ಮೊದಲೇ ಎಚ್ಚರಿಸುತ್ತಿದ್ದೇನೆ
ನನ್ನನ್ನು ಓದಬೇಡಿ!!
ಯಾಕೆಂದರೆ,
ನಾನು ಸರಿ ಇಲ್ಲ
ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತೇನೆ
ಅದಕ್ಕೆ ನನ್ನನ್ನು ಕವಿತೆ ಎಂಬರು
ಹೇಳಿದೆನಲ್ಲಾ.. ಓದಬೇಡಿ
ಎಲ್ಲಿಯೋ ವಿಚಾರಗಳನ್ನು
ನಾಲ್ಕು ಸಾಲಿನಲ್ಲೇ ಹಿಡಿದಿಡುತ್ತೇನೆ
ಸತ್ಯವನ್ನು ಉಸುರುತ್ತೇನೆ
ಯಾವ ಭಯವಿಲ್ಲದೆ
ಯಾರಿಗೂ ಅಂಜದೆ
ತಲೆ ಎತ್ತಿ ನಡೆಯುತ್ತೇನೆ
ಎಲ್ಲರ ಮುಂದೆಯೂ..
ಮತ್ತೆ ಯಾಕೆ ಓದುತ್ತಿದ್ದೀರಿ ನೀವು?
ನನ್ನ ಸಂಗ ಮಾಡಿದರೆ
ಬಾಂಬನ್ನು ಬಗಲಲ್ಲಿ ಇಟ್ಟುಕೊಂಡಂತೆ
ಯಾವಾಗ ಸಿಡಿಯುವುದೋ ನಾನೂ ಕಾಣೆ!
ಉಷಾರಾಗಿರಿ.. ಸಧ್ಯಕ್ಕೆ ಓದಬೇಡಿ
ನೀವು ನಿಜಕ್ಕೂ ತಪ್ಪುಮಾಡುತ್ತಿದ್ದೀರಿ!!
ನನ್ನ ಬಗ್ಗೆ ಪೂರ್ತಿ ತಿಳಿಯದ ಹೊರತು
ನನ್ನನ್ನು ಓದಬೇಡಿ ದಯವಿಟ್ಟು
ನಾನು ಪದಪುಂಜಗಳ ಕಟ್ಟು
ನ್ಯಾಯದ ತೂಕಕ್ಕೆ ತೂಗುವ ಬೊಟ್ಟು
ತಲೆಹೋದೀತು ನನ್ನನ್ನು ಮೆಚ್ಚಿದರೆ
ಅಥವಾ ತಲೆ ಕೆಟ್ಟೀತು ನನ್ನನ್ನು ಬರೆದರೆ
ಅಯ್ಯೋ ನಿಲ್ಲಿಸಿ ಪ್ಲೀಸ್..
ಶುರುವಾಯಿತು ನಿಮ್ಮ ಟೈಮ್
ಮನೆಯಲ್ಲಿ ಹೇಳಿಬಿಡಿ
ಬೇಗ ಚಟ್ಟ ಸಿದ್ಧಪಡಿಸಿಕೊಳ್ಳಿ
ನನ್ನನ್ನು ಓದಿದ ತಪ್ಪಿಗೆ
ನಿಮ್ಮನ್ನು ಈಗಲೇ ತಳ್ಳುವೆ
ಕವಿತೆ ಎಂಬ ಗುಂಡಿಯಲ್ಲಿ
ಇನ್ನೆಂದೂ ಎದ್ದೇಳಲಾರಿರಿ
ಮುಂದೆಯಾದರೂ ನನ್ನನ್ನು ಓದದಿರಿ..
✍ ಅನಂತ್ ಕುಣಿಗಲ್
ತುಂಬಾ ಸೊಗಸಾಗಿ ಬರೆದಿದ್ದೀರ ಕವಿತೆ ಎಂಬುದೆ ಹಾಗೆ ಓದಲು ಒಮ್ಮೆ ಬಿದ್ದರೆ ಎದ್ದೇಳಲು ಆಗದು ಅಷ್ಟು ಸುಂದರ ಅಮೋಘ ಅದ್ಭುತ 👏👏👏👏👌
ಪ್ರತ್ಯುತ್ತರಅಳಿಸಿ