಲ್ಯವಿವಾಹವನ್ನು ತಡೆಯೋಣ , ಮಕ್ಕಳ ಬಾಲ್ಯವನ್ನು ರಕ್ಷಿಸೋಣ.
ರಾಕೇಶ. ವಿ. ಪತ್ತಾರ, ಐಕೂರ
10ನೇ ತರಗತಿ, ಆದರ್ಶ ವಿದ್ಯಾಲಯ ಶಹಾಪುರ, ಯಾದಗಿರಿ ಜಿಲ್ಲೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ