ಕವನವೊಂದು ಹೀಗಿರಬೇಕು
ಮುದ್ದುಕಂದನ ನಿಷ್ಕಪಟ ನಗೆಯ ಹಾಗೆ
ಮುಂಜಾನೆ ಹುಲ್ಲ ಹಾಸಿನ ತುಷಾರಮಣಿಯಂತೆ
ಮುಸ್ಸಂಜೆ ತಂಪಿನಲಿ ಬಿರಿದ ಮಲ್ಲಿಗೆಯ ಹಾಗೆ
ಚಂದ್ರಿಕೆಗೆ ಕಂಪು ತುಂಬಿ ಘಮಘಮಿಸುವಂತೆ
ಹರೆಯದ ಒಂದಾದ ನಯನಗಳ ನೋಟದೊಲು
ಆಡದೇ ಉಳಿದ ಮಾತುಗಳ ಮಧುರ ಗೀತೆಯೊಲು
ಎದೆಯಾಳದೆ ಸದಾ ಕಾಡುವ ಅವ್ಯಕ್ತ ನೆನಪಿನಂತೆ
ಮಳೆನಿಂತ ಮೇಲೂ ತೊಟ್ಟಿಕ್ಕುವ ಹನಿಯಂತೆ
ಭಾವದ ಬಸಿರ ಹೆರಿಗೆಯಲಿ ಹಡೆದ ಹಗುರಾದಂತೆ
ಮನದ ಮೈಲಿಗೆಯ ತೊಳೆದು ಮಿಂದು ಮಡಿಯಾದಂತೆ
ಹೃದಯದ ಭಾವಗಳೆಲ್ಲ ಹೂವಾಗಿ ಮಾಲೆಯಾದಂತೆ
ಜನ್ಮಕೊಟ್ಟ ಮಗುವಿನ ನೆತ್ತಿಗೆ ಮುತ್ತಿಡುವ ಅಮ್ಮನಂತೆ
ತಲೆಯ ಮೇಲಿನ ಭಾರವನಿಳುಹಿ ನಿರುಮ್ಮಳವಾದಂತೆ
ಮನದುಮ್ಮಳವೆಲ್ಲ ಕೊಚ್ಚಿಹಾಕುವ ಉಕ್ಕಿದ ಬಿಕ್ಕಿನಂತೆ
ಕವಿಯೋ ಕಾವ್ಯವೋ ತಾಧ್ಯಾತ್ಮವಾದ ಹೊಸ ಬೆಸುಗೆಯಂತೆ
ಪ್ರತ್ಯೇಕಿಸಲಾಗದ ಭಾವ ಅನುಭಾವಗಳ ಒಸಗೆಯಂತೆ
- ಸುಜಾತಾ ರವೀಶ್, ಮೈಸೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ