" ದಢೂತಿ ಹೊಟ್ಟೆಯವಳು "
ದುಂಡು ದುಂಡಾಗಿ
ಕಬ್ಬಿನಂತೆ ಕೊಬ್ಬಿದ ಹುಡುಗಿ
ವಯಸ್ಸು ಹತ್ತೊಂಬತ್ತು
ಹೊಟ್ಟೆಯ ತೂಕ ನಲವತ್ತೊಂಬತ್ತು
'ಹೀಗಾಗಬಾರದಿತ್ತು' ಅಂತ
ಎಷ್ಟೋ ಸಲ ಅಂದುಕೊಂಡಿದ್ದಳು
ಆ ದಢೂತಿ ಹೊಟ್ಟೆಯವಳು
ನೋಡುಗರ ಕಣ್ಣಿಗೆ
ಮಾತನಾಡುವವರ ಬಾಯಿಗೆ
ಪಕ್ಕಕ್ಕೆ ಸರಿಯುವವರ ದುರ್ನಡತೆಗೆ
'ಲಕ್ವಾ ಹೊಡೆಯಲಿ ' ಅಂತ
ಅದೆಷ್ಟೋ ಬಾರಿ ದೇವರಲ್ಲಿ ಪ್ರಾರ್ಥಿಸಿದ್ದಳು
ಆ ಹುಡುಗಿ
'ಸಣ್ಣಗಾಗುತ್ತೇನೆ ' ಎಂದು
ಗೆಳೆಯರಲ್ಲಿ ಪಂಥ ಕಟ್ಟಿ ಸೋತಿದ್ದಳು
ತನ್ನ ವಯಸ್ಸಿಗೆ ಒಬ್ಬ ಹುಡುಗನಾದರೂ ತಿರುಗಿ -
- ನೋಡಲೆಂದು ದಿನವೂ ಬಟ್ಟೆ ಬದಲಿಸುತ್ತಿದ್ದಳು
ಯಾರ್ಯಾರೋ ಹೇಳಿದ ಕ್ರೀಮುಗಳನ್ನು
ಹುಡುಕಿ ತಂದು ಬಳಿದುಕೊಳ್ಳುತ್ತಿದ್ದಳು
ಆದರೂ ಆಕೆ ದಢೂತಿಯವಳೆಂದು
ಯಾರೂ ಮನಸ್ಸು ಮಾಡುತ್ತಿರಲಿಲ್ಲ
ಪಾಠ ಮಾಡುವ ಟೀಚರುಗಳು
ಪೆಟ್ಟಿಗೆ ಅಂಗಡಿ ಶೆಟ್ಟರು
ಕುರಿ ಕಾಯುವ ಹುಡುಗರು ಸಾಲದೆಂದು
ಆಕೆ ಸಾಕಿದ ನಾಯಿಮರಿಯೂ ಕೂಡ
ತನ್ನವಳು, ತನ್ನೂರಿನವಳೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲದೆ
ಕಂಡು-ಕಂಡಾಗೆಲ್ಲಾ.. ಸುಮ್ಮನೆ ಬೊಗಳುತ್ತಿದ್ದರು
ತೊಗಲಿನಡಿಯ ಕೊಬ್ಬು ಕರಗಲೆಂದು
ನಾಲ್ಕೈದು ರಗ್ಗು ಹೊದ್ದುಕೊಂಡು ಬೆವರುವಳು
ದಿನವೂ ಉರಿಯುವ ಒಲೆಯ ಮುಂದೆ ಕೂರುವಳು
ಚಾಕು ಕಂಡಾಗೆಲ್ಲಾ.. ಚೂರ್ ಚೂರು ಮಾಂಸವನ್ನೇ..
ಕೂಯ್ದು ನಾಯಿಗೆ ಹಾಕಬೇಕೆನಿಸುತ್ತಿತ್ತು
ಕೊಬ್ಬುಗಳಿಗೆ ಬಾಯಿಗಳಿದ್ದರೆ, ಒಂದೊಂದನ್ನೇ
ಸೇರಿಸಿ ಹೊಲಿದುಬಿಡಬೇಕೆನಿಸುತ್ತಿತ್ತು
ಹೊಟ್ಟೆ ಕರಗಿಸುವಂತಹ ಸೂತ್ರಗಳಿರುವ
ಎಲ್ಲಾ ಪುಸ್ತಕಗಳನ್ನು ಕೊಳ್ಳುವ ಬಯಕೆಯೂ ಬಂದು-ಹೋಗಿತ್ತು
ಇಷ್ಟೆಲ್ಲಾ ಆದ ಮೇಲೂ..
ಹೊಟ್ಟೆ ಕರಗಿಸುವ ಆಕೆಯ ಆಸೆ ಮಾತ್ರ ಹಾಗೇ ಉಳಿದಿತ್ತು!!
ಅನಂತ ಕುಣಿಗಲ್
ಬಹಳ ಸೊಗಸಾಗಿ ಹೇಳಿದ್ದೀರಿ ಆ ದಪ್ಪ ಹೊಟ್ಟೆಯ ಹುಡುಗಿಯ ಕಥೆ-ವ್ಯಥೆಯನ್ನು. ಹ್ಹ ಹ್ಹ ಹ್ಹ...
ಪ್ರತ್ಯುತ್ತರಅಳಿಸಿ