ವಿಷಯಕ್ಕೆ ಹೋಗಿ

ಅನಂತ ಅವರ 'ಮೂರನೆಯವಳು' ಕೃತಿ ಕುರಿತು ಕವಯಿತ್ರಿ ಎಂ ಆರ್ ಕಮಲ ಅವರು ಬರೆದ ಬೆನ್ನುಡಿ ಓದುಗರಿಗಾಗಿ..


ಅನಂತ ಅವರ ಹೆಚ್ಚಿನ ಕವನಗಳು ಸ್ತ್ರೀ ಕೇಂದ್ರಿತವಾದವು. ಹೆಣ್ಣಿನ ಅಂತರಂಗವನ್ನು ಹೊಕ್ಕು, ಅವಳ ಸೂಕ್ಷ್ಮ, ಸಂಕೀರ್ಣ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ.. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅಭಿವ್ಯಕ್ತಿಸುವ ರೀತಿಯಲ್ಲಿ ಇಲ್ಲಿಯ ಕವಿತೆಗಳಿವೆ. ಹೆಣ್ಣನ್ನು ಅನೇಕ ಬಗೆಯಲ್ಲಿ ಶೋಷಣೆಗೆ ಗುರಿ ಮಾಡುತ್ತಿರುವ ಪುರುಷ ಪ್ರಧಾನ ಸಮಾಜವನ್ನು ಟೀಕಿಸುವ, ಪ್ರಶ್ನಿಸುವ ಕವಿಯ ಒಳಕುದಿ ಹೆಚ್ಚಿನ ಬಾರಿ ನಿಗಿ ನಿಗಿಸುವ ಕೆಂಡದಂತೆ ಪ್ರಜ್ವಲಿಸಿ ನೇರವಾಗಿಯೇ ಎದೆಯನ್ನು ಸುಡುತ್ತದೆ. ಹೊರಗಿನ ಸಂಗತಿಗಳಿಂದ ವಿಚಲಿತನಾದ ಕವಿ ಬೇಕೆಂದೇ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಪರಂಪರೆಯಲ್ಲಿ ಕಾಣುತ್ತಲೇ ಬಂದಿದ್ದೇವೆ. .

ಹೊರಗಿನ ಚೆಲ್ಲಾಪಿಲ್ಲಿಯಾದ ಲೋಕದಿಂದಲೇ ಅನಂತ ಅವರ ಕವಿತೆಗಳ ರೂಪಕಗಳು ಹುಟ್ಟಿಕೊಂಡಿವೆ. ಹೆಣ್ಣೊಬ್ಬಳು ಕಲ್ಲು, ಬಂಡಿ, ಹೂವು, ಬುಟ್ಟಿ, ನಳ, ತಂತಿ, ನೇಗಿಲು ಹೀಗೆ ಉಪಯೋಗಕ್ಕೆ ಬರುವ ಭೌತಿಕ ವಸ್ತುಗಳಾಗಿ ಕಾಣುತ್ತಾಳೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತಾರೆ. ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಿರುವುದನ್ನು 'ಭೋಜನ'ದ ರೂಪಕದ ಮೂಲಕ ಕವಿಯು ಹೇಳುವುದು ವಿಶಿಷ್ಟವಾಗಿದೆ. ಇಡೀ ಕಪ್ಪು ಜನಾಂಗವನ್ನು ವರ್ಣ ರಾಜಕಾರಣಕ್ಕಾಗಿ ಶೋಷಣೆಗೆ ಗುರಿಪಡಿಸಿದ್ದನ್ನು ಹೇಳುವಾಗ ಮಹತ್ವದ ಆಫ್ರಿಕನ್-ಅಮೇರಿಕನ್ ಕವಯತ್ರಿ ಆಲೀಸ್ ವಾಕರ್ ಇಂತಹದ್ದೇ ರೂಪಕಕ್ಕೆ ಮೊರೆ ಹೋಗುವುದನ್ನು ನಾವಿಲ್ಲಿ ನೆನೆಯಬಹುದು. .

('ನೀನು ನೀಗ್ರೋ ಹುಡುಗಿಯೇ?'
'ಹೌದು'
'ಅದೊಂದು ರೀತಿಯ ಆಹಾರವಿರಬಹುದಲ್ಲವೇ?'
'ಹೌದು'
'ಬಿಳಿಯ ನಿನ್ನನ್ನು ತಿನ್ನುತ್ತಿದ್ದನಲ್ಲವೇ?'
'ಹೌದು!')

ಮಾತೃ ಪ್ರಧಾನ ಮೌಲ್ಯಗಳ ಹುಡುಕಾಟ ಅನಂತ ಅವರ ಕಾವ್ಯದ ಮೂಲ ಸೆಲೆ. ಇಡೀ ಜಗತ್ತನ್ನು ನಡೆಸುವ ಮಾತೃ ಶಕ್ತಿಯೊಂದು ತನ್ನನ್ನು ಕೈ ಹಿಡಿದು ಪೊರೆಯುತ್ತಿದೆ ಎನ್ನುವ ನೆಲೆಯಿಂದಲೇ ಇಲ್ಲಿಯ ಕವಿತೆಗಳು ರೂಪುಗೊಂಡಿವೆ. ತಾಯಿಯೆಂದರೆ ಬೇರೆಯಲ್ಲ.. ಹೆಣ್ಣೆಂದರೆ ಬೇರೆಯಲ್ಲ. ಅಕ್ಕ, ತಂಗಿ, ಮಗಳು, ಹೆಂಡತಿ, ಗೆಳತಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿರುವ ಹೆಣ್ಣು ತನ್ನ ಸೈರಣೆ, ಕರುಣೆ, ಮಮತೆ, ಸಹನೆಗಳಿಂದ ಮೃಗವಾಗಿರುವ ಮನುಷ್ಯನನ್ನು ಸಹನೆಯಿಂದ ತಿದ್ದಿ ತೀಡುವಳು ಎಂಬ ಅಚಲ ನಂಬಿಕೆ ಕವಿಗಿದೆ.

ಕಸಿವಿಸಿ ಮತ್ತು ಮುಜುಗರವನ್ನು ಹುಟ್ಟಿಸಿ ಸಮಾಜಕ್ಕೆ 'ಶಾಕ್' ನೀಡುವಂತೆ ಕವಿ ಸುತ್ತಲಿನ ಸೋಗಲಾಡಿತನವನ್ನು ಕೊಂಚ ಹಸಿಬಿಸಿಯಾಗೇ ಬಯಲಿಗೆಳೆಯುವ ಪ್ರಯತ್ನವನ್ನು ಮಾಡಿದ್ದಾರೆ. ಈ ಸಂಗ್ರಹದಲ್ಲಿ ಪ್ರೇಮ ಕವಿತೆಗಳಿಗೆ ಬಳಸಿರುವ ಭಾಷೆ ರಮ್ಯ ಶೈಲಿಯಲ್ಲಿದ್ದಂತೆ ತೋರುತ್ತದೆ. ಜಾನಪದ ಶೈಲಿ, ಕಥನ ಕವನದ ಧಾಟಿಯೂ ಕೆಲವು ಕವಿತೆಗಳಲ್ಲಿ ಕಾಣುತ್ತದೆ. ಹೊಸ ಕವಿಗಿರುವ ತವಕ, ಅತ್ಯುತ್ಸಾಹದ ಜೊತೆಗೆ ಕಾವ್ಯ ಕಟ್ಟುವುದರ ಬಗೆಗಿನ ಶ್ರದ್ಧೆ ಅನಂತ ಅವರಿಗೆ ಹೆಚ್ಚಲಿ ಎಂದು ಆಶಿಸುತ್ತೇನೆ.


                         - ಎಂ ಆರ್ ಕಮಲ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

Avva Pustakalaya

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು 2020 ರ ಏಪ್ರಿಲ್ 04 ರಂದು ಶ್ರೀಮಾನ್ ಲೇಟ್ ನಾರಸಯ್ಯ ಅವರ ಸ್ಮರಣಾರ್ಥವಾಗಿ ರೂಪುಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಓದುಗರ ಬಳಗವನ್ನು ಹೊಂದಿದೆ. ಇದು ಡಿಜಿಠಲ್ ಗ್ರಂಥಾಲಯವಾಗಿದ್ದು, ಓದಿನ ಅಭಿರುಚಿ ಹಬ್ಬಿಸಲು ಬಹಳಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಜುಲೈ ತಿಂಗಳಲ್ಲಿ ಪ್ರಕಟಿತ ಕೃತಿಗಳನ್ನು ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಯ ಜೊತೆಗೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಹಂಚಿ, ಅವರ ಪುಸ್ತಕಗಳನ್ನು ಅವ್ವ ಪುಸ್ತಕಾಲಯ ವೇದಿಕೆಯ ಮುಖೇನ ಓದುಗರಿಗೆ ಮುಟ್ಟಿಸಲಾಗುವುದು . ಈಗಾಗಲೇ ಅವ್ವ ಪುಸ್ತಕಾಲಯದಿಂದ ಪ್ರಧಾನ ಕಾರ್ಯದರ್ಶಿಗಳಾದ  ಯುವಲೇಖಕ ಅನಂತ ಅವರ ಮೂರು ಕೃತಿಗಳು ಪ್ರಕಟವಾಗಿದ್ದು ಅವುಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಓದುಗರು ನಮ್ಮನ್ನು ಸಂಪರ್ಕಿಸುವ ಮೂಲಕ ಪುಸ್ತಕಗಳನ್ನು ಕೊಂಡು ಓದಬಹುದು. ಮತ್ತು ನಮ್ಮ ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. 1). ಅವ್ವ ಪುಸ್ತಕಾಲಯ #189, ಕೆಂಚನಹಳ್ಳಿ ಅಂಚೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು - 572123 ಮೊ : 8548948660 Mail :  avvapustakaalaya@gmail.com 2).  Facebook....